ಭಾರತದ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಡಿಂಗ್ ಆಗಿದೆ. ಭಾರತ ಯಶಸ್ವಿಯಾಗಿ ಚಂದ್ರನ ಮೇಲೆ ತನ್ನ ಮೊದಲ ಹೆಜ್ಜೆ ಇರಿಸಿದೆ. ಚಂದ್ರಯಾನ ಯೋಜನೆಯ ಮೂರು ಮುಖ್ಯ ಉದ್ದೇಶಗಳಲ್ಲಿ ಮೊದಲನೇಯ ಉದ್ದೇಶವನ್ನು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈಗ ಇಸ್ರೋ ಚಿತ್ತ ಎರಡನೇ ಉದ್ದೇಶದತ್ತ ನೆಟ್ಟಿದೆ. ವಿಕ್ರಮ್ ಲ್ಯಾಂಡರ್ ನಂತರ ಈಗ ಪ್ರಜ್ಞಾನ ರೋವರ್ ತನ್ನ ಕಾರ್ಯಾರಂಭ ಮಾಡಲಿದೆ. ಚಂದ್ರಯಾನ -3 ಲ್ಯಾಂಡರ್ ಮಾಡ್ಯೂಲ್ ನಿನ್ನೆ ಸಂಜೆಯ 6 ಗಂಟೆ 04 ನಿಮಿಷಕ್ಕೆ ಚಂದ್ರನ ಮೇಲೆ ಇಳಿದ ತಕ್ಷಣ ಭಾರತೀಯರ ಸಂಭ್ರಮ ಮುಗಿಲುಮುಟ್ಟಿತು. ಇಸ್ರೋ ಪಾಲಿಗೆ ಅದು ಅರ್ಧ ಕೆಲಸ ಮುಗಿದಂತೆ. ಯಾಕಂದ್ರೆ ಇಸ್ರೋ ವಿಜ್ಞಾನಿಗಳ ನಿಜವಾದ ಕೆಲಸ ಸಾಫ್ಟ್ ಲ್ಯಾಂಡ್ ಆದ ಬಳಿಕವೇ ಆರಂಭವಾಗುತ್ತದೆ. ಒಂದು ಚಂದ್ರನ ದಿನ ಅಂದರೆ ಭೂಮಿಯ 14 ದಿನಗಳ ಕಾಲ ಲ್ಯಾಂಡರ್ ಒಳಗಿರೋ ಪ್ರಜ್ಞಾನ ರೋವರ್ ಕಾರ್ಯಾಚರಣೆ ನಡೆಸುತ್ತದೆ. ಈ ವೇಳೆ ಲ್ಯಾಂಡರ್ ಮತ್ತು ರೋವರ್ ನಲ್ಲಿರುವ ಐದು ವೈಜ್ಞಾನಿಕ ಉಪಕರಣಗಳಿಂದ ಬರುವ ಡೇಟಾವನ್ನು ವಿಜ್ಞಾನಿಗಳು ವಿಶ್ಲೇಷಣೆ ನಡೆಸುತ್ತಾರೆ.

ಇನ್ನು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆದಾಗ ಉಂಟಾಗುವ ಧೂಳಿನಿಂದಾಗಿ ಸೆನ್ಸಾರ್ ಅಥವಾ ಕ್ಯಾಮರಾಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇರೋದ್ರಿಂದ ಸುಮಾರು 4 ಗಂಟೆಗಳ ಕಾಲ ಪ್ರಜ್ಞಾನ ರೋವರ್ ಲ್ಯಾಂಡರ್‌ನಿಂದ ಹೊರಗೆ ಬರುವುದಿಲ್ಲ. ನಂತರ ತ್ರಿವರ್ಣ ಧ್ವಜ ಮತ್ತು ಚಕ್ರಗಳ ಮೇಲೆ ಇಸ್ರೋ ಲಾಂಛನ ಹೊಂದಿರುವ, ಆರು ಚಕ್ರಗಳ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಉಳಿಯುತ್ತದೆ. ಪ್ರತಿ ಸೆಕೆಂಡಿಗೆ 1 ಸೆಂ.ಮೀ ವೇಗದಲ್ಲಿ ಚಲಿಸುವ 26 ಕೆಜಿ ತೂಕದ ಪ್ರಜ್ಞಾನ್ ರೋವರ್, ಚಂದ್ರನ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ಕ್ಯಾನ್ ಮಾಡಲು ನ್ಯಾವಿಗೇಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ಚಂದ್ರನ ಮೇಲ್ಮೈ ಪ್ಲಾಸ್ಮಾ, ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳು, ಭೂಕಂಪನ ಅಲೆಗಳು, ಚಂದ್ರನ ಹೊರಪದರ ಮತ್ತು ಕವಚದ ರಚನೆ ಹೀಗೆ ಅನೇಕ ವಿಷಯಗಳ ಕುರಿತು ಪ್ರಜ್ಞಾನ್ ರೋವರ್ ಅಧ್ಯಯನ ನಡೆಸುತ್ತದೆ.
ಇದನ್ನು ಓದಿ : ಜೆಲ್ಲಿಫಿಶ್ ಪೇರೆಂಟಿಂಗ್…! ಮಕ್ಕಳನ್ನು ಬೆಳೆಸುವ ಹೊಸ ವಿಧಾನ…!
ಇನ್ನು ಸೌರಶಕ್ತಿ ಚಾಲಿತ ಲ್ಯಾಂಡರ್ ಮತ್ತು ರೋವರ್ ಚಂದ್ರನ ಸುತ್ತಮುತ್ತಲಿನ ಪ್ರದೇಶಗಳನ್ನು ಅಧ್ಯಯನ ಎರಡು ವಾರಗಳ ಕಾಲ ಅಧ್ಯಯನ ನಡೆಸುತ್ತವೆ. ಈ ವೇಳೆ ಪ್ರಜ್ಞಾನ್ ರೋವರ್ ಲ್ಯಾಂಡರ್ನೊಂದಿಗೆ ಮಾತ್ರ ಸಂವಹನ ನಡೆಸಬಹುದು. ಲ್ಯಾಂಡರ್ ಭೂಮಿಯೊಂದಿಗೆ ನೇರವಾಗಿ ಸಂವಹನ ನಡೆಸುತ್ತದೆ. ಇದೇ ವೇಳೆ ಚಂದ್ರಯಾನ -2 ಆರ್ಬಿಟರ್ ಅನ್ನು ಆಕಸ್ಮಿಕ ಸಂವಹನ ಪ್ರಸಾರವಾಗಿಯೂ ಬಳಸಬಹುದು ಎಂದು ಇಸ್ರೋ ಹೇಳಿದೆ. ಪ್ರಜ್ಞಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಎರಡನೇ ದಿನವು ಬದುಕುಳಿಯಬೇಕಾದರೆ, ಚಂದ್ರನ ದಕ್ಷಿಣ ಧ್ರುವದಲ್ಲಿನ ರಾತ್ರಿಯ ಮೈನಸ್ 238 ಡಿಗ್ರಿ ಸೆಲ್ಸಿಯಸ್ ಘನೀಕರಿಸುವ ತಾಪಮಾನ ತಡೆದುಕೊಳ್ಳಬೇಕು. ಲ್ಯಾಂಡರ್ ಮತ್ತು ರೋವರ್ ಎರಡೂ ಮತ್ತೊಂದು ಚಂದ್ರನ ದಿನ ಬದುಕುಳಿಯುವ ಸಾಧ್ಯತೆಯಿದೆ ಎಂದು ಇಸ್ರೋ ಹೇಳಿದೆ.

ಚಂದ್ರಯಾನ -3 ಮಿಷನ್ ಮೂರು ಪ್ರಾಥಮಿಕ ಉದ್ದೇಶಗಳನ್ನ ಹೊಂದಿದೆ. ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡಿಗ್ ಮಾಡುವುದು, ರೋವರ್ ಅನ್ನು ಚಂದ್ರನ ಮೇಲೆ ಚಲಿಸೋವಂತೆ ಮಾಡುವುಉದ ಮತ್ತು ಚಂದ್ರನ ಮೇಲಿನ ಅಂಶಗಳ ಕುರಿತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು. ಈಗಾಗಲೇ ಸಾಫ್ಟ್ ಲ್ಯಾಂಡಿಗ್ ಮಾಡಿರುವ ಇಸ್ರೋ, ಮುಂದಿನ 14 ದಿನಗಳ ಕಾಲ ರೋವರ್ ನೀಡುವ ಡೇಟಾಗಳನ್ನು ಅಧ್ಯಯನ ನಡೆಸುತ್ತದೆ. ಭಾರತ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗುವುದಕ್ಕೆ ಮುಖ್ಯ ಕಾರಣ ಅಂದರೆ ಚಂದ್ರನ ಮೇಲೆ ಶಾಶ್ವತವಾಗಿ ಕಪ್ಪು ಕುಳಿಗಳನ್ನ ಹೊಂದಿರುವ ಈ ಪ್ರದೇಶ ನೀರನ್ನು ಹೊಂದಿರುವ ಸಾಧ್ಯತೆ ಇದೆ. ಚಂದ್ರಯಾನ -3ರಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕವನ್ನ ಒಳಗೊಂಡಿರುವ ಪುರಾವೆಗಳನ್ನು ಕಂಡುಕೊಂಡರೆ, ಅದು ಸಾಕಷ್ಟು ವೈಜ್ಞಾನಿಕ ಅನ್ವೇಷಣೆಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಅನ್ನುವುದು ಇಸ್ರೋ ವಿಜ್ಞಾನಿಗಳ ಲೆಕ್ಕಾಚಾರ.
ಒಟ್ಟಾರೆಯಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಇಸ್ರೋ, ಭಾರತದ ಕೀರ್ತಿ ಪತಾಕೆಯನ್ನ ಚಂದ್ರನ ಮೇಲೂ ಹಾರಿಸಿದೆ. ಮುಂದಿನ ದಿನಗಳಲ್ಲಿ ಇಡೀ ಮನುಕುಲಕ್ಕೆ ನೆರವಾಗೋ ಅನೇಕ ಸಂಶೋಧನೆಗಳು ನಮ್ಮ ಇಸ್ರೋದಿಂದ ನಡೆಯಲಿ ಅನ್ನೋದು ನಮ್ಮ ಹಾರೈಕೆ.