ಪೋಷಕರಿಗೆ ಮಕ್ಕಳನ್ನ ಸರಿಯಾದ ರೀತಿಯಲ್ಲಿ ಬೆಳೆಸೋದೆ ಒಂದು ದೊಡ್ಡ ಜವಾಬ್ದಾರಿ ಅಂದ್ರೆ ತಪ್ಪಾಗಲಾರ್ದು. ಪೋಷಕರು ಸ್ವಲ್ಪ ಎಡವಿದ್ರೂ ಮಕ್ಕಳು ಪೋಷಕರಿಂದ ದೂರವಾಗೋ, ಕ್ರೋಧಿತರಾಗೋ ಅಥವಾ ಎದುರು ಮಾತನಾಡೋ ಹಾಗೆ ಬೆಳೆದು ನಿರ್ತಾರೆ. ಹುಟ್ಟೋ ಪ್ರತಿ ಮಗುವೂ ಕೂಡಾ ಭಿನ್ನವಾಗಿರುತ್ತೇ. ಹೀಗಾಗಿ ಪ್ರತಿ ಮಗುವನ್ನು ಕೂಡಾ ನಾವು ಭಿನ್ನವಾಗಿಯೇ, ಅದರ ಮನಸ್ಥಿತಿಗೆ ಅನುಗುಣವಾಗಿ ಬೆಳೆಸಬೇಕಾಗುತ್ತೇ. ಹೀಗಾಗಿಯೇ ಮಕ್ಕಳನ್ನ ಹೇಗೆ ನಿಭಾಯಿಸಬೇಕು ಅನ್ನೋದು ಪೋಷಕರಿಗೆ ಒಂದು ರೀತಿಯಲ್ಲಿ ಸವಾಲಿನ ಸಂಗತಿಯು ಹೌದು.
ಇನ್ನು ಮಕ್ಕಳನ್ನು ಬೆಳೆಸಲು ಅನೇಕ ಮಾರ್ಗಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಮಾರ್ಗಗಳು ಕೂಡಾ ಬಂದಿವೆ. ಅವುಗಳಲ್ಲಿ ಜೆಲ್ಲಿಫಿಶ್ ಪೇರೆಂಟಿಂಗ್ ಅನ್ನೋ ಒಂದು ವಿಧಾನ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಈ ಜೆಲ್ಲಿಫಿಶ್ ಪೇರೆಂಟಿಂಗ್ ಅನ್ನೋದು ನಮ್ಮ ಮಗು ಆತ್ಮವಿಶ್ವಾಸದಿಂದ ಬೆಳೆಯಲು ಸಹಾಯ ಮಾಡುತ್ತದೆ. ಮಗುವಿನ ಮನೋಧರ್ಮವನ್ನೇ ಈ ಜೆಲ್ಲಿಫಿಶ್ ಪೇರೆಂಟಿಂಗ್ ಬದಲಾವಣೆ ಮಾಡಿ, ಮಾನಸಿಕವಾಗಿ ಮಕ್ಕಳನ್ನು ಸದೃಡಗೊಳಿಸುತ್ತದೆ. ಅಷ್ಟಕ್ಕೂ ಈ ಜೆಲ್ಲಿಫಿಶ್ ಪೇರೆಂಟಿಂಗ್ ಅಂದರೆ ಏನು ಅನ್ನೋದನ್ನ ನೋಡೋದಾದ್ರೆ.
ಈ ಜೆಲ್ಲಿಫಿಶ್ ಪೇರೆಂಟಿಂಗ್ ಸಾಮಾನ್ಯವಾಗಿ ನಾವು ಮಕ್ಕಳನ್ನ ಬೆಳೆಸುವ ಕ್ರಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಜೆಲ್ಲಿಫಿಶ್ ಪೇರೆಂಟಿಂಗ್ ಅನ್ನೋದು ಸಾಂಪ್ರದಾಯಿಕ ನಿರಂಕುಶ ಪೋಷಕರಿಗಿಂತ ಬಹಳ ಭಿನ್ನವಾಗಿದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಜೆಲ್ಲಿಫಿಶ್ ಪೇರೆಂಟಿಂಗ್ ಬಹಳ ಜನಪ್ರಿಯವಾಗುತ್ತಿದೆ. ಜೆಲ್ಲಿಫಿಶ್ ಪೇರೆಂಟಿಂಗ್ ಪ್ರಕಾರ, ಪೋಷಕರು ಮಕ್ಕಳಿಗೆ ಕೇವಲ ಸಲಹೆಗಳನ್ನು ಮಾತ್ರ ನೀಡುತ್ತಾರೆ. ಆದರೆ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ತಮ್ಮದೇ ಆದ ಸ್ವಂತ ನಿರ್ಧಾರಗಳನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತೆಗೆದುಕೊಳ್ಳುವ ಮಕ್ಕಳು ತಮ್ಮ ನಿರ್ಧಾರದ ವಿವಿಧ ಆಯಾಮಗಳ ಕುರಿತು ಯೋಚಿಸುವುದನ್ನು ಕೂಡಾ ಕಲಿಯುತ್ತಾರೆ. ತಮ್ಮ ನಿರ್ಧಾರದಿಂದ ಎದುರಾಗುವ ಸಮಸ್ಯೆಗಳನ್ನು ತಾವೇ ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳು ಈ ಜೆಲ್ಲಿಫಿಶ್ ಪೇರೆಂಟಿಂಗ್ ನಲ್ಲಿ ಅತ್ಯಂತ ವಿರಳ ಎನ್ನಲಾಗುತ್ತದೆ.
ಇನ್ನು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಮಕ್ಕಳ ತಜ್ಞೆ ಸೋನಾಲಿ ಸರ್ಕಾರ್ ಅವರು, ಜೆಲ್ಲಿಫಿಶ್ ಪೇರೆಂಟಿಂಗ್ ತುಂಬಾ ಮೃದುವಾಗಿರುತ್ತದೆ. ಪೋಷಕರು ಪರಿಸ್ಥಿತಿ ಮತ್ತು ಮಗುವಿನ ಅಗತ್ಯತೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಪಾಲನೆಯ ಶೈಲಿಯಲ್ಲಿ ಪೋಷಕರಾದವರು ಮಕ್ಕಳಿಗೆ ಉತ್ತಮವಾದ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೇ, ಅವರ ತಪ್ಪುಗಳು ಮತ್ತು ಅನುಭವಗಳಿಂದ ಕಲಿಯುವ ಸ್ವಾತಂತ್ರ್ಯವನ್ನು ನೀಡುತ್ತಾರೆ. ಬಹುತೇಕ ಪೋಷಕರು ಮಕ್ಕಳಿಗೆ ನಿಯಮಗಳನ್ನು ಹೇರುವ ಹಾಗೆ ಈ ಪೋಷಣೆಯಲ್ಲಿ ಅದಕ್ಕೆ ಅವಕಾಶವಿರುವುದಿಲ್ಲ. ಇದು ಮಕ್ಕಳು ತಮ್ಮ ಪೋಷಕರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಭಾರತ ದೇಶದಲ್ಲಿ ಮಕ್ಕಳನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಬೆಳೆಸಲು ಪೋಷಕರು ಇಷ್ಟಪಡುತ್ತಾರೆ. ಕುಟುಂಬ, ಸಮಾಜ, ಶಿಸ್ತು, ಧರ್ಮ, ನೈತಿಕತೆ, ಆಚರಣೆ, ನಂಬಿಕೆ ಹೀಗೆ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳನ್ನು ಬೆಳೆಸಲು ಭಾರತೀಯ ಪೋಷಕರು ಆದ್ಯತೆ ನೀಡುತ್ತಾರೆ. ವಾಸ್ತವವಾಗಿ, ಭಾರತೀಯ ಮಕ್ಕಳ ಪಾಲನಾ ವಿಧಾನಗಳನ್ನು ನಿರಂಕುಶ ಪಾಲನೆಯೆಂದು ಹೇಳಲಾಗುತ್ತದೆ. ಇಲ್ಲಿ ಮಗುವಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪೋಷಕರು ಹೇರುತ್ತಾರೆ. ಹೀಗಾಗಿ ಭಾರತದಲ್ಲಿ ಮಕ್ಕಳ ಬಹುತೇಕ ನಿರ್ಧಾರಗಳನ್ನು ಪೋಷಕರೇ ತೆಗೆದುಕೊಳ್ಳುತ್ತಾರೆ.
ಭಾರತದಲ್ಲಿ ಜೆಲ್ಲಿಫಿಶ್ ಪೇರೆಂಟಿಂಗ್ ಪಾಲನೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುತೂಹಲ ಅನೇಕ ಜನರಲ್ಲಿದೆ. ನಮ್ಮ ದೇಶದಲ್ಲಿ ಮಕ್ಕಳಿಗೆ ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸ್ವಾತಂತ್ರ್ಯವನ್ನು ಪೋಷಕರು ನೀಡಿಲ್ಲ. ಭಾರತದ ಉದ್ಯೋಗ ಮಾರುಕಟ್ಟೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಪೈಪೋಟಿ ಇದೆ. ಅದಕ್ಕಾಗಿ ಮಕ್ಕಳಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೋಷಕರು ಮುಂದಾಗುತ್ತಾರೆ. ಪೋಷಕರಿಗೆ ಮಗುವಿನ ಯಶಸ್ಸಿನ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಹೀಗಾಗಿ ತಮ್ಮ ಮಕ್ಕಳಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ನಮ್ಮ ದೇಶದಲ್ಲಿ ಪೋಷಕರೇ ತೆಗೆದುಕೊಳ್ಳುತ್ತಾರೆ. ಇದು ಮಕ್ಕಳ ಮನೋವಿಕಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳು ಬದುಕಿನುದ್ದಕ್ಕೂ ಪೋಷಕರ ಮೇಲೆಯೇ ಹೆಚ್ಚು ಅವಲಂಬಿತರಾಗುತ್ತಾರೆ. ಇದರಿಂದ ಮಕ್ಕಳು ಮಾನಸಿಕವಾಗಿ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ.
ಇನ್ನು ಪೋಷಕರು ಜೆಲ್ಲಿಫಿಶ್ ಪೇರೆಂಟಿಂಗ್ ವಿಧಾನದ ಮೂಲಕ ಮಕ್ಕಳನ್ನು ಬೆಳೆಸುವುದರಿಂದ ಮಗು ಹಾಗು ಪೋಷಕರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಒಂದು ವೇಳೆ ಈ ವಿಶೇಷ ಪೇರೆಂಟಿಂಗ್ ವಿಧಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಇದರ ಕೆಲವು ನಿಯಮಗಳನ್ನಾದರೂ ಅಳವಡಿಸಿಕೊಳ್ಳುವುದು ಉತ್ತಮ. ಮಗುವಿಗೆ ಭಾವನಾತ್ಮಕ ಬೆಂಬಲವನ್ನು ನೀಡುವುದು, ಮಕ್ಕಳೊಂದಿಗೆ ಎಲ್ಲ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡುವುದು, ಮಕ್ಕಳೊಂದಿಗೆ ಅವರ ಭವಿಷ್ಯದ ನಿರ್ಧಾರಗಳ ಕುರಿತು ಚರ್ಚೆ ನಡೆಸುವುದು ಮಕ್ಕಳನ್ನ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಕುಟುಂಬದೊಂದಿಗೆ ಮಕ್ಕಳ ಬಾಂಧವ್ಯವನ್ನು ಇಮ್ಮಡಿಗೊಳಿಸುತ್ತದೆ. ಕೇವಲ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಒಂದೇ ಒಂದು ಹಠದಿಂದ ಮಕ್ಕಳ ಮೇಲೆ ಪೋಷಕರು ತಮ್ಮ ಆಸೆ, ಆಕಾಂಕ್ಷೆಗಳನ್ನು ಹೇರಬಾರದು. ಮಕ್ಕಳು ಅವರ ಇಚ್ಚೆಯ ಬದುಕನ್ನು ಮತ್ತು ಸ್ವಾತಂತ್ರ್ಯವನ್ನು ಅನುಭವಿಸುವ ಅವಕಾಶವನ್ನು ಪೋಷಕರು ಅವರಿಗೆ ನೀಡಬೇಕು. ಜೆಲ್ಲಿಫಿಶ್ ಪೇರೆಂಟಿಂಗ್ ನಲ್ಲಿ ಅಂತಹ ಅವಕಾಶ ಮಕ್ಕಳಿಗೆ ಸಿಗುತ್ತದೆ ಎಂದಾದರೆ ಅದನ್ನು ಮಕ್ಕಳಿಗೆ ನೀಡಬೇಕಲ್ಲವೇ..?