ಕುರುಕಲು ತಿಂಡಿ ತಿನ್ನಲ್ಲ, ಕರಿದ ಪದಾರ್ಥ ಮುಟ್ಟಲ್ಲ, ಮನೆ ಊಟನೇ ಮಾಡ್ತಿದ್ರೂ ದಪ್ಪ ಆಗ್ತಿದ್ದೀನಿ, ಡಯಾಬಿಟಿಸ್ ಹೇಗೆ ಬಂತು ಗೊತ್ತಿಲ್ಲ - ಕೆಲವರಿಗೆ ಈ ರೀತಿ ಪ್ರಶ್ನೆಗಳು ಕಾಡ್ತಿರುತ್ತದೆ. ಮನೆ ಊಟ ಏನೋ ಮಾಡ್ತಿರ್ತಾರೆ. ಆದರೆ ಊಟ ಮಾಡ್ತಿರೋ ಸಮಯದ ಬಗ್ಗೆ ಗಮನ ಕೊಡಲ್ಲ.
ಜೀವನಶೈಲಿ ಬದಲಾವಣೆಯೊಂದಿಗೆ ರಾತ್ರಿ ತಡವಾಗಿ ಊಟ(Dinner) ಮಾಡುವ ಅಭ್ಯಾಸವೂ ಹಲವರಿಗೆ ಸಾಮಾನ್ಯವಾಗಿದೆ. ಆದರೆ ಈ ಅಭ್ಯಾಸವೂ ದೇಹದೊಳಗಿನ ಹಾರ್ಮೋನ್ಗಳ (Hormones) ಸಮತೋಲನದ ಮೇಲೆ ಪ್ರಭಾವ ಬೀರುತ್ತದೆ ಎಂದು ಯೋಚನೆಯೂ ಮಾಡುವುದಿಲ್ಲ. ಈ ಲೇಖನದಲ್ಲಿ ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸದಿಂದ ಆಗಬಹುದಾದ ಪರಿಣಾಮಗಳ ಕುರಿತು ತಿಳಿಯೋಣ. ಇದು ನಮ್ಮ ದೇಹದ ಇನ್ಸುಲಿನ್ (Insulin) ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನೂ ತಿಳಿಯೋಣ
ಇನ್ಸುಲಿನ್ ಎಂದರೇನು?

ಇನ್ಸುಲಿನ್ (Insulin) ಎನ್ನುವುದು ಪ್ಯಾಂಕ್ರಿಯಾಸ್ (Pancreas) ಎಂಬ ಅಂಗದಿಂದ ಉತ್ಪತ್ತಿಯಾಗುವ ಒಂದು ಪ್ರಮುಖ ಹಾರ್ಮೋನ್. ನಾವು ತಿನ್ನುವ ಆಹಾರದಿಂದ ದೊರೆಯುವ ಗ್ಲೂಕೋಸ್ ಅನ್ನು (Glucose) ದೇಹದ ಕೋಶಗಳಿಗೆ ಶಕ್ತಿಯಾಗಿ (Energy) ಪೂರೈಸುವುದೇ ಇದರ ಕೆಲಸ.
ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿದ್ದರೆ ಅಥವಾ ಅದರ ಪ್ರಮಾಣ ಕಡಿಮೆಯಾದರೆ, ಗ್ಲೂಕೋಸ್ ರಕ್ತದಲ್ಲೇ ಉಳಿಯುತ್ತದೆ. ಇದರಿಂದ ಬ್ಲಡ್ ಶುಗರ್ (Blood Sugar) ಪ್ರಮಾಣ ಹೆಚ್ಚಾಗಬಹುದು ಮತ್ತು ಕಾಲಕ್ರಮೇಣ ಇನ್ಸುಲಿನ್ ರೆಸಿಸ್ಟೆನ್ಸ್ (Insulin Resistance) ಸ್ಥಿತಿಯೂ ಉಂಟಾಗಬಹುದು.
ದೇಹದ ಸರ್ಕೇಡಿಯನ್ ರಿದಮ್ (Circadian Rhythm);
ನಮ್ಮ ದೇಹದಲ್ಲಿ ನೈಸರ್ಗಿಕವಾಗಿ 24 ಗಂಟೆಗಳ ಜೈವಿಕ ಗಡಿಯಾರವೊಂದು (Biological Clock) ಕಾರ್ಯನಿರ್ವಹಿಸುತ್ತದೆ. ಇದನ್ನು ಸರ್ಕೇಡಿಯನ್ ರಿದಮ್ (Circadian Rhythm) ಎಂದು ಕರೆಯಲಾಗುತ್ತದೆ. ಇದು ನಿದ್ರೆ, ಹಾರ್ಮೋನ್ಗಳ ಉತ್ಪತ್ತಿ, ಜೀರ್ಣಕ್ರಿಯೆಯಂತಹ ಅನೇಕ ಕಾರ್ಯಕ್ರಮಗಳ ಮೇಲೆ ಪ್ರಭಾವ ಬೀರುತ್ತದೆ. ಇನ್ಸುಲಿನ್ ಸಹ ಈ ರಿದಮ್ ಅನುಸರಿಸುತ್ತದೆ. ಬೆಳಿಗ್ಗೆ ಇದರ ಕ್ರಿಯಾಶೀಲತೆ ಹೆಚ್ಚಿದ್ದು, ರಾತ್ರಿ ವೇಳೆಯಲ್ಲಿ ಸಹಜವಾಗಿ ಕಡಿಮೆಯಾಗುತ್ತದೆ.
ರಾತ್ರಿ ತಡವಾಗಿ ಊಟ ಮಾಡಿದರೆ ಏನಾಗಬಹುದು?

ರಾತ್ರಿಯಾಗುತ್ತಿದ್ದಂತೆ ನಮ್ಮ ದೇಹವು ವಿಶ್ರಾಂತಿಗೆ ಸಿದ್ಧವಾಗಿರುತ್ತದೆ. ಆ ಸಮಯದಲ್ಲಿ ಪ್ಯಾಂಕ್ರಿಯಾಸ್ (Pancreas) ಕಾರ್ಯ ನಿಧಾನವಾಗಿರುವುದರಿಂದ, ಇನ್ಸುಲಿನ್ನ ಸಂವೇದನೆ (Insulin Sensitivity) ಕಡಿಮೆಯಾಗುತ್ತದೆ. ಇದರಿಂದ, ಊಟದಿಂದ ಬಂದ ಗ್ಲೂಕೋಸ್ (Glucose) ರಕ್ತದಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ.
ದೀರ್ಘಾವಧಿಯಲ್ಲಿ ಇಂತಹ ಅಭ್ಯಾಸಗಳು ಇನ್ಸುಲಿನ್ ರೆಸಿಸ್ಟೆನ್ಸ್, ಟೈಪ್ 2 ಡಯಾಬಿಟಿಸ್ (Type 2 Diabetes) ಅಥವಾ ಮೆಟಬಾಲಿಕ್ ಅಸಮತೋಲನೆಯ (Metabolic imbalance) ಅಪಾಯವನ್ನು ಹೆಚ್ಚಿಸಬಹುದು. ಹಾರ್ಮೋನ್ಗಳಿಗೆ ಸಂಬಂಧಿಸಿದ ಕೆಲವು ಸ್ಥಿತಿಗಳು, ಉದಾಹರಣೆಗೆ PCOS, ಫ್ಯಾಟಿ ಲಿವರ್ (Fatty Liver) ಅಥವಾ ಹೈ ಬ್ಲಡ್ ಪ್ರೆಶರ್ (High Blood Pressure) – ಇವುಗಳು ಶುರುವಾಗಲು ನಾನಾ ಕಾರಣಗಳಿರಬಹುದು. ಆದರೆ ಊಟ ಮಾಡುವ ಸಮಯವೂ ಇವುಗಳ ಮೇಲೆ ಪ್ರಭಾವ ಬೀರುತ್ತದೆ.
ಆಯುರ್ವೇದದ ದೃಷ್ಟಿಕೋನ;
ಆಯುರ್ವೇದದಲ್ಲಿಯೂ ಆಹಾರ ಸೇವನೆಯ ಸಮಯ ಮತ್ತು ವಿಧಾನಕ್ಕೆ ಅತ್ಯಂತ ಮಹತ್ವ ನೀಡಲಾಗಿದೆ.
“ಸಮುಚ್ಚೈಃ ಸಮಾಸೀನಃ ಸಮದೇಹೋನ್ನ ತತ್ಪರಃ
ಕಾಲೇ ಸತ್ ಮ್ಯಾಮ್ ಲಘು ಸ್ನಿಗ್ಧಮುಷ್ಣಂ ಕ್ಷಿಪ್ರಂ ದ್ರವೋತ್ತರಮ್”
ಆಹಾರ ಸೇವಿಸುವಾಗ ಆರಾಮದಲ್ಲಿ ಕೂತು, ನಾವು ಏನು ಸೇವಿಸುತ್ತಿದ್ದೇವೆ ಎಂದು ಗಮನಕೊಟ್ಟು ತಿನ್ನಬೇಕು. ಹಾಗೆ “ಕಾಲೇ ಸತ್” ಅಂದರೆ ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಶರೀರದ ಜೀರ್ಣಕ್ರಿಯೆ ಮತ್ತು ಶಕ್ತಿ ನಿರ್ಮಾಣಕ್ಕೆ ಸಹಾಯಕವಾಗುತ್ತದೆ ಎಂದು ಈ ಶ್ಲೋಕ ಹೇಳುತ್ತದೆ.
ರಾತ್ರಿ ತಡವಾಗಿ ಊಟ ಮಾಡುವುದು ದೇಹದ ನೈಸರ್ಗಿಕ ಸಮಯಕ್ಕೆ ವಿರುದ್ಧವಾಗುತ್ತದೆ ಎಂದು ಆಯುರ್ವೇದ ಸ್ಪಷ್ಟವಾಗಿ ಸೂಚಿಸುತ್ತದೆ. ಹೀಗಾಗಿ ರಾತ್ರಿ ಊಟವನ್ನು ಸಾಧ್ಯವಾದಷ್ಟೂ 8 ಗಂಟೆಯೊಳಗೆ ಮುಗಿಸಿಕೊಳ್ಳಿ. ನೀವು ಮಲಗುವ ಮತ್ತು ನಿಮ್ಮ ಊಟದ ಸಮಯಕ್ಕೂ ಎರಡು ಗಂಟೆಗಳ ಕಾಲ ಅಂತರವಿರಲಿ. ಈ ಚಿಕ್ಕ ಬದಲಾವಣೆಗಳಿಂದ ಕೆಲವು ವಾರಗಳಲ್ಲಿ ನಿಮ್ಮ ನಿದ್ರೆ ಹಾಗೂ ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿಯಾಗುತ್ತದೆ.
Read this also – Sleeping; ರಾತ್ರಿ ಒಳ್ಳೆ ನಿದ್ರೆ ಮಾಡುದ್ರೂ ಮಧ್ಯಾಹ್ನ ಮಲಗೋ ಅಭ್ಯಾಸ ಇದ್ಯಾ!?
ನೈಟ್ ಶಿಫ್ಟ್ ಕೆಲಸ ಮಾಡುವವರು ಏನು ಮಾಡಬಹುದು?
ನೈಟ್ ಶಿಫ್ಟ್ ಮಾಡುವವರಲ್ಲಿ ದೇಹದ ಸರ್ಕೇಡಿಯನ್ ರಿದಮ್ (Circadian Rhythm) ಭಾಗಶಃ ಬದಲಾಗುತ್ತದೆ. ಈ ಸಮಯದಲ್ಲಿ ದೇಹದ ಜೈವಿಕ ಗಡಿಯಾರ ಗೊಂದಲದಲ್ಲಿರಬಹುದು, ಇದರಿಂದ ಇನ್ಸುಲಿನ್ನ ಸಂವೇದನೆ (Insulin Sensitivity) ಕಡಿಮೆಯಾಗುವ ಸಾಧ್ಯತೆ ಇದೆ. ಅಧ್ಯಯನಗಳು ಸಹ ಇದನ್ನು ಸೂಚಿಸುತ್ತವೆ. ನೈಟ್ ಶಿಫ್ಟ್ ಕೆಲಸಗಾರರಲ್ಲಿನ ಇನ್ಸುಲಿನ್ ಸೆನ್ಸಿಟಿವಿಟಿ ಸಾಮಾನ್ಯ ವೇಳಾಪಟ್ಟಿಯವರಿಗಿಂತ ಕಡಿಮೆಯಾಗಿರುತ್ತದೆ.
ಶಿಫ್ಟ್ ಆರಂಭಕ್ಕೂ ಮುಂಚೆ (ಸಂಜೆ 6–7 ಗಂಟೆ) ಮುಖ್ಯ ಊಟ ಮುಗಿಸಿಕೊಳ್ಳಿ. ರಾತ್ರಿ ವೇಳೆಯಲ್ಲಿ ಹಗುರವಾದ ಆಹಾರ ಸೇವಿಸಿ. ಮಧ್ಯರಾತ್ರಿ ಹೆಚ್ಚು ಕಾರ್ಬೋಹೈಡ್ರೇಟ್ ಆಹಾರ ಸೇವನೆ ತಪ್ಪಿಸಿ. ಪ್ರತಿ ದಿನವೂ ಸಾಧ್ಯವಾದರೆ ಒಂದೇ ಸಮಯಕ್ಕೆ ನಿದ್ರೆ ಹೋಗುವ ಅಭ್ಯಾಸ ಬೆಳೆಸಿಕೊಳ್ಳಿ.
ನಾವು ದೇಹದ ನೈಸರ್ಗಿಕ ಸಮಯವನ್ನು ಗೌರವಿಸಿದರೆ, ದೇಹವೂ ನಮಗೆ ಉತ್ತಮ ನಿದ್ರೆ, ಶಕ್ತಿ ಮತ್ತು ಸಮಗ್ರ ಆರೋಗ್ಯದ ರೂಪದಲ್ಲಿ ಪ್ರತಿಫಲ ನೀಡುತ್ತದೆ.
ಸೂಚನೆ – ಈ ಲೇಖನವು ವೈದ್ಯಕೀಯ ಸಲಹೆಯನ್ನು ನೀಡುವುದಿಲ್ಲ. ಇದು ಸಾಮಾನ್ಯ ಆರೋಗ್ಯದ ಮಾಹಿತಿ ಮತ್ತು ಜೀವನಶೈಲಿಯ ತಿಳುವಳಿಕೆಗೆ ಮಾತ್ರ. ನಿಮಗೆ ಡಯಾಬಿಟಿಸ್, ಹಾರ್ಮೋನಲ್ ಅಸಮತೋಲನ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.










