Detox; ದೀಪಾವಳಿ ಸಡಗರ ಮುಗಿಯಿತು. ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ಕುರುಕಲು ತಿಂಡಿಗಳು, ಹಬ್ಬದೂಟ ಎಲ್ಲಾ ಸವಿದು ಸಂಭ್ರಮಿಸಿದ್ದೂ ಆಯಿತು. ಇದೆಲ್ಲಾ ಆದ ಬಳಿಕ ದೇಹ ಭಾರವಾಗುವುದು, ಹೊಟ್ಟೆ ಉಬ್ಬಿದಂತೆ ಅನಿಸುವುದು ಸಹಜ. ಆದರೆ ಇದನ್ನು ಸರಿ ಮಾಡಿಕೊಳ್ಳುವ “ಸ್ವಾಭಾವಿಕ ಡಿಟಾಕ್ಸ್ ವ್ಯವಸ್ಥೆ” (Natural Detox System) ನಮ್ಮ ದೇಹದಲ್ಲೇ ಇದೆ. ಅಂದರೆ ನಮ್ಮ ಯಕೃತ್ (Liver), ಮೂತ್ರಪಿಂಡಗಳು (Kidneys) ಮತ್ತು ಗಟ್ (Gut) – ಇವುಗಳು ಸಹಜವಾಗಿ ದೇಹದಿಂದ ತ್ಯಾಜ್ಯ ಮತ್ತು ವಿಷಕಾರಿ ಅಂಶಗಳನ್ನು (Waste and toxin) ಹೊರಹಾಕುವ ಕೆಲಸ ಮಾಡುತ್ತವೆ.
ಹಬ್ಬದ ಭರ್ಜರಿ ಭೋಜನ ನಂತರ ನಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳಲು ನಾವು ಮಾಡಬೇಕಿರುವುದು ಇಷ್ಟೇ – ದೇಹದ ಸ್ವಾಭಾವಿಕ ಡಿಟಾಕ್ಸ್ ವ್ಯವಸ್ಥೆಗೆ ಸರಿಯಾದ ಆಹಾರ ನೀಡಿ ಅದರ ಕಾರ್ಯವನ್ನು ಉತ್ತೇಜಿಸಬೇಕು. ಅದು ಹೇಗೆ ಎಂದು ಒಂದೊಂದಾಗಿ ನೋಡುತ್ತಾ ಹೋಗೊಣ…
1 ನೀರಿಗೆ ನಿಂಬೆ ರಸ ಹಾಕಿ ಕುಡಿಯುವುದು (Lemon Water)

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ನಿಂಬೆ ರಸ ಹಾಕಿ ಕುಡಿಯುವುದರಿಂದ ದೇಹವನ್ನು ರಿಹೈಡ್ರೇಟ್ (Rehydrate) ಮಾಡಬಹುದು. ನಿಂಬೆ ರಸದಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಸ್ ಯಕೃತ್ (Liver) ಮತ್ತು ರೋಗನಿರೋಧಕ ಶಕ್ತಿಗೆ ಸಹಕಾರಿಯಾಗುತ್ತವೆ.
ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ತಾಜಾ ನಿಂಬೆಹಣ್ಣಿನ ರಸ ಸೇರಿಸಿ, ಬೇಕಿದ್ದರೆ ಒಂದು ಚಿಟಿಕೆ ಅರಿಶಿಣ, ಜೇನುತುಪ್ಪ ಸೇರಿಸಿ ಕುಡಿಯಬಹುದು.
2. ಸಾಕಷ್ಟು ನೀರು ಕುಡಿಯಿರಿ
ದೇಹದ ನಂ.1 ಡಿಟಾಕ್ಸ್ (Detox) ವಿಧಾನ ಎಂದರೇ ನೀರು. ದೇಹದ ಪ್ರತಿಯೊಂದು ಶುದ್ಧೀಕರಣ ಕ್ರಿಯೆಗೂ ನೀರು ಅಗತ್ಯ. ನೀರು ಕುಡಿಯುವುದರಿಂದ ಮೂತ್ರಪಿಂಡಗಳ (Kidneys) ಮೂಲಕ ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಕರುಳಿನ (Intestines) ಚಲನೆ ಸುಧಾರಿಸಿ, ಮಲವಿಸರ್ಜನೆ (Bowel movement) ಸುಗಮಗೊಳಿಸುತ್ತದೆ. ದೇಹದ ಪ್ರತಿಯೊಂದು ಕೋಶಕ್ಕೂ (Cell) ಆಮ್ಲಜನಕ ಮತ್ತು ಪೋಷಕಾಂಶಗಳನ್ನು (Nutrients) ತಲುಪಿಸಲು ಸಹಾಯ ಮಾಡುತ್ತದೆ. ದಿನಕ್ಕೆ 2.5 ರಿಂದ 3 ಲೀಟರ್ ನೀರು ಕುಡಿಯಿರಿ. ಬೇಕಿದ್ದರೆ ನೀರಿಗೆ ನಿಂಬೆಹಣ್ಣಿನ ಹೊಳುಗಳು, ಸೌತೆಕಾಯಿ, ಪುದೀನ ಹಾಕಿಕೊಂಡು ಕುಡಿಬಹುದು.
3. ಹಗುರವಾದ, ಫೈಬರ್ ಹೆಚ್ಚಿರುವ ಆಹಾರ ಸೇವಿಸಿ

ದೀಪಾವಳಿಯ ನಂತರ ಹಗುರವಾದ ಆಹಾರ ತಿಂದರೆ ಅದು ಹೊಟ್ಟೆಗೆ ವಿಶ್ರಾಂತಿ ನೀಡಿದಂತೆ. ಫೈಬರ್ (Fiber) ದೇಹದ ಒಳಗಿನ ವಿಷಕಾರಿ ಅಂಶಗಳನ್ನು ಹೊರಹಾಕಿ, ಕೊಲೆಸ್ಟ್ರಾಲ್ (Cholesterol) ಕಡಿಮೆ ಮಾಡುತ್ತದೆ ಮತ್ತು ಗಟ್ ಆರೋಗ್ಯ (Gut Health) ಕಾಪಾಡುತ್ತದೆ. ಹೀಗಾಗಿ ಸೌತೆಕಾಯಿ, ಪಾಲಕ್, ಕ್ಯಾರೆಟ್, ಸೊರೆಕಾಯಿ, ಬೂದಗುಂಬಳ ಸೇವಿಸಿ. ಬ್ರೌನ್ ರೈಸ್, ರಾಗಿ, ನವಣೆ (Bajra), ಓಟ್ಸ್, ಪೋಹ, ಬಳಸಿ ತಯಾರಿಸಿದ ಆಹಾರ ಸೇವಿಸಿ. ಮೂಂಗ್ ದಾಲ್ ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಪ್ರೋಟೀನ್, ಹಗುರ ಎನಿಸುವ ಮೂಂಗ್ ದಾಲ್ ಕಿಚಡಿ ಸೇವಿಸಿ. ಪಪ್ಪಾಯಿ, ಸೇಬು, ದಾಳಿಂಬೆ ಕೂಡ ಒಳ್ಳೆಯದು.
4. ಡಿಟಾಕ್ಸ್ (Detox) ಪ್ರಕ್ರಿಯೆಗೆ ಸಹಾಯ ಮಾಡುವ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ
ನಮ್ಮ ಅಡಿಗೆಮನೆಯಲ್ಲೇ ಇರುವ ಮಸಾಲೆಗಳು ಔಷಧಿಯಂತೆ ಕೆಲಸ ಮಾಡುತ್ತವೆ. ಅವು ಜೀರ್ಣಕ್ರಿಯೆ ಸುಧಾರಿಸುತ್ತವೆ, ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತವೆ ಮತ್ತು ಯಕೃತ್ ಆರೋಗ್ಯಕ್ಕೂ (Liver Health) ಸಹಾಯ ಮಾಡುತ್ತವೆ. ಅವುಗಳೆಂದರೇ –
ಶುಂಠಿ (Ginger): ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತದೆ, ರಕ್ತಸಂಚಾರ ಹೆಚ್ಚಿಸಿ ಲಿವರ್ ಕಾರ್ಯವನ್ನು ಚುರುಕಾಗಿಸುತ್ತದೆ.
ಅರಿಶಿಣ (Turmeric): ಇದರಲ್ಲಿರುವ ಕರ್ಕುಮಿನ್ (Curcumin) ಎಂಜೈಮ್ಗಳನ್ನು ಸಕ್ರಿಯಗೊಳಿಸಿ ಲಿವರ್ನಿಂದ ವಿಷಕಾರಕ ಅಂಶಗಳನ್ನು ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ.
ಧನಿಯಾ (Coriander Seeds): ಮೂತ್ರದ ಪ್ರಮಾಣ ಹೆಚ್ಚಿಸಿ ಮೂತ್ರಪಿಂಡಗಳ ಡಿಟಾಕ್ಸ್ ಕಾರ್ಯ ಸುಧಾರಿಸುತ್ತದೆ.
ಜೀರಿಗೆ (Cumin): ಆಸಿಡ್, ಉಬ್ಬರ ಕಡಿಮೆ ಮಾಡಿ ಜೀರ್ಣಕ್ರಿಯೆ ಸುಧಾರಿಸುತ್ತದೆ.
5. ದೇಹಕ್ಕೆ ವಿಶ್ರಾಂತಿ ನೀಡಿ
ಡಿಟಾಕ್ಸ್ (Detox) ಅಂದರೆ ಕೇವಲ ಆಹಾರವಲ್ಲ, ನಿಮ್ಮ ಜೀವನಶೈಲಿಯೂ ಮುಖ್ಯ. 7–8 ಗಂಟೆಗಳ ನಿದ್ರೆ ಮಾಡಿ, ದೇಹ ಪುನರುಜ್ಜೀವನಗೊಳ್ಳುತ್ತದೆ. ದೈಹಿಕ ಚಟುವಟಿಕೆ ಮಾಡಿ, ಪ್ರಾಣಾಯಾಮ ಮಾಡಿ, ಒತ್ತಡ ಕಡಿಮೆಯಾದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ.
ದೀಪಾವಳಿಯ ನಂತರದ ಡಿಟಾಕ್ಸ್ ಎಂದರೆ ದೇಹಕ್ಕೆ ಶಿಕ್ಷೆ ನೀಡುವುದು ಅಲ್ಲ, ಅದು ದೇಹಕ್ಕೆ ವಿಶ್ರಾಂತಿ ಮತ್ತು ಬೆಂಬಲ ನೀಡುವುದಾಗಿದೆ.










