ಭಾರತದಲ್ಲಿರುವ ಅತ್ಯಂತ ವಿಸ್ತಾರವಾದ ಮರುಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಥಾರ್ ಮರುಭೂಮಿ ಈ ಶತಮಾನದ ಅಂತ್ಯಕ್ಕೆ ಹಸಿರಾಗಿ ಪರಿವರ್ತನೆಯಾಗಲಿದೆ ಎಂಬ ಅಂಶವನ್ನು ಭಾರತೀಯ ಸಂಶೋಧಕರ ವರದಿ ಹೇಳಿದೆ.
ಸಂಶೋಧಕರ ಪ್ರಕಾರ, ಭಾರತದಲ್ಲಾಗುತ್ತಿರುವ ಹವಾಮಾನ ಬದಲಾವಣೆಯಿಂದಾಗಿ ಈ ಮಹತ್ವದ ಪರಿವರ್ತನೆಯಾಗಲಿದ್ದು, ಜಗತ್ತಿನಲ್ಲಿರುವ ಹಲವು ಮರುಭೂಮಿಗಳು ತಾಪಮಾನದ ಹೆಚ್ಚಳಕ್ಕೆ ವಿಸ್ತಾರಗೊಂಡರೆ, ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿರುವ ಥಾರ್ ಮರುಭೂಮಿಯಲ್ಲಿ ಹಸಿರು ಮೂಡಲಿದೆ. ಥಾರ್ ಮರಭೂಮಿಯ ಒಂದಷ್ಟು ಪ್ರದೇಶಗಳಲ್ಲಿ ಹಸಿರು ಆವರಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಜರ್ನಲ್ ಅರ್ಥ್ ಫ್ಯೂಚರ್ನಲ್ಲಿ ಪ್ರಕಟವಾಗಿರುವ ವರದಿಯೊಂದು, ಥಾರ್ ಮರುಭೂಮಿಯ ಬಗ್ಗೆ ಅನಿರೀಕ್ಷಿತ ದೃಷ್ಟಿಕೋನವನ್ನು ನೀಡಿದೆ. ಹವಾಮಾನ ಮಾದರಿಯ ಸಿಮ್ಯುಲೇಶನ್ಗಳ ಸಂಯೋಜನೆಯನ್ನು ಬಳಸಿಕೊಳ್ಳುವ ಮೂಲಕ, ಭಾರತದ ವಾಯುವ್ಯ ಪ್ರದೇಶಗಳಲ್ಲಿ ಸರಾಸರಿ ಮಳೆಯು 1901 ಮತ್ತು 2015 ರ ನಡುವೆ 1050 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ. ಈ ಮಳೆಯು ಶತಮಾನದ ಅಂತ್ಯಕ್ಕೆ 50200 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಭಾರತದ ಮಾನ್ಸೂನ್ನ ಪೂರ್ವದ ಬದಲಾವಣೆಯು, ಭಾರತದ ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಶುಷ್ಕ ಪರಿಸ್ಥಿತಿಗಳಿಗೆ ಪ್ರಮುಖ ಅಂಶವಾಗಿದೆ. ಇನ್ನು ಐತಿಹಾಸಿಕವಾಗಿ, ಈ ಪ್ರದೇಶಗಳು ಸಿಂಧೂ ಕಣಿವೆಯ ನಾಗರಿಕತೆಗಳಿಗೆ ಪೂರಕವಾಗಿ, ಮಳೆಗಾಲ ಆಶ್ರಿತವಾಗಿದ್ದವು. ಹೀಗಾಗಿ ಈ ಶತಮಾನದ ಅಂತ್ಯದ ವೇಳೆಗೆ ಥಾರ್ ಮರುಭೂಮಿಯಲ್ಲಿ ಹಸಿರು ವಿಸ್ತರಣೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಂಶೋಧಕರಾದ ಬಿ.ಎನ್.ಗೋಸ್ವಾಮಿ ಅವರ ಪ್ರಕಾರ, ಭಾರತದ ಮಾನ್ಸೂನ್ ವಾಯುಗುಣದ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಂಡರೆ, ಈ ವಾಯುಗುಣವು ಥಾರ್ ಮರುಭೂಮಿಯನ್ನು ಹೇಗೆ ಹಸಿರಾಗಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಹಿಂದೂ ಮಹಾಸಾಗರದಲ್ಲಿನ ಬೆಚ್ಚಗಿನ ನೀರಿನ ವಿಸ್ತರಣೆಯು, ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ. ಇದು ITCZನ ಪಶ್ಚಿಮದ ಕಡೆಗೆ ಪಲ್ಲಟಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ, ಬೇಸಿಗೆಯ ತಿಂಗಳುಗಳಲ್ಲಿ ಭಾರತದ ಮತ್ತಷ್ಟು ಪಶ್ಚಿಮಕ್ಕೆ ಮಳೆಯನ್ನು ತರುತ್ತದೆ. ಈ ವಿದ್ಯಮಾನವು ಭಾರತೀಯ ಮಾನ್ಸೂನ್ಗೆ ವಿಶಿಷ್ಟವಾಗಿದೆ ಮತ್ತು ವಾಯುವ್ಯ ಭಾರತದಲ್ಲಿ ಅರೆ-ಶುಷ್ಕ ಪ್ರದೇಶಗಳ ಸಂಭಾವ್ಯ ಹಸಿರೀಕರಣಕ್ಕೆ ಇದು ನಿರ್ಣಾಯಕವಾಗಿದೆ. ಈ ಪ್ರವೃತ್ತಿಯು ಈ ಪ್ರದೇಶದಲ್ಲಿ ಗಮನಾರ್ಹವಾದ ಕೃಷಿ ಮತ್ತು ಸಾಮಾಜಿಕ-ಆರ್ಥಿಕ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ಬಿ.ಎನ್.ಗೋಸ್ವಾಮಿ ಹೇಳಿದ್ದಾರೆ.

ಇನ್ನು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ ಪಿ.ವಿ.ರಾಜೇಶ್ ನೇತೃತ್ವದ ಸಂಶೋಧನಾ ತಂಡವು, ಕಳೆದ 50 ವರ್ಷಗಳಲ್ಲಿ ದಕ್ಷಿಣ ಏಷ್ಯಾದ ಹವಾಮಾನ ಡೇಟಾವನ್ನು ಸಂಗ್ರಹಿಸಿದೆ. ಈ ಸಂಶೋಧನಾ ತಂಡವು, ಮಾನ್ಸೂನ್ ಅವಧಿ ಮತ್ತು ಬದಲಾವಣೆಗಳು, ಹಸಿರುಮನೆ ಅನಿಲ ಸನ್ನಿವೇಶಗಳು, ಭವಿಷ್ಯದ ಬದಲಾವಣೆಗಳು, ಸಮುದ್ರದ ಮೇಲ್ಮೈ ತಾಪಮಾನದ ಡೇಟಾವನ್ನು ವಿಶ್ಲೇಷಣೆ ಮಾಡಿದ್ದು, ಭಾರತೀಯ ಮಾನ್ಸೂನ್ ವಾಸ್ತವವಾಗಿ ಪಶ್ಚಿಮಕ್ಕೆ ವಿಸ್ತರಿಸುತ್ತಿದೆ. ಇದು ಐತಿಹಾಸಿಕ ಅವಧಿಯಲ್ಲಿ ಈಶಾನ್ಯ ಭಾರತದಲ್ಲಿನ ಸರಾಸರಿ ಮಳೆಯಲ್ಲಿ 10 ಪ್ರತಿಶತದಷ್ಟು ಇಳಿಕೆಗೆ ಮತ್ತು ಪಶ್ಚಿಮ ಮತ್ತು ವಾಯುವ್ಯ ಭಾರತದಲ್ಲಿ 25 ಪ್ರತಿಶತದಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಪ್ರದೇಶದಲ್ಲಿ ಹೆಚ್ಚಿದ ಮಳೆಯು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಭೂದೃಶ್ಯವನ್ನು ಪರಿವರ್ತನೆಗೊಳಿಸುವುದರಿಂದ, ಆಹಾರ ಉತ್ಪಾದಕತೆಯಲ್ಲಿ ಗಣನೀಯ ಸುಧಾರಣೆಗಳನ್ನು ತರುತ್ತದೆ. ಈ ಪರಿವರ್ತನೆ ಅನೇಕ ಪರಿಣಾಮಗಳನ್ನು ಬೀರುತ್ತದೆ.
ಇನ್ನು ಈ ಅನಿರೀಕ್ಷಿತ ಭೌಗೋಳಿಕ ಪರಿವರ್ತನೆ ಅನೇಕ ಅವಕಾಶಗಳನ್ನು ಒದಗಿಸುತ್ತದೆಯಾದರೂ, ಇನ್ನೊಂದೆಡೆ ಕಳವಳವನ್ನು ಉಂಟುಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಥಾರ್ ಮರುಭೂಮಿಯು ಹಸಿರು ಭೂದೃಶ್ಯವಾಗಿ ರೂಪಾಂತರಗೊಳ್ಳುವುದರಿಂದ, ಅದರ ಪರಿಸರ ವ್ಯವಸ್ಥೆಯ ಸೂಕ್ಷ್ಮ ಸಮತೋಲನ ಮತ್ತು ಸ್ಥಳೀಯ ಸಮುದಾಯಗಳ ಮೇಲೆ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಈ ಕುರಿತು ಕೂಡಾ ಸಂಶೋಧನೆ ನಡೆಯಬೇಕಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಒಟ್ಟಾರೆಯಾಗಿ ಭಾರತದ ಥಾರ್ ಮರುಭೂಮಿ ಹಸಿರು ಪ್ರದೇಶವಾಗಿ ಪರಿವರ್ತನೆಯಾಗುವುದು ಅನೇಕ ಸಾಧಕ-ಬಾಧಕಗಳನ್ನು ಒಳಗೊಂಡಿದೆ. ಭಾರತದ ಥಾರ್ ಮರುಭೂಮಿಯಲ್ಲಿ ಹಸಿರು ಹೆಚ್ಚಾಗುವುದರಿಂದ, ಮಂಗೋಲಿಯಾದಿಂದ ವಾಯುವ್ಯ ಭಾರತಕ್ಕೆ ಬರುವ ಮಿಡತೆಗಳ ಕಾಟ ಹೆಚ್ಚಾಗಿ, ಅದರ ಪರಿಣಾಮ ಭಾರತದ ಇತರೆ ಹಸಿರು ವಲಯಗಳ ಮೇಲೂ ಉಂಟಾಗಿ, ಬೆಳೆ ನಾಶವಾಗುವ ಅಪಾಯವಿದೆ. ಥಾರ್ ಮರುಭೂಮಿ ಮಿಡತೆಗಳ ಆವಾಸ ಸ್ಥಾನವಾಗಿ ಬದಲಾದರೆ ಅದರ ಅಪಾಯ ಇಡೀ ಉತ್ತರ ಭಾರತದ ಮೇಲಾಗಲಿದೆ. ಹೀಗಾಗಿ ಈ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಬೇಕಿದೆ ಎಂದು ಕೆಲ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ದಿನಾ ಮೇಕಪ್ ಮಾಡ್ಕೋತಿರಾ..? ಹಾಗಾದ್ರೆ ಈ ವಿಷಯಗಳನ್ನ ತಪ್ಪದೇ ತಿಳಿದುಕೊಳ್ಳಿ..!