ನಿದ್ದೆ ಅನ್ನೋದು ಪ್ರತಿಯೊಬ್ಬರಿಗೂ ಅವಶ್ಯಕ. ಒಳ್ಳೆ ನಿದ್ದೆ ಮಾಡುದ್ರೆ ಎಷ್ಟೋ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತೆ. ಆದ್ರೆ ಇತ್ತೀಚಿನ ದಿನದಲ್ಲಿ ತುಂಬಾ ಜನರು ರಾತ್ರಿ ಸಮಯ ನಿದ್ದೆ ಮಾಡಲು(Insomnia) ಪರದಾಡ್ತಿದ್ದಾರೆ. ಇದ್ರಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಶುರುವಾಗ್ತಿದೆ. ರಾತ್ರಿ ಹೊತ್ತು ಒಳ್ಳೆ ನಿದ್ದೆ ಬರದೇ ಇರೋದಕ್ಕೆ ಮಖ್ಯವಾಗಿ ಜನರು ಮಾಡ್ತಿರೋ ತಪ್ಪುಗಳೇನು? ಅವುಗಳನ್ನು ಹೇಗೆ ಸರಿ ಮಾಡ್ಕೊಬೇಕು ಅನ್ನೋದನ್ನ ಯೋಗಾತ್ಮ ಶ್ರೀ ಹರಿ ಅವರು ಜಿಎಸ್‌ಎಸ್ ಮಾಧ್ಯಮ ಯೂಟ್ಯೂಬ್ ವಾಹಿನಿಯಲ್ಲಿ ತಿಳಿಸಿದ್ದಾರೆ. ಅವರು ಯಾವೆಲ್ಲಾ ವಿಚಾರಗಳ ಬಗ್ಗೆ ಹೇಳಿದ್ದಾರೆ ಅನ್ನೋದನ್ನ ಈ ವರದಿಯಲ್ಲಿ ನೋಡೋಣ.
ಊಟ – ರಾತ್ರಿ ಸಮಯ ತುಂಬಾ ಜಾಸ್ತಿ ಅನಿಸೋ, ತುಂಬಾ ಜಿಡ್ಡಿನ ಪದಾರ್ಥ, ಹೆಚ್ಚು ಖಾರ, ಉಪ್ಪು, ಹುಳಿ ಇರೋ ಪದಾರ್ಥಗಳನ್ನ ತಿಂದಾಗ, ಡ್ರಿಂಕ್ಸ್ ಮಾಡುವ ಅಭ್ಯಾಸ ಇರುವವರು ಅದರ ಸೈಡ್ಸ್ ಗೆ ಹೊಟ್ಟೆ ಭಾರ ಅನಿಸೋ ಆಹಾರವನ್ನು ಸೇವಿಸಿದಾಗ ಇವುಗಳು ನಿದ್ದೆಗೆ ತೊಂದರೆ ಮಾಡುತ್ತೆ ಎಂಬುದು ಶ್ರೀ ಹರಿ ಅವರ ಮಾತು. ಜೊತೆಗೆ ರಾತ್ರಿಯ ಊಟಕ್ಕೂ, ಮಲಗುವ ಸಮಯಕ್ಕೂ ಅಂತರವಿಲ್ಲ ಎಂದಾಗಲೂ ನಿದ್ದೆ ಬಾರದೇ ಒದ್ದಾಡಬೇಕು ಎಂದು ಅವರು ಹೇಳುತ್ತಾರೆ. ರಾತ್ರಿ ಒಳ್ಳೆ ನಿದ್ದೆಗೆ ಎಂಥಹ ಆಹಾರ ತಿನ್ನಬೇಕು ಎಂದು ಶ್ರೀಹರಿ ಅವರು ಹೇಳುವುದು ಹೀಗೆ – ರಾತ್ರಿ ಸಮಯ ಆಹಾರ ಲೈಟ್ ಆಗಿರಲಿ. ಮಲಗುವ 2 ಗಂಟೆಗೆ ಮುಂಚೆ ಊಟ ಮುಗಿಸಿ ಆಗಿರಲಿ. ಹಣ್ಣುಗಳನ್ನು, ತರಕಾರಿಗಳನ್ನು ತಿಂದು ಮಲಗಬಹುದು. ಊಟ ಮಾಡಿದ ನಂತರ ಸ್ವಲ್ಪ ಸಮಯ ವಾಕಿಂಗ್ ಮಾಡುವುದರಿಂದಲೂ ಒಳ್ಳೆ ನಿದ್ದೆ ಬರುತ್ತದೆ. ಯಾವಾಗ ನಮ್ಮ ಹೊಟ್ಟೆಯಲ್ಲಿ ನಾವು ತಿಂದ ಆಹಾರದ ಭಾರ ಅನಿಸೋಲ್ಲ ಆಗ ಒಳ್ಳೆ ನಿದ್ದೆ ಬರುತ್ತದೆ.
ಗ್ಯಾಜೆಟ್ಸ್ – ಟೆಕ್ನಾಲಜಿ ನಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ ಎಂಬುದು ಯೋಗಾತ್ಮ ಶ್ರೀಹರಿ ಅವರ ಅಭಿಪ್ರಾಯ. ಹಿಂದಿನ ಕಾಲದಲ್ಲಿ ಯಾವುದೇ ಗ್ಯಾಜೆಟ್ಸ್ ಇರಲಿಲ್ಲ, ಹೀಗಾಗಿ ಒಳ್ಳೆ ಊಟ ಮಾಡಿ, ರಾತ್ರಿ ಒಳ್ಳೆ ನಿದ್ದೆ ಮಾಡ್ತಿದ್ರು ಜನ. ಆದರೆ ಈಗ ಟಿವಿ, ಮೊಬೈಲ್, ಕಂಪ್ಯೂಟರ್ ಅಂತಾ ಗ್ಯಾಜೆಟ್ಸ್ ಬಂದು ಮನುಷ್ಯನ ನಿದ್ದೆಗೆ ತೊಂದರೆಯಾಗ್ತಿದೆ. ಅದರಲ್ಲೂ ಮೊಬೈಲ್ ಫೋನ್! ಮಲಗುವ ಜಾಗದ ಪಕ್ಕದಲ್ಲೇ ಮೊಬೈಲ್ ಇಟ್ಟುಕೊಂಡಿರುತ್ತಾರೆ. ನಿದ್ದೆ ಇನ್ನೂ ಬಂದಿಲ್ಲ ಅಂತಾ ಮೊಬೈಲ್ ನೋಡ್ತಾರೆ, ಇದ್ರಿಂದ ನಿದ್ದೆ ಹಾಳಾಗುತ್ತೆ. ಕೆಲವೊಮ್ಮೆ ನಿದ್ದೆ ಮಧ್ಯ ಎಚ್ಚರ ಆದಾಗಲೂ ಮತ್ತೆ ನಿದ್ದೆ ಬರತಿಲ್ಲ ಅಂತಾ ಮೊಬೈಲ್ ನೋಡ್ತಾ ಕೂರುತ್ತಾರೆ, ಇದ್ರಿಂದನೂ ನಿದ್ದೆ ಹಾಳಾಗುತ್ತೆ. ಇದಕ್ಕೆ ಶ್ರೀಹರಿ ಅವರು ಬೆಸ್ಟ್ ಸಲ್ಯೂಶನ್ ಹೇಳಿದ್ದಾರೆ. ರಾತ್ರಿ ಮೊಬೈಲ್ ನೋಡುವ ಬದಲಿಗೆ ಯಾವುದಾದರೂ ಪುಸ್ತಕ ಓದಿ, ಇದು ನಮಗೆ ಆಯಾಸ ತರಿಸುತ್ತೆ, ಆಗ ನಮ್ಮ ಕಣ್ಣಿಗೂ, ದೇಹಕ್ಕೂ ವಿಶ್ರಾಂತಿ ಬೇಕು ಅನಿಸುತ್ತೆ, ನಿದ್ದೆ ಬರುತ್ತೆ. ಇಲ್ಲವಾದ್ರೆ ಸ್ವಲ್ಪ ಹರಳೆಣ್ಣೆ ಅಥ್ವಾ ತುಪ್ಪ ಅಥ್ವಾ ಕೊಬ್ಬರಿ ಎಣ್ಣೆಯನ್ನು ರೆಪ್ಪೆಗಳಿಗೆ ಹಚ್ಚಿ ಕಣ್ಣು ಮುಚ್ಚಿಕೊಳ್ಳಿ, ಇದ್ರಿಂದ ಕಣ್ಣು ಬಿಡಲು ಆಗಲ್ಲ, ಹಾಗಾಗಿ ಮೊಬೈಲ್ ನೋಡುವ ಪ್ರಮೇಯವೂ ಇರೋದಿಲ್ಲ. ಜೊತೆಗೆ ಹರಳೆಣ್ಣೆಯನ್ನ ಪಾದಗಳಿಗೆ ಹಚ್ಚಿ ಮಲಗೋದ್ರಿಂದ ಕೂಡ ಒಳ್ಳೆ ನಿದ್ದೆ ಬರುತ್ತದೆ.

Read this also – Sleep Deprivation; ಸರಿಯಾಗಿ ನಿದ್ರೆ ಮಾಡದಿರುವುದರಿಂದ ಮೆದುಳಿಗೆ ತೊಂದರೆ? ವೈದ್ಯಲೋಕದ ಎಚ್ಚರಿಕೆ!
ವಾತಾವರಣ – ನಾವು ಮಲಗುವ ವಾತಾವರಣ ಕೂಡ ನಮ್ಮ ನಿದ್ದೆಗೆ ಅತಿ ಮುಖ್ಯ ಎಂದು ಶ್ರೀಹರಿ ಅವರು ಹೇಳುತ್ತಾರೆ. ನಮ್ಮ ಮೆದುಳು ಬೆಳಗ್ಗೆಯಿಂದ ಸಂಜೆವರೆಗೆ 4 ವಿಧದಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಳಗಿನ ಸಮಯದಲ್ಲಿ ಆಗತಾನೆ ದಿನ ಶುರುವಾಗಿರುತ್ತೆ ಆಗ ಮೆದುಳಿಗೆ ಆಲ್ಫಾ ಮೈಂಡ್ ನಲ್ಲಿ ಇರುತ್ತದೆ. ಕೆಲಸ ಮಾಡಲು ಶುರುವಾದಾಗ ಬೀಟಾ ಮೈಂಡ್, ಸಂಜೆ ಆಗ್ತಿದ್ದಂತೆ ಥೀಟಾ ಮೈಂಡ್ ಗೆ ಬರುತ್ತೆ. ಆದ್ರೆ ರಾತ್ರಿ ಮಲಗೋಕೆ ನಮಗೆ ಬೇಕಿರೋದು ಡೆಲ್ಟಾ ಮೈಂಡ್. ಅಂದ್ರೆ ಸಿಕ್ಕಾಪಟ್ಟೆ ಆಕ್ಟೀವ್ ಮೈಂಡ್‌ನಿಂದ ಆರಾಮದಾಯಕ ಮೈಂಡ್ ರಾತ್ರಿ ನಿದ್ರೆಗೆ ಅವಶ್ಯಕ. ಅದಕ್ಕೆ ಮೊದಲು ಕೆಲಸದ ಒತ್ತಡವನ್ನು ಮನೆಗೆ ತೆಗೆದುಕೊಂಡು ಹೋಗಬಾರದು. ಮನೆಗೆ ಹೋದಾಗ ಆಫಿಶಿಯಲ್ ಮೂಡ್‌ನಿಂದ ರೆಸ್ಟ್ ಮೂಡಿಗೆ ಬರಬೇಕು. ಮನೆಯವರೊಟ್ಟಿಗೆ ಕೂತು ಆರಾಮಾಗಿ ಮಾತಾಡಬೇಕು. ಇವು ನಮ್ಮ ಮೆದುಳಿಗೆ ಕಾಮ್ ವಾತಾವರಣ ತಂದುಕೊಡುತ್ತದೆ. ಇದರ ಜೊತೆಗೆ ಮಲಗುವಾಗ ಹಾರ್ಶ್ ಲೈಟ್, ಹಾರ್ಶ್ ಸೌಂಡ್ ಇದ್ಯಾವುದೂ ಇಲ್ಲ ಎಂದಾಗಲೂ ಒಳ್ಳೆ ನಿದ್ದೆ ಬರುತ್ತದೆ.
ಹಾಸಿಗೆ ಮತ್ತು ದಿಂಬು – ನಾವು ಮಲಗುವ ಹಾಸಿಗೆ ಮತ್ತು ದಿಂಬು ನಮಗೆ ಒಳ್ಳೆ ನಿದ್ದೆಯನ್ನೂ ಕೊಡುತ್ತೆ ಹಾಗೆ ಅವುಗಳಿಂದ ನಮ್ಮ ನಿದ್ದೆ ಹಾಳಾಗೋದು ಕೂಡ ಆಗುತ್ತೆ. ತುಂಬಾ ಎತ್ತರದ ದಿಂಬು ನಿದ್ದೆ ಸಮಸ್ಯೆ ತರುತ್ತದೆ. ದಿಂಬಿನ ಕವರ್ ಆಗಾಗ್ಗೆ ಸ್ವಚ್ಛಗೊಳಿಸಲ್ಲ ಎಂದರೆ, ಹಾಸಿಗೆಯನ್ನು ಆಗಾಗ್ಗೆ ಬಿಸಿಲಿನಲ್ಲಿ ಒಣಗಿಸದೇ ಇರೋದು ನಿದ್ದೆ ಬಾರದೇ ಇರೋದಕ್ಕೆ ಕಾರಣವಾಗುತ್ತೆ. ಹಾಸಿಗೆ ಮತ್ತು ದಿಂಬಿನ ಮೇಲಿರುವ ಧೂಳು ನಮ್ಮ ದೇಹದೊಳಗೆ ಸಿಲುಕಿ ನಿದ್ದೆ ಸಮಸ್ಯೆ ಜೊತೆಗೆ ಬೇರೆ ಸಮಸ್ಯೆಯೂ ಶುರುವಾಗುತ್ತದೆ. ಹೀಗಾಗಿ ನಾವು ಮಲಗುವ ಹಾಸಿಗೆ ಮತ್ತು ದಿಂಬನ್ನು ಆಗಾಗ್ಗೆ ಶುಚಿಗೊಳಿಸಬೇಕು ಎಂಬುದು ಶ್ರೀಹರಿ ಅವರ ಸಲಹೆ. ಜೊತೆಗೆ ಮಲಗುವ ಹಾಸಿಗೆ ಮೇಲೆ ಬೇಡದ ವಸ್ತುಗಳನ್ನು ಇಡುವುದು, ಅದೇ ಹಾಸಿಗೆ ಮೇಲೆ ಕೂತು ಕೆಲಸ ಮಾಡುವುದು ಮಾಡಬೇಡಿ. ನಿದ್ದೆ ಮಾಡಲು ಇರುವ ಜಾಗವನ್ನು ಆರಾಮಾಗಿ ನಿದ್ದೆ ಮಾಡವುದುಕ್ಕೇ ಬಳಸಿ ಎಂಬುದು ಅವರ ಮಾತು. ಎಂಥಹ ದಿಂಬನ್ನು ಬಳಸಬೇಕು ಎಂಬುದರ ಬಗ್ಗೆ ಯೋಗಾತ್ಮ ಶ್ರೀಹರಿ ಅವರು ಒಂದು ವಿಶೇಷ ಮಾಡಿದ್ದಾರೆ, ಅದನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ…
ಯೋಗಾತ್ಮ ಶ್ರೀಹರಿ ಅವರು ನಿದ್ದೆ ಸಮಸ್ಯೆ ಕುರಿತು ಬೇರೆ ಏನೆಲ್ಲಾ ವಿಷಯಗಳನ್ನು ಹೇಳಿದ್ದಾರೆ, ಒಳ್ಳೆ ನಿದ್ದೆಗೆ ಅವರು ಸ್ವತಃ ಏನೆಲ್ಲಾ ಪ್ರಯೋಗ ಮಾಡಿದ್ದಾರೆ ಅಂತಾ ತಿಳಿಯಲು ಜಿಎಸ್‌ಎಸ್ ಮಾಧ್ಯಮ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾದ ಈ ಎಪಿಸೋಡ್‌ಗಳನ್ನು ವೀಕ್ಷಿಸಿ ;










