ಪ್ರತಿದಿನ ಪೇಪರ್ ತೆಗೆದ್ರೆ ಸಾಕು ಸಾಮಾನ್ಯವಾಗಿ ಕಾಣಿಸೋ ಸುದ್ದಿ ಯುವಕ ಆತ್ಮಹತ್ಯೆ ಅಥವಾ ಯುವತಿ ಆತ್ಮಹತ್ಯೆ ಎಂಬ ಸುದ್ದಿ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಮಾಡಿಕೊಳ್ಳೋರ ಸಂಖ್ಯೆ ಜಾಸ್ತಿಯಾಗ್ತಿದೆ. ಅದಕ್ಕೆ ಮುಖ್ಯ ಕಾರಣ ಅಂದ್ರೆ ಖಿನ್ನತೆ ಅಂತಾ ಹೇಳಲಾಗ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಮ್ಮ ದೇಶದ ಜನಸಂಖ್ಯೆಯ ಶೇಕಡಾ 15ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅಂತಾ ಹೇಳಿದೆ. ನಮ್ಮ ದೇಶದ ಪ್ರತಿ 20 ಜನರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದು, ಇದರಿಂದ ಆತ್ಮಹತ್ಯೆಯ ದರವು ಜಾಸ್ತಿ ಆಗ್ತಿದೆ ಅಂತಾ ಹೇಳಲಾಗ್ತಿದೆ.

ಖಿನ್ನತೆಯಿಂದ ಪ್ರತಿವರ್ಷ ಜಗತ್ತಿನಲ್ಲಿ 8 ಲಕ್ಷ ಜನರು ಮತ್ತು ಭಾರತದಲ್ಲಿ 3 ಲಕ್ಷಕ್ಕೂ ಅಧಿಕ ಜನರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಅಚ್ಚರಿ ಅಂದ್ರೆ ಸಂಶೋಧನೆಗಳ ಪ್ರಕಾರ, 40 ರಿಂದ 49 ವರ್ಷದೊಳಗಿನ ಮಹಿಳೆಯರೇ ಹೆಚ್ಚು ಖಿನ್ನತೆಗೆ ತುತ್ತಾಗುತ್ತಿದ್ದಾರೆ. ಹೊಸ ಅಧ್ಯಯನವೊಂದರ ಪ್ರಕಾರ, ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ಜನರು ಪಾರ್ಶ್ವವಾಯು ಅಂದ್ರೆ Paralysis ತುತ್ತಾಗೋ ಅಪಾಯವನ್ನ ಹೊಂದಿರುತ್ತಾರೆ. ಅಂತಹ ಜನರು ಕಡಿಮೆ ಚೇತರಿಕೆಯನ್ನು ಕಾಣುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅದೇ ರೀತಿ ಖಿನ್ನತೆಯಿಂದ ವ್ಯಕ್ತಿಯ ಜೀವನದಲ್ಲಿ ಋಣಾತ್ಮಕ ಪರಿಣಾಮಗಳನ್ನು ಬೀರುತ್ತೇ ಎಂದು ಐರ್ಲೆಂಡ್ನ ಗಾಲ್ವೇ ವಿಶ್ವವಿದ್ಯಾಲಯದ ರಾಬರ್ಟ್ ಪಿ ಮರ್ಫಿ ಅಭಿಪ್ರಾಯಪಟ್ಟಿದ್ದಾರೆ. ಮೆಟ್ರೋ ಸಿಟಿಗಳಲ್ಲಿ ವಾಸಿಸುವ ಜನರಲ್ಲಿಯೇ ಖಿನ್ನತೆಯ ದರವು ಹೆಚ್ಚಾಗಿದ್ದು ಕೌಟುಂಬಿಕ ಕಲಹ ಮತ್ತು ಕೆಲಸದ ಒತ್ತಡಗಳೇ ಖಿನ್ನತೆಗೆ ಮುಖ್ಯ ಕಾರಣ ಎನ್ನಲಾಗಿದೆ.
ಇದನ್ನೂ ಓದಿ : ಎಚ್ಚರ…!! ಮರ್ಯಾದೆಗೆ ಕುತ್ತು ತರುತ್ತೇ ಆನ್ಲೈನ್ ಅಪ್ಲಿಕೇಶನ್ ಲೋನ್..!
ನಮ್ಮ ದೇಶದಲ್ಲಿ ಖಿನ್ನತೆಯ ದರವು 7.9 ರಿಂದ 8.9 ರಷ್ಟಿದ್ದು, ಪ್ರತಿ ವರ್ಷ ಖಿನ್ನತೆಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಖಿನ್ನತೆ ಅನ್ನೋದು ಒಂದು ಸಾಮಾನ್ಯ ಮಾನಸಿಕ ರೋಗವಾಗಿದ್ದರೂ, ಇದನ್ನು ಆರಂಭದಲ್ಲಿಯೇ ನಿಯಂತ್ರಿಸದಿದ್ರೆ, ಇದೊಂದು ಗಂಭೀರ ಸ್ವರೂಪದ ಮಾನಸಿಕ ಖಾಯಿಲೆಯಾಗುವ ಸಾಧ್ಯತೆಯಿದೆ. ಆಧುನಿಕ ಬದುಕಿನ ಎಲ್ಲ ಒತ್ತಡಗಳ ನಡುವೆಯೂ ಯೋಗ ಮತ್ತು ಧ್ಯಾನಕ್ಕೆ ಒಂದಷ್ಟು ಸಮಯ ನೀಡುವ ಮೂಲಕ ಖಿನ್ನತೆಯಿಂದ ಪಾರಾಗಬಹುದು. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತು-ಅರಿತು ನಡೆಯುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಅಲ್ವಾ..?!