ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಜನವರಿ 22ರಂದು ಉದ್ಘಾಟನೆಯಾಗುತ್ತಿರುವ ಭವ್ಯ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಅನೇಕ ದೇಶಗಳಿಂದ ಉಡುಗೊರೆಗಳ ಮಹಾಪೂರವೇ ಹರಿದು ಬಂದಿದೆ. ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಿಂದ ವಿಶೇಷವಾದ ಮಣ್ಣು, ನೇಪಾಳದ ಹಲವು ನದಿಗಳಿಂದ ನೀರು ಹೀಗೆ ಹಲವು ದೇಶಗಳಿಂದ ವಿಶೇಷ ವಸ್ತುಗಳು ಅಯೋಧ್ಯೆಗೆ ಬಂದಿವೆ.
ಇದನ್ನೂ ಓದಿ : ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ವಿಶೇಷತೆಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ
ಥಾಯ್ಲೆಂಡ್‌ನ ವಿಶ್ವ ಹಿಂದೂ ಪರಿಷತ್ ವಿಶೇಷವಾದ ಮಣ್ಣನ್ನು ಥೈಲ್ಯಾಂಡ್‌ನ ರಾಜಮನೆತನದ ಪರವಾಗಿ ಕಳುಹಿಸಿದೆ. ಈ ಹಿಂದೆ ಥಾಯ್ಲೆಂಡ್ ರಾಮಮಂದಿರಕ್ಕೆ ಮಣ್ಣು ಕಳುಹಿಸುವ ಮುನ್ನ ಎರಡು ನದಿಗಳ ನೀರನ್ನು ಕಳುಹಿಸಿತ್ತು. ಫಿಜಿ, ಮಂಗೋಲಿಯಾ, ಡೆನ್ಮಾರ್ಕ್, ಭೂತಾನ್, ರೊಮೇನಿಯಾ, ಹೈಟಿ, ಗ್ರೀಸ್, ಕೊಮೊರೊಸ್, ಕಬಾರ್ಡೆ, ಮಾಂಟೆನೆಗ್ರೊ, ಟುವಾಲು, ಅಲ್ಬೇನಿಯಾ ಮತ್ತು ಟಿಬೆಟ್ ಹೀಗೆ ಪ್ರಪಂಚದ ಸುಮಾರು 155 ದೇಶಗಳಿಂದ ಪ್ರಭು ಶ್ರೀರಾಮನಿಗೆ ವಿಶೇಷವಾದ ಉಡುಗರೆಗಳು ಬಂದಿವೆ.

ಥೈಲ್ಯಾಂಡ್‌ನಲ್ಲಿ ಶ್ರೀರಾಮನ ವಂಶಜರ ಆಳ್ವಿಕೆ : ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯ ವಿಶೇಷವಾದದು. ಪ್ರಾಚೀನ ಕಾಲದಿಂದಲೂ ಈ ಎರಡೂ ದೇಶಗಳು ವಿಶೇಷವಾದ ಸಂಬಂಧ ಹೊಂದಿವೆ. ಥೈಲ್ಯಾಂಡ್‌ನ ಅನೇಕ ಸರ್ಕಾರಿ ಸಚಿವಾಲಯಗಳ ಲೋಗೋಗಳು ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಹೊಂದಿವೆ. ಗರುಡ ಥೈಲ್ಯಾಂಡ್‌ನ ಅನೇಕ ಇಲಾಖೆಗಳ ಸಂಕೇತವಾಗಿದೆ. ಪ್ರಭು ಶ್ರೀರಾಮನ ವಂಶಸ್ಥರು ಇಲ್ಲಿ ಆಳ್ವಿಕೆ ನಡೆಸಿದ್ದರು ಎಂಬ ನಂಬಿಕೆ ಇದೆ. ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್ ಶ್ರೀಮಂತ ಹಿಂದೂ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದೆ.
ಅದೇ ರೀತಿ ಥಾಯ್ಲೆಂಡ್‌ನಲ್ಲಿ ಅಯುತಾಯ ಎಂಬ ಪ್ರಸಿದ್ಧ ನಗರವಿದ್ದು, ಆ ನಗರದ ರಾಜರು ‘ರಾಮತಿಬೋಧಿ’ ಎಂಬ ಬಿರುದನ್ನು ಹೊಂದಿದ್ದು, ಶ್ರೀರಾಮನ ವಂಶಜರು ಎಂಬ ನಂಬಿಕೆ ಇದೆ. ಇನ್ನು ʼರಾಮಕೀನ್ʼ ಎಂದು ಕರೆಯಲ್ಪಡುವ ಥೈಲ್ಯಾಂಡ್‌ನ ಧಾರ್ಮಿಕ ಪಠ್ಯ ರಾಮಾಯಣಕ್ಕೆ ಸಮಾನವಾದ ಸ್ಥಾನವನ್ನು ಹೊಂದಿದೆ. ಖ್ಯಾತ ವಿದ್ವಾಂಸ ರಾಮಾನುಜನ್ ಅವರು ʼರಾಮಕೀನಿತ್ʼ ಹಾಗೂ ಮಹರ್ಷಿ ವಾಲ್ಮೀಕಿಯವರ ರಾಮಾಯಣವನ್ನು ಹೋಲಿಸಿದ್ದಾರೆ. ಈ ಪುಸ್ತಕದಲ್ಲಿರುವ ʼತೋತ್ಸಕನ್ʼ ಎಂಬ ಪಾತ್ರವನ್ನು ಹಿಂದೂ ಗ್ರಂಥದ ʼರಾವಣʼ ಎನ್ನಲಾಗಿದೆ. ಶ್ರೀರಾಮನ ಆದರ್ಶವನ್ನು ಈ ಪುಸ್ತಕದ ನಾಯಕನಲ್ಲಿ ಚಿತ್ರಿಸಲಾಗಿದೆ. ಇನ್ನು ಭಾರತ ಮತ್ತು ಥೈಲ್ಯಾಂಡ್ ನಡುವೆ ಆಳವಾದ ಸಾಂಸ್ಕೃತಿಕ ಹೋಲಿಕೆಗಳಿವೆ. ಭಾರತದಲ್ಲಿ ಕಾರ್ತಿಕ ಪೂರ್ಣಿಮಾ ಮತ್ತು ದೀಪಾವಳಿಯನ್ನು ಆಚರಿಸಲಾಗುತ್ತದೆ. ಅದೇ ರೀತಿ ಥೈಲ್ಯಾಂಡ್‌ನಲ್ಲಿ ‘ಲಾಯ್ ಕ್ರಾಥೋಂಗ್’ ಹಬ್ಬವನ್ನು ದೀಪಗಳ ಹಬ್ಬವಾಗಿ ಆಚರಿಸಲಾಗುತ್ತದೆ. ಥೈಲ್ಯಾಂಡ್‌ನ ಜನರು ಭಾರತೀಯರಂತೆ ಶಿವ, ಪಾರ್ವತಿ, ಗಣೇಶ ಮತ್ತು ಇಂದ್ರನ ವಿಗ್ರಹಗಳನ್ನು ಪೂಜಿಸುತ್ತಾರೆ

ನೇಪಾಳದ ಸಾಲಿಗ್ರಾಮ ಶಿಲೆ : ಹಿಂದೂ ಧರ್ಮದಲ್ಲಿ ನೇಪಾಳದ ಸಾಲಿಗ್ರಾಮ ಶಿಲೆಗೆ ವಿಶೇಷ ಮಹತ್ವವಿದೆ. ಇದು ನೇಪಾಳದ ಗಂಡಕಿ ನದಿಯ ದಡದಲ್ಲಿ ಮುಕ್ತಿನಾಥದಲ್ಲಿ ಕಂಡುಬರುತ್ತದೆ. ನೇಪಾಳದಲ್ಲಿ 33 ವಿಧದ ಸಾಲಿಗ್ರಾಮ ಶಿಲೆಗಳಿವೆ. ಅವುಗಳಲ್ಲಿ 24 ಪ್ರಕಾರಗಳು ವಿಷ್ಣುವಿನ 24 ಅವತಾರಗಳೊಂದಿಗೆ ಸಂಬಂಧ ಹೊಂದಿವೆ. ಸಾಲಿಗ್ರಾಮದ ಶಿಲೆ ಇರುವ ಮನೆಯು, ಸಂತೋಷ, ಶಾಂತಿ ಮತ್ತು ಪರಸ್ಪರ ಪ್ರೀತಿಯಿಂದ ತುಂಬಿರುತ್ತದೆ ಎನ್ನುವ ನಂಬಿಕೆಯಿದೆ. ಭಾರತೀಯ ಪುರಾಣಗಳ ಪ್ರಕಾರ, ಹಿಂದೂ ಧರ್ಮದಲ್ಲಿ ವಿಗ್ರಹಾರಾಧನೆಯ ಆರಂಭವಾಗುವ ಮೊದಲು ಬ್ರಹ್ಮ ದೇವರನ್ನು ಶಂಖ ರೂಪದಲ್ಲಿ, ವಿಷ್ಣುವನ್ನು ಸಾಲಿಗ್ರಾಮ ರೂಪದಲ್ಲಿ ಮತ್ತು ಶಿವನನ್ನು ಶಿವಲಿಂಗ ರೂಪದಲ್ಲಿ ಪೂಜಿಸಲಾಗುತ್ತಿತ್ತು. ಹೀಗಾಗಿ ಶ್ರೀರಾಮನ ವಿಗ್ರಹ ಕೆತ್ತನೆಗೆ ಇದೇ ಶಿಲೆ ಸೂಕ್ತ ಎನ್ನುವ ಐತಿಹ್ಯವಿದೆ. ಇನ್ನು ಸೀತಾ ಮಾತೆಯು ನೇಪಾಳದ ಜನಕಪುರಿಯ ಮಹಾರಾಜ ಜನಕರಾಜನ ಪುತ್ರಿ. ಹೀಗಾಗಿಯೇ ಅಯೋಧ್ಯೆಯಲ್ಲಿ ರಾಮನವಮಿಯ ದಿನದಂದು ನೇಪಾಳದ ಜನಕಪುರದಲ್ಲಿ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹ ಮಹೋತ್ಸವದ ಸಂಭ್ರಮಾಚರಣೆಯೂ ನಡೆಯುತ್ತದೆ. ಶುಕ್ಲ ಪಕ್ಷದ ಐದನೇ ದಿನ ಈ ಸಂಭ್ರಮಾಚರಣೆ ನಡೆಯುತ್ತದೆ. ನೇಪಾಳದ ಅನೇಕ ಆಚರಣೆಗಳು ಪ್ರಭು ಶ್ರೀರಾಮನೊಂದಿಗೆ ಸಂಬಂಧ ಹೊಂದಿವೆ.

ಒಟ್ಟಾರೆಯಾಗಿ ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಅಸಂಖ್ಯಾತ ಭಾರತೀಯರ ಸಂತಸಕ್ಕೆ ಕಾರಣವಾಗಲಿದೆ. ಭಾರತದ ಸಾಂಸ್ಕೃತಿಕ ಮತ್ತು ಆದರ್ಶ ಪುರುಷನಾಗಿರುವ ಪ್ರಭು ಶ್ರೀರಾಮ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತನಾಗಿರದೇ, ಇಡೀ ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿದ್ದಾನೆ.
ಇದನ್ನೂ ಓದಿ : ದೀರ್ಘಾಯುಷ್ಯರಾಗಿ ಬಾಳೋದರ ಸತ್ಯ ಬಿಚ್ಚಿಟ್ಟ ವಿಜ್ಞಾನಿಗಳು..!










