ನಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕ ಸರಬರಾಜು ಮಾಡುವುದೇ ರಕ್ತ(Blood). ಜೊತೆಗೆ ಪ್ರೋಟೀನ್, ಕೊಲೆಸ್ಟ್ರಾಲ್, ಹಾರ್ಮೋನ್ಸ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನೂ ಸಾಗಿಸುತ್ತದೆ. ದೇಹದ ಪಿಎಚ್ ಸಮತೋಲನ ಕಾಪಾಡುವಲ್ಲಿ ಮತ್ತು ಉಷ್ಣತೆ ನಿಯಂತ್ರಣದಲ್ಲಿ ರಕ್ತದ ಕೆಲಸ ದೊಡ್ಡದು. ಹೀಗಾಗಿ ರಕ್ತವನ್ನು ಸರಿಯಾಗಿ ಶುದ್ಧೀಕರಿಸುವುದು ಅತ್ಯಗತ್ಯ. ರಕ್ತವನ್ನು ಶುದ್ಧೀಕರಿಸಿಲ್ಲವೆಂದರೆ ಚರ್ಮ, ಮೂತ್ರಪಿಂಡ, ಹೃದಯ, ಲಿವರ್ ಮತ್ತು ಶ್ವಾಸಕೋಶಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಆರೋಗ್ಯವಾಗಿರಲು ನಮ್ಮ ದೇಹದ ಎಲ್ಲಾ ಭಾಗಗಳೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ರಕ್ತ ಪೂರೈಕೆ ಸರಿಯಾಗಿದ್ದಾಗ ಮಾತ್ರ ಇದು ಸಾಧ್ಯ. ಸಮಸ್ಯೆ ಬಂದಾಗ ಡಾಕ್ಟರ್ ಹತ್ರ ಹೋಗಿ ಮಾತ್ರೆ, ಇಂಜೆಕ್ಷನ್ ಅಂತಾ ತಗೊಳೋ ಬದ್ಲು ನೈಸರ್ಗಿಕವಾಗಿ ಮನೆಯಲ್ಲೇ ರಕ್ತವನ್ನು ಶುದ್ಧೀಕರಣ ಮಾಡಿಕೊಳ್ಳಬಹುದು. ರಕ್ತವನ್ನು ಶುದ್ಧೀಕರಣ ಮಾಡಲು ಸಹಕಾರಿಯಾಗುವ 7 ನೈಸರ್ಗಿಕ ಪದಾರ್ಥಗಳ ಬಗ್ಗೆ ಈ ವರದಿಯಲ್ಲಿ ತಿಳಿಯೋಣ;
ಬ್ರೊಕೋಲಿ
ಬ್ರೊಕೋಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್-ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಸಮೃದ್ಧವಾಗಿರುತ್ತವೆ. ಇವು ರಕ್ತವನ್ನು ಶುದ್ಧೀಕರಿಸುತ್ತವೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಬ್ರೊಕೋಲಿ ಸೇವನೆ ತುಂಬಾ ಒಳ್ಳೆಯದು. ಬ್ರೊಕೋಲಿ ಸಲಾಡ್ ಅಥವ ಬ್ರೊಕೋಲಿ ಸೂಪ್ ಮಾಡಿ ಸೇವನೆ ಮಾಡಬಹುದು. ಇದರ ಜೊತೆಗೆ ಹಸಿರೆಲೆ ಸೊಪ್ಪು ತರಕಾರಿಗಳನ್ನೂ ಸೇವನೆ ಮಾಡಬೇಕು. ಹೂಕೋಸು, ಬೀನ್ಸ್, ಕ್ಯಾರೆಟ್, ಪಾಲಕ್, ಬಸಳೆ, ಮಂತೆ ಸೊಪ್ಪು ಇತ್ಯಾದಿ ನೈಸರ್ಗಿಕ ಪದಾರ್ಥಗಳನ್ನು ತಿನ್ನಲೇಬೇಕು.
ಬೀಟ್ರೂಟ್ ಜ್ಯೂಸ್
ನಮ್ಮ ರಕ್ತ ಶುದ್ಧೀಕರಣಕ್ಕೆ ಬೀಟ್ರೂಟ್ ತುಂಬಾನೇ ಸಹಾಯಕ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಕೂಡ ಹೆಚ್ಚಿಸುತ್ತದೆ. ಇದು ರಕ್ತದೊತ್ತಡವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ಬೀಟಾಲೈನ್ ಎಂಬ ಆಂಟಿ ಆಕ್ಸಿಡೆಂಟ್ ಗುಣವಿದ್ದು, ಉರಿಯೂತ ತಡೆಯುತ್ತದೆ. ಅಲ್ಲದೇ ಇದರ ರಸ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ ಮತ್ತು ಕಲ್ಮಶಗಳ ನಿವಾರಣೆಗೆ ನೆರವಾಗುತ್ತದೆ.
ಅರಿಶಿನ
ಅರಿಶಿನ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಇರುವ ನೈಸರ್ಗಿಕ ಪದಾರ್ಥ. ಇದು ಕೂಡ ರಕ್ತವನ್ನು ಶುದ್ಧೀಕರಿಸುತ್ತದೆ. ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಹಲವಾರು ಸಮಸ್ಯೆಗಳಿಗೆ ಸೂಕ್ತ ಔಷಧಿಯಾಗಿದೆ. ಇದೇ ಕಾರಣಕ್ಕೆ ಅರಿಶಿನ ಬೆರೆಸಿದ ಹಾಲನ್ನು ರಾತ್ರಿ ಮಲಗುವ ಮುನ್ನ ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೆ, ದೈನಂದಿನ ಅಡುಗೆಯಲ್ಲಿಯೂ ಅರಿಶಿನ ಉಪಯೋಗಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೆ ಹಲವಾರು ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಜೊತೆಗೆ ರಕ್ತದಲ್ಲಿ ಹೊಸ ಕೆಂಪುರಕ್ತಕಣಗಳ ಉತ್ಪಾದನೆಗೂ ಅರಿಶಿನ ನೆರವಾಗುತ್ತದೆ.
ನಿಂಬೆ ರಸ
ನಿಂಬೆ ರಸವು ನಮ್ಮ ರಕ್ತ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ಆಮ್ಲೀಯ ಗುಣಲಕ್ಷಣಗಳು ದೇಹದಲ್ಲಿನ ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತವೆ. ದೇಹದಿಂದ ವಿಷವನ್ನು ಹೊರಹಾಕುತ್ತದೆ. ಹಾಗಾಗಿ ನಿಂಬೆ ರಸವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಪ್ರಯೋಜನಕಾರಿ.
ಬೆಳ್ಳುಳ್ಳಿ
ಬೆಳ್ಳುಳ್ಳಿ ಲಿವಿರ್ ಮತ್ತು ರಕ್ತವನ್ನು ಟಾಕ್ಸಿಕ್‌ನಿಂದ ಮುಕ್ತಿಹೊಂದಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ರಕ್ತವನ್ನು ಶುದ್ಧೀಕರಿಸುತ್ತವೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ. ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಸೇರಿಸುವುದರಿಂದ ಹಲವು ಪ್ರಯೋಜನಗಳಿವೆ. ಹಸಿ ಬೆಳ್ಳುಳ್ಳಿ ತಿನ್ನುವುದರಿಂದಲೂ ಆರೋಗ್ಯಕ್ಕೆ ಒಳ್ಳೆಯದು.
ಬೆಲ್ಲ
ಸಕ್ಕರೆಗೆ ಸೂಕ್ತವಾದ ಪರ್ಯಾಯವೆಂದರೆ ನೈಸರ್ಗಿಕ ಬೆಲ್ಲ. ಇದು ರಕ್ತವನ್ನು ನೈಸರ್ಗಿಕವಾಗಿ ಶುದ್ಧೀಕರಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಾಂಗಗಳನ್ನು ಶುದ್ಧೀಕರಿಸಲು, ಮಲಬದ್ಧತೆಯಾಗದಂತೆ ತಡೆಯಲು, ಕಲ್ಮಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ವಿಶೇಷವಾಗಿ ಬೆಲ್ಲದಲ್ಲಿರುವ ಕಬ್ಬಿಣದ ಅಂಶ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ಆರೊಗ್ಯಕರ ರಕ್ತದ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ದೇಹದೊಳಗೆ ಕಟ್ಟಿಕೊಂಡಿರುವ ರಕ್ತದ ಗೆಡ್ಡೆಗಳನ್ನು ನಿವಾರಿಸುವ ಮೂಲಕ ಇನ್ನಷ್ಟು ಶುದ್ಧೀಕರಣಕ್ಕೆ ನೆರವಾಗುತ್ತದೆ. ಟೀ-ಕಾಫಿಗೆ ಸಕ್ಕರೆಯ ಬದಲು ಬೆಲ್ಲ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
ನೀರು
ನೀರು ಅತ್ಯಂತ ಸಾಮಾನ್ಯ ಮತ್ತು ಸರಳವಾದ ನೈಸರ್ಗಿಕ ರಕ್ತ ಶುದ್ಧೀಕಾರಕವಾಗಿದೆ. ಮೂತ್ರಪಿಂಡಗಳು ಮೂತ್ರದ ಮೂಲಕ ರಕ್ತದಿಂದ ಕಲ್ಮಶಗಳನ್ನು ಹೊರಹಾಕುತ್ತವೆ ಮತ್ತು ಈ ಪ್ರಕ್ರಿಯೆಯನ್ನು ಉತ್ತೇಜಿಸಲು ನೀರು ಅತ್ಯಗತ್ಯ. ಆಯುರ್ವೇದ ಚಿಕಿತ್ಸೆಯಲ್ಲಿ ನೀರನ್ನು ರಕ್ತ ಶುದ್ಧೀಕರಣವಾಗಿ ಬಳಸುವ ಒಂದು ಉತ್ತಮ ವಿಧಾನವೆಂದರೆ ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಸಂಗ್ರಹಿಸಿ ಮರುದಿನ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಲು ಹೇಳಲಾಗುತ್ತದೆ.
ಇವುಗಳ ಜೊತೆಗೆ ಕಿತ್ತಳೆ, ಮೂಸಂಬಿ, ದಾಳಿಂಬೆ, ಸೇಬು, ಕಿವಿ, ಪಪ್ಪಾಯಿ ಹಣ್ಣುಗಳ ಸೇವನೆಯಿಂದಲೂ ರಕ್ತ ಶುದ್ಧೀಕರಣವಾಗಿ ಆರೋಗ್ಯ ಜೀವನ ನಡೆಸಲು ನೆರವಾಗುತ್ತದೆ.
Read this also : Kill Body Fat; ದೇಹದ ಫ್ಯಾಟ್ ಕರಗಿಸುವ 3 ಪವರ್ ಫುಲ್ ಜ್ಯೂಸ್!










