ಭಗವದ್ಗೀತೆಯನ್ನ(Bhagavad Gita) ಸುಮ್ಮನೆ ಅತ್ಯುತ್ತಮ ಗ್ರಂಥ ಅಂತಾ ಹೇಳಲ್ಲ. ಬದುಕಿಗೆ ಬೇಕಾಗುವ ಎಷ್ಟೋ ಅಂಶಗಳ ಬಗ್ಗೆ ಭಗವದ್ಗೀತೆ ನಮಗೆ ತಿಳಿಸುತ್ತದೆ. ನಮ್ಮಲ್ಲಿನ ಎಷ್ಟೋ ಪ್ರಶ್ನೆಗಳಿಗೆ ಗೀತೆಯಲ್ಲಿ ಉತ್ತರವಿದೆ. ಕರ್ಮದ ಕುರಿತು ಹೆಚ್ಚಾಗಿ ಹೇಳುವ ಭಗವದ್ಗೀತೆಯು, ನಾವು ಏನು ಮಾಡ್ತೀವೋ ಅದು ನಮ್ಮ ಮುಂದಿನ ದಿನಗಳಲ್ಲಿ ನಾವು ಹೇಗಿರುತ್ತೀವಿ ಎಂಬುದನ್ನು ನಿರ್ಧರಿಸುತ್ತದೆ ಅಂತಾ ಹೇಳುತ್ತದೆ.
ಆಹಾರ ಮನುಷ್ಯನಿಗೆ ಅಗತ್ಯ. ಈಗೆಲ್ಲ ನಾವು ಕೇಳ್ತಾನೇ ಇರ‍್ತೀವಿ, ಅನಾರೋಗ್ಯ ಸಮಸ್ಯೆಯಾದ್ರೆ ನಮ್ಮ ಆಹಾರ ಶೈಲಿ ಸರಿಯಿಲ್ಲ ಅನ್ನೋದನ್ನ. ಇದು ಸಾಬೀತಾಗಿದೆ ಕೂಡ. ಒಳ್ಳೆ ಆಹಾರ ಸೇವನೆ ಮಾಡುದ್ರೆ ಆರೋಗ್ಯವಾಗಿರುತ್ತೇವೆ. ಸಿಕ್ಕಾಪಟ್ಟೆ ಜಂಕ್ ಫುಡ್, ಕರಿದ ಆಹಾರಗಳನ್ನು ಪದೇ ಪದೇ ತಿಂತಿದ್ರೆ ಅನಾರೋಗ್ಯ ಎಂಬುದನ್ನು ಸಾಮಾನ್ಯವಾಗಿ ಎಲ್ಲರೂ ಕಂಡುಕೊಂಡಿರುತ್ತೀವಿ. ಗೀತೆ ಸಾರುವ ಕರ್ಮದ ವಿಚಾರದಂತೆ ಹೇಳೋದಾದ್ರೆ ನಾವೇನು ತಿಂತೀವೋ ಅದರ ಮೇಲೆ ನಮ್ಮ ಆರೋಗ್ಯವಿರುತ್ತದೆ ಎನ್ನಬಹುದು.
ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡುವ ಸಂದರ್ಭದಲ್ಲಿ ಸಾಕಷ್ಟು ವಿಚಾರಗಳ ಕುರಿತು ಹೇಳುತ್ತಾನೆ. ನಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದರ ಬಗ್ಗೆಯೂ ಉಪದೇಶ ಮಾಡುತ್ತಾನೆ. ನಮ್ಮ ಆಹಾರ ಕ್ರಮವು ಯಾವುದರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನೂ ತಿಳಿಸುತ್ತಾನೆ.
ನೀವು ಸಿಕ್ಕಾಪಟ್ಟೆ ಊಟ ಮಾಡ್ತೀರಾ? ಅಥ್ವಾ ತುಂಬಾ ಕಡಿಮೆ ಊಟ ಮಾಡ್ತೀರಾ? ಈ ರೀತಿ ಮಾಡೋದ್ರಿಂದ ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಗೀತೆಯ 6ನೇ ಅಧ್ಯಾಯವಾದ ಧ್ಯಾನಯೋಗದ 16ನೇ ಶ್ಲೋಕದಲ್ಲಿ ಕೃಷ್ಣ ಹೇಳಿದ್ದಾನೆ.
ನಾತ್ಯಶ್ನತಸ್ತು ಯೋಗೋಸ್ತಿ ನ ಚೈಕಾನ್ತಮನಶ್ನತಃ |
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ |
ಮನುಷ್ಯನು ಅತೀ ಹೆಚ್ಚಾಗಿ ತಿಂದರೂ ಅಥವಾ ಅತೀ ಸ್ವಲ್ಪವೇ ತಿಂದರೂ ಆತ ಯೋಗಿಯಾಗಲು ಸಾಧ್ಯವಿಲ್ಲ ಎಂದು ಈ ಶ್ಲೋಕ ಹೇಳುತ್ತದೆ. ಇಲ್ಲಿ ನಿದ್ರೆಯ ಬಗ್ಗೆಯೂ ಉಲ್ಲೇಖವಿದೆ. ಅತೀ ಹೆಚ್ಚಾಗಿ ನಿದ್ದೆ ಮಾಡಿದರೂ ಅಥವಾ ಅಗತ್ಯಕ್ಕೆ ತಕ್ಕಷ್ಟು ನಿದ್ದೆ ಮಾಡದಿದ್ದರೂ ಸಾಧನೆ ಕಷ್ಟಕರವಾಗುತ್ತದೆ.
ನಮ್ಮ ಊಟ ಮತ್ತು ನಿದ್ರೆ ಉತ್ತಮವಾಗಿ ಕೂಡಿದ್ರೆ ನಾವು ಆರೋಗ್ಯವಾಗಿರ‍್ತೀವಿ. ನಾವು ಆರೋಗ್ಯವಾಗಿದ್ದಾಗ ಕೆಲಸ ಮಾಡುವ ಶಕ್ತಿ, ಕ್ರಿಯಾತ್ಮಕವಾಗಿ ಯೋಚಿಸುವ ಗುಣ, ಪಾಸಿಟೀವ್ ಆಗಿ ಇರಲು ಸಾಧ್ಯವಾಗುತ್ತದೆ. ನಾವು ಈ ರೀತಿ ಇದ್ದಾಗ ಜೀವನಲ್ಲಿ ಏನನ್ನಾದರೂ ಸಾಧಿಸಲು ಸಹಕಾರಿಯಾಗುತ್ತದೆ. ಆದರೆ ನಮ್ಮ ಅಗತ್ಯತೆಗಿಂತಲೂ ಹೆಚ್ಚು ತಿಂದಾಗ, ಹೆಚ್ಚು ನಿದ್ರೆ ಮಾಡಿದಾಗ ನಮ್ಮಲ್ಲಿ ಆಲಸ್ಯ ಶುರುವಾಗುತ್ತದೆ. ಅಥ್ವಾ ತುಂಬಾ ಕಮ್ಮಿ ತಿಂದಾಗ, ಕಮ್ಮಿ ನಿದ್ರೆ ಮಾಡಿದಾಗ ನಮ್ಮಲ್ಲಿ ನಿಶಕ್ತಿಯಾಗುತ್ತದೆ. ಹೀಗಿದ್ದಾಗ ನಮ್ಮ ಆರೋಗ್ಯದಲ್ಲಿ ಏರುಪೇರಾಗಿ ನಮ್ಮ ಗಮನ ಅನಾರೋಗ್ಯದ ಕಡೆಗೆ ವಾಲುತ್ತದೆ. ಅಯ್ಯೋ ನನಗೇಕೆ ಹೀಗಾಗ್ತಿದೆ ಎಂದು ನೆಗೆಟಿವ್ ಆಗಿ ಯೋಚನೆ ಮಾಡಲು ಶುರು ಮಾಡ್ತೀವಿ. ಆಗ ಜೀವನದಲ್ಲಿ ಯಾವುದನ್ನು ಸಾಧಿಸಬೇಕು ಎಂಬ ಉದ್ದೇಶ ಹೊಂದಿರುತ್ತೇವೋ ಅದು ನಮ್ಮಿಂದ ದೂರ ಉಳಿದುಬಿಡುತ್ತದೆ. ಇಲ್ಲಿ ಕೃಷ್ಣ ಯೋಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿರುವುದು ಇದನ್ನೇ. ಇಲ್ಲಿ ಯೋಗಿ ಅಂದ್ರೆ ಕೆಲಸ, ಸಾಧನೆ ಅಥ್ವಾ ನಮ್ಮ ಬದುಕಿನ ಉದ್ದೇಶ ಎಂದು ಹೇಳಬಹುದು.
ಅದರ ಮುಂದಿನ ಶ್ಲೋಕವು ಕೂಡ ನಮ್ಮ ಆಹಾರ ಕ್ರಮದ ಬಗ್ಗೆಯೇ ಹೇಳುತ್ತದೆ.
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು
ಯುಕ್ತಸ್ವಪ್ನಾವಬೋದಧಸ್ಯ ಯೋಗೋ ಭವತಿ ದುಃಖಹಾ
ನಮ್ಮ ಜೀವನ ಕ್ರಮ ಶಿಸ್ತು ಬದ್ಧವಾಗಿರಬೇಕು. ಕೆಲವೊಮ್ಮೆ ಕೆಲ ಕೆಲಸಗಳನ್ನು ಮಾಡುವಾಗ ಅದಕ್ಕೆ ತಕ್ಕಂಕೆ ನಾವು ಸಿದ್ಧರಿರಬೇಕು. ನಾವು ಸೇವಿಸುವ ಕೆಲ ಆಹಾರಗಳು ನಮ್ಮ ಸಿದ್ಧತೆ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಈ ರೀತಿ ಅರ್ಥ ಮಾಡಿಕೊಳ್ಳಬಹುದು. ಒಬ್ಬ ವಿದ್ಯಾರ್ಥಿ ತನ್ನ ಓದುವ ಶಕ್ತಿ, ನೆನಪಿನ ಶಕ್ತಿಗೆ ಪೂರಕವಾಗುವ ಆಹಾರವನ್ನು ಸೇವಿಸಬೇಕು. ದೃಢವಾದ ದೇಹ ಹೊಂದಬೇಕೆಂದರೆ ಅದಕ್ಕೆ ತಕ್ಕಂತ ಆಹಾರ ತಿನ್ನಬೇಕು. ಹಾಗೆ ನಾವು ಯಾವ ಕೆಲಸಕ್ಕೆ ತಯಾರಾಗಬೇಕು ಅದಕ್ಕೆ ತಕ್ಕಂತೆ ಆಹಾರ ತಿನ್ನಬೇಕು. ಜೊತೆಗೆ ಇತಿಮಿತಿ ಕೂಡ ಇರಬೇಕು. ಈ ರೀತಿ ಆಹಾರ, ನಿದ್ರೆ, ವಿಹಾರ ಮತ್ತು ಕೆಲಸಗಳ ಅಭ್ಯಾಸಗಳಲ್ಲಿ ಶಿಸ್ತುಬದ್ಧವಾಗಿರುತ್ತಾರೋ ಮತ್ತು ಅಗತ್ಯತೆಗೆ ತಕ್ಕಂತೆ ಎಲ್ಲವನ್ನೂ ಪಾಲಿಸುತ್ತಾರೋ ಅವರಿಗೆ ದುಃಖಗಳನ್ನು ಕಡಮೆ ಮಾಡಬಲ್ಲದು ಎಂಬುದನ್ನು ಈ ಶ್ಲೋಕ ಹೇಳುತ್ತದೆ.
For more articles visit GSS Media










