ನಮ್ಮ ತಲೆಬುರುಡೆಯಲ್ಲಿರೋ ಮೆದುಳಿನ(Brain) ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದೆ. ಅದರ ಕೆಲಸ ಏನು ಎಂಬುದೂ ಗೊತ್ತಿದೆ. ನಮ್ಮ ದೇಹದ ಬೇರೆ ಬೇರೆ ಅಂಗಗಳಿಗೆ ನಮ್ಮ ಮೆದುಳು ಸಂದೇಶ ರವಾನಿಸುತ್ತದೆ. ಅದರ ಅನುಸಾರ ನಮ್ಮ ಶರೀರ ಕೆಲಸ ಮಾಡುತ್ತದೆ. ನಮ್ಮ ಭಾವನೆಗಳು ನಮ್ಮ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ಸ್ ಗಳ (Hormones) ಮೇಲೆ ಅವಲಂಬಿತವಾಗಿರುತ್ತವೆ. ನಮ್ಮ ಮೆದುಳು ಸಿಗ್ನಲ್ ಕೊಡಲಿಲ್ಲವೆಂದರೆ ದೇಹದ ಯಾವುದೇ ಅಂಗಗಳು ಕೆಲಸ ಮಾಡಲು ಸಾಧ್ಯವಿಲ್ಲ. ಮೆದುಳು ಕೆಲಸ ನಿಲ್ಲಿಸಿಬಿಟ್ಟರೆ ನಾವೇನಾಗ್ತೀವಿ ಅನ್ನೋದೂ ಗೊತ್ತು.
ಆದ್ರೆ ನಮ್ಮ ದೇಹದಲ್ಲಿ ಮೆದುಳಿನ(Brain) ಸಂಪೂರ್ಣ ನಿಯಂತ್ರಣವಿಲ್ಲದೇ ಒಂದು ವ್ಯವಸ್ಥೆ ಸ್ವಯಂ ಕೆಲಸ ಮಾಡುತ್ತಿದೆ. ಅದನ್ನ ನಮ್ಮ ಎರಡನೇ ಮೆದುಳು ಅಂತಾಲೂ ಕೆಲ ವಿಜ್ಞಾನಿಗಳು ಕರೆದಿದ್ದಾರೆ. ಆ ಎರಡನೇ ಮೆದುಳು ನಮ್ಮ ಮುಖ್ಯ ಮೆದುಳಿನೊಂದಿಗೆ ಸಂಪರ್ಕ ಕೂಡ ಹೊಂದಿದೆ.
ಹಾಗಾದ್ರೆ ನಮ್ಮ ದೇಹದಲ್ಲಿ ಆ ಎರಡನೇ ಮೆದುಳು ಎಲ್ಲಿದೆ ಗೊತ್ತಾ..? ನಮ್ಮ ಎರಡನೇ ಮೆದುಳು ನಮ್ಮ ಗಟ್‌ನಲ್ಲಿದೆ. ಗಟ್ ಅಂದ್ರೆ ನಮ್ಮ ಜೀರ್ಣಾಂಗ ವ್ಯವಸ್ಥೆಯ ಭಾಗ. ನಾವು ಆಹಾರ ತಿಂದಾಗಿನಿಂದ ಅದು ಜೀರ್ಣವಾಗುವ ಪ್ರಕ್ರಿಯೆ ನಡೆಯುತ್ತೆಲ್ಲಾ ಅದನ್ನ ಜೀರ್ಣಾಂಗ ಪ್ರಕ್ರಿಯೆ ಅಂತೀವಿ. ಅದು ಬಾಯಿ, ಅನ್ನನಾಳ, ಹೊಟ್ಟೆ, ಸಣ್ಣ ಕರಳು, ದೊಡ್ಡ ಕರಳು, ಗುದದ್ವಾರವನ್ನು ಒಳಗೊಂಡಿರುತ್ತದೆ. ಇಲ್ಲಿಯೇ ಗಟ್ ಇರುವುದು. ನಮ್ಮ ಎರಡನೇ ಮೆದುಳು ಇರುವುದೇ ಇಲ್ಲಿಯೇ.
ನಮ್ಮ ಮುಖ್ಯ ಮೆದುಳಿನಲ್ಲಿ ಮಿಲಿಯನ್ ಗಟ್ಟಲೇ ನರಕೋಶಗಳಿವೆ. ಅದೇ ರೀತಿ ನಮ್ಮ ಗಟ್‌ನಲ್ಲಿಯೂ ಮಿಲಿಯನ್ ಗಟ್ಟಲೇ ನರಕೋಶಗಳಿವೆ. ಇದನ್ನು ಎಂಟರಿಕ್ ನರ್ವ್ ಸಿಸ್ಟಮ್ ಅಂತಾರೆ. ಇದರ ಜೊತೆಗೆ ಗಟ್ ಮೈಕ್ರೋಬ್ಸ್ ಗಳು ಇವೆ. ಇದು ಮನುಷ್ಯರಿಂದ ಮನುಷ್ಯರಿಗೆ ಭಿನ್ನವಾಗಿರುತ್ತದೆ. ಇವು ನಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ತಿನ್ನುವ ಆಹಾರದಲ್ಲಿರುವ ಪ್ರೋಟಿನ್ಸ್, ವಿಟಮಿನ್ಸ್, ಪೋಷಕಾಂಶಗಳನ್ನು ಸಂಗ್ರಹಿಸಿ ರೋಗಗಳ ವಿರುದ್ಧ ಹೋರಾಡುಂತ ಒಳ್ಳೆ ಬ್ಯಾಕ್ಟಿಯಾಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಪ್ರಕ್ರಿಯೆ ಮೇಲೆ ನಮ್ಮ ಮುಖ್ಯ ಮೆದುಳು ಸಂಪೂರ್ಣವಾಗಿ ಕಂಟ್ರೊಲ್ ಮಾಡೋದಿಲ್ಲ.
ಗಟ್ ಮೈಕ್ರೊಬ್ಸ್ ಗಳ ಮತ್ತೊಂದು ಮುಖ್ಯವಾದ ಕೆಲಸ ಅಂದ್ರೆ ನ್ಯೂರೋ ಟ್ರಾನ್ಸ್ ಮೀಟರ್ ಗಳನ್ನು ಬಿಡುಗಡೆ ಮಾಡೋದು. ನ್ಯೂರೋ ಟ್ರಾನ್ಸ್ ಮೀಟರ್ ಅಂದ್ರೆ ಕೆಮಿಕಲ್ ಮೆಸೆಂಜರ್, ಇದು ಕರುಳು ಮತ್ತು ಬೇರೆ ಬೇರೆ ಅಂಗಗಳ ನಡುವೆ ಕನೆಕ್ಟ್ ಮಾಡುತ್ತೆ. ವೇಗಸ್ ಅನ್ನೋ ನರದ ಮೂಲಕ ಈ ಕೆಲಸ ನಡೆಯುತ್ತದೆ. ನಮ್ಮ ತಲೆಯಲ್ಲಿರೋ ಪ್ರಮುಖ ಮೆದುಳು ಮತ್ತು ನಮ್ಮ ಎರಡನೇ ಮೆದುಳು ಸಂಪರ್ಕ ಹೊಂದುವುದು ಇಲ್ಲೇ.
ನಮ್ಮ ಭಾವನೆಗಳು ನಮ್ಮ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ಸ್ ಗಳ ಮೇಲೆ ಅವಲಂಬಿತವಾದಂತೆ ಆ ಹಾರ್ಮೋನ್ಸ್ ಗಳ ಬಿಡುಗಡೆ ಕೆಲಸದಲ್ಲಿ ನಮ್ಮ ಮುಖ್ಯ ಮೆದುಳಿಗೆ ನಮ್ಮ ಎರಡನೇ ಮೆದುಳು ಸಹಾಯ ಮಾಡುತ್ತದೆ. ಡೊಪೊಮಿನ್, ಸೆರೆಟೊನಿನ್ ಅನ್ನೋ ಹಾರ್ಮೋನ್ಸ್ ಬಗ್ಗೆ ಕೇಳರ‍್ತೀರಿ. ಅದೇ ನಾವು ಸಂತೋಷವಾಗಿರುವಂತೆ ಮಾಡುತ್ತೆಲ್ಲಾ, ಸಂತೋಷದ ಹಾರ್ಮೋನ್ಸ್ ಗಳವು. ಶೇ.50% ರಷ್ಟು ಡೊಪೊಮಿನ್ ಬಿಡುಗಡೆ ನಮ್ಮ ಗಟ್‌ನಲ್ಲಿಯೇ ಆಗುತ್ತೆ. ಸೆರೆಟೊನಿನ್ ಅಂತೂ ಶೇ.90% ಬಿಡುಗಡೆ ಆಗೋದೇ ಇಲ್ಲಿಯೇ.
ನಾವು ಪೌಷ್ಟಿಕಾಂಶವಿರುವ ಒಳ್ಳೆ ಊಟ ಮಾಡುದ್ರೆ, ಒಳ್ಳೆ ಹಾರ್ಮೋನ್ಸ್ ಬಿಡುಗಡೆಯಾಗಿ ನಮ್ಮ ಭಾವನೆ ಕೂಡ ಸಂತೋಷದಾಯಕವಾಗಿರುತ್ತದೆ. ಅದೇ ನಾವು ಆರೋಗ್ಯ ಹಾಳು ಮಾಡುವ ಜಂಕ್‌ಫುಡ್‌ಗಳನ್ನು ಹೆಚ್ಚಿಗೆ ತಿನ್ನುತ್ತಾ ಹೋದಾಗ ನಮ್ಮ ಗಟ್‌ನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗದೇ ರೋಗಗಳ ವಿರುದ್ಧ ಹೋರಾಡುವಂತ ಒಳ್ಳೆ ಬ್ಯಾಕ್ಟೀರಿಯಾವನ್ನೂ ನಾಶ ಮಾಡುವ ಶತ್ರುಗಳಂತ ಬ್ಯಾಕ್ಟಿರಿಯಾಗಳ ಸಂಖ್ಯೆ ಹೆಚ್ಚಾಗಿ ನಮ್ಮಲ್ಲಿ ಒಳ್ಳೆ ಹಾರ್ಮೋನ್ಸ್ ಉತ್ಪತ್ತಿಯಾಗಲ್ಲ. ಇದ್ರಿಂದನೇ ಹಾರ್ಮೋನಲ್ ಇಂಬ್ಯಾಲನ್ಸ್ ಗಳಂತ ಸಮಸ್ಯೆಗಳು ಶುರುವಾಗೋದು. ಅದೂ ಅಲ್ಲದೇ ನರಮಂಡಲಕ್ಕೆ ಸಂಬಂಧಪಟ್ಟ ಎಷ್ಟೊ ಸಮಸ್ಯೆಗಳು, ಖಿನ್ನತೆ, ಆತಂಕಗಳಂತಹ ರೋಗಗಳಿಗೂ ಕಾರಣವಾಗುವುದು.
ಸ್ಪ್ಯಾನಿಶ್ ನಲ್ಲಿ ಒಂದು ಸಾಲಿದೆ, “The belly rules the mind” ಅಂತಾ. ಅಂದ್ರೆ ನಮ್ಮ ಜೀರ್ಣಕ್ರಿಯೆಯ ಭಾಗ ನಮ್ಮ ಮನಸ್ಸನ್ನು ನಿಯಂತ್ರಿಸುತ್ತೆ ಅಂತಾ. ನಮ್ಮ ಜೀರ್ಣಕ್ರಿಯೆಯಲ್ಲಿ ಆಗುವ ಕಾರ್ಯದ ಬಗ್ಗೆ ತಿಳಿದ ಮೇಲೆ ಈ ಸಾಲು ನಿಜವೆನ್ನಿಸುತ್ತಿದೆ. ನಾವು ತಿನ್ನುವ ಆಹಾರ ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲ, ನಾವು ತಿನ್ನುವ ಆಹಾರ ನಮ್ಮ ದೇಹದ ಆರೋಗ್ಯ ಕಾಪಾಡಬಲ್ಲದು. ಒಳ್ಳೆ ಆಹಾರ + ಒಳ್ಳೆ ಹಾರ್ಮೋನ್ಸ್ = ಆರೋಗ್ಯ. ಜಂಕ್‌ಫುಡ್ + ಹಾರ್ಮೋನಲ್ ಇಂಬ್ಯಾಲೆನ್ಸ್ = ಅನಾರೋಗ್ಯ. ನೀವೇ ಯೋಚನೆ ಮಾಡಿ!
For more articles visit GSS Media










