ಅಂದವಾಗಿ ಸೀರೆಯುಟ್ಟು, ಚಂದವಾಗಿ ಹಣೆಯಲ್ಲಿ ಕುಂಕುಮವಿಟ್ಟು ಅಪ್ಪಟ ಕನ್ನಡತಿ ಅಪರ್ಣಾ ವಸ್ತಾರೆ (Aparna Vastarey) ಅವರು ಕಾರ್ಯಕ್ರಮ ನಡೆಸಿಕೊಡಲು ವೇದಿಕೆಗೆ ಬಂದರು ಎಂದರೇ ಆಗಲೇ ಆ ಕಾರ್ಯಕ್ರಮ ಅರ್ಧ ಗೆದ್ದಿರುತ್ತಿತ್ತು. ಅಚ್ಚ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುತ್ತಾ ತಮ್ಮ ನಿರೂಪಣೆಯಲ್ಲೇ ಕಾರ್ಯಕ್ರಮಗಳನ್ನು ಗೆಲ್ಲಿಸಿಬಿಡುತ್ತಿದ್ದರು.
ಸುಂದರ ಭಾಷೆಯನ್ನು ತಮ್ಮ ಕಂಠದಿಂದ, ಶುದ್ಧವಾದ ಉಚ್ಚಾರಣೆಯಿಂದ ಮತ್ತಷ್ಟು ಸುಮಧುರಗೊಳಿಸುತ್ತಿದ್ದ ಕನ್ನಡದ ಮೇರು ನಿರೂಪಕಿ ಅಪರ್ಣಾ ಅವರು ಶಾಶ್ವತವಾಗಿ ಮೌನಕ್ಕೆ ಜಾರಿಬಿಟ್ಟರು.
ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ಅವರು ತಮ್ಮ ಬದುಕಿನ ಪಯಣವನ್ನು ಮುಗಿಸಿದರು. ಅವರ ಇಲ್ಲದಿರುವಿಕೆ ನಿಜಕ್ಕೂ ತುಂಬಲಾರದ ನಷ್ಟವಲ್ಲದೆ ಬೇರೆನೂ ಅಲ್ಲ. ಅವರಂಥೆ ಕನ್ನಡ ಮಾತನಾಡುವರಿಲ್ಲದೆ, ಅಪರ್ಣಾ ಅವರೇ ಇಲ್ಲದೆ ಕನ್ನಡದ ನಿರೂಪಣೆ ಅಪೂರ್ಣವಾಗಿದೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡಕ್ಕೆ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ಬೆಳ್ಳಿತೆರೆಯಿಂದ ಕಿರುತೆರೆಯವರೆಗೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಗಾಂಭೀರ್ಯ ನಿರೂಪಣೆಯಿಂದ ನಗಿಸುವ ಲೋಕದವರೆಗೆ, ದೂರದರ್ಶನ, ಆಕಾಶವಾಣಿಯ ನಿರೂಪಣೆಯಿಂದ ನಮ್ಮ ಮೆಟ್ರೋ ಪ್ರಕಟಣೆಯವರೆಗೆ ಅವರ ವೃತ್ತಿ ಬದುಕು ಸ್ಪೂರ್ತಿದಾಯಕ.
ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅಪರ್ಣಾ ಅವರು, ನಮ್ಮೂರ ರಾಜ, ಡಾಕ್ಟರ್ ಕೃಷ್ಣ, ಶಿವರಾಜ್ ಕುಮಾರ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಸೇರಿದಂತೆ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕಿರುತೆರೆಯಲ್ಲೂ ಅಪರ್ಣಾ ತಮ್ಮ ಅಭಿನಯ ಮುಂದುವರೆಸಿ, ಮುಕ್ತ, ಮೂಡಲ ಮನೆ, ಪ್ರೀತಿಯಿಲ್ಲದ ಮೇಲೆ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಸಾವಿರಾರು ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದರು.
ಅಪರ್ಣಾ ತಮ್ಮ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ ಅದಕ್ಕಿಂತಲೂ ಹೆಚ್ಚು ಜನಮನ್ನಣೆ ಗಳಿಸಿದ್ದು ತಮ್ಮ ನಿರೂಪಣೆಯಿಂದ. ಕನ್ನಡದ ನಿರೂಪಣೆ ಎಂದರೇ ಎಲ್ಲರಿಗೂ ಮೊದಲು ನೆನಪಾಗುವುದೇ ಅಪರ್ಣಾ. ಅಪರ್ಣಾ ಎಂದರೇ ಕನ್ನಡ. ಸರ್ಕಾರಿ ಕಾರ್ಯಕ್ರಮಗಳಿಗಂತೂ ಅವರ ನಿರೂಪಣೆಯೇ ಬೇಕಿತ್ತು.
ಸ್ವಚ್ಛವಾದ ಧ್ವನಿ, ಸ್ಪಷ್ಟವಾದ ಉಚ್ಚಾರಣೆ, ಇಂಗ್ಲಿಷ್ ಬಳಸದೇ ಕನ್ನಡದಲ್ಲೇ ಗಂಟೆಗಟ್ಟಲೆ ನಿರರ್ಗಳವಾಗಿ ನಿರೂಪಣೆ ಮಾಡುತ್ತಿದ್ದರು. ಅಪರ್ಣಾ ಅವರು ಕಾರ್ಯಕ್ರಮದ ಕಳಶದಂತೆ ಕಾಣುತ್ತಿದ್ದರು. ಕಾರ್ಯಕ್ರಮಕ್ಕೆ ಶೋಭೆ ತರುತ್ತಿದ್ದರು. ಸತತವಾಗಿ 7 ಗಂಟೆಗಳ ಕಾಲ ನಿರಂತರ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಟಿವಿ ಕಾರ್ಯಕ್ರಮಗಳ ನಿರೂಪಣೆ, ಟಿವಿಯೇತರ ಕಾರ್ಯಕ್ರಮಗಳ ನಿರೂಪಣೆ, ಸಂದರ್ಶನಗಳು, ರೆಡಿಯೋ ಕಾರ್ಯಕ್ರಮಗಳು ಹೀಗೆ ಅವರು ನಡೆಸಿಕೊಟ್ಟಿದ್ದು ಸಾವಿರಾರು ಕಾರ್ಯಕ್ರಮಗಳು.
ಅಭಿನಯದ ಮೂಲಕ, ನಿರೂಪಣೆಯ ಮೂಲಕ ಅಭಿಮಾನಿಗಳ ಪ್ರೀತಿ ಗಳಿಸಿದ್ದ ಅಪರ್ಣಾ ಅವರು, ಜನರಿಗೆ ಮತ್ತಷ್ಟು ಹತ್ತಿರವಾಗಿದ್ದು ನಕ್ಕುನಗಿಸುವ ಮಜಾ ಟಾಕೀಸ್ ನಿಂದ. ಅಷ್ಟು ಗಾಂಭೀರ್ಯವಾಗಿ ಮಾತನಾಡುವ ಅಪರ್ಣಾ ಅವರಲ್ಲಿ ಒಬ್ಬ ನಗಿಸುವ ಮಹಾನ್ ಕಲಾವಿದೆ ಇದ್ದರು ಎಂದು ತೋರಿಸಿಕೊಟ್ಟರು. ಒನ್ ಅಂಡ್ ಓನ್ಲೀ ವರಲಕ್ಷ್ಮೀಯಾಗಿ ಪ್ರೇಕ್ಷಕರನ್ನು ನಗೆಕಡಲಲ್ಲಿ ತೇಲಿಬಿಡುತ್ತಿದ್ದರು. ನಟನೆ, ನಿರೂಪಣೆಯ ಜೊತೆಗೆ ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಬಂದಿದ್ದರು. ಮಾತಿಂದ ಅಷ್ಟೇ ಅಲ್ಲ, ಅಂಕಣಕಾರ್ತಿಯಾಗಿ ಬರವಣಿಗೆಯಿಂದಲೂ ಗಮನಸೆಳೆದಿದ್ದರು. ನಮ್ಮ ಮೆಟ್ರೋದಲ್ಲಿ ಕೇಳುವ ಮುಂದಿನ ನಿಲ್ದಾಣದ ಹಿಂದಿರುವ ಧ್ವನಿ ಅಪರ್ಣಾ ಅವರದ್ದು.
ಅಪರ್ಣಾ ಅವರ ಅಭಿನಯ, ನಿರೂಪಣೆಗೆ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಬಂದಿದ್ದವು. ಕನ್ನಡ ಮಾಧ್ಯಮ ಲೋಕಕ್ಕೆ ಅವರು ಸಲ್ಲಿಸಿದ ಸೇವೆಗೆ ಸರ್ವೋಚ್ಚ ಪ್ರಶಸ್ತಿ ಪಡೆದಿದ್ದರು.
ಕನ್ನಡದಲ್ಲಿ ಅಪರ್ಣಾ ಅವರನ್ನು ಮೀರಿಸುವ ನಿರೂಪಕರಿಲ್ಲ. ಅಪರ್ಣಾ ಅವರ ಧ್ವನಿ ಕೇಳದ ಕನ್ನಡಿಗರಿಲ್ಲ. ಅವರಿಗೊಂದು ಕನಸಿತ್ತಂತೆ, ನಿರೂಪಣೆ ಶಾಲೆಯನ್ನು ತೆರೆಯುವುದು. ಮುಂಬರುವ ನಿರೂಪಕರು ಅವರ ಕನ್ನಡದ ಶುದ್ಧತೆಯನ್ನು ಸ್ಫೂರ್ತಿಯಾಗಿ ತೆಗದುಕೊಂಡಾಗ ಅವರ ಆ ಕನಸು ನನಸಾಗುವುದು.
ಆ ದೇವರಿಗೂ ಅವನ ಕಾರ್ಯಕ್ರಮಗಳಿಗೆ ನಿಮ್ಮ ನಿರೂಪಣೆಯೇ ಬೇಕು ಅನಿಸುತ್ತದೆ. ಹೋಗಿ ಬನ್ನಿ ಅಪರ್ಣಾ ನಿಮಗೆ ನಮ್ಮ ಅಶ್ರುತರ್ಪಣ.
For more articles visit GSS Media










