ಪ್ರತಿವರ್ಷ ಜುಲೈ 28 ರಂದು ವಿಶ್ವಾದ್ಯಂತ ಹೆಪಟೈಟಿಸ್ ದಿನವನ್ನು(World Hepatitis day) ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ, ಸಾಂಕ್ರಾಮಿಕ ರೋಗವಾದ ಹೆಪಟೈಟಿಸ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ.
ಹೆಪಟೈಟಿಸ್ ಬಿ ವೈರಸ್ (HBV) ಕಂಡುಹಿಡಿದು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ರೋಗನಿರ್ಣಯ ಪರೀಕ್ಷೆಗಳು ಹಾಗೂ ಲಸಿಕೆಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ, ನೊಬೆಲ್ ಪ್ರಶಸ್ತಿ ವಿಜೇತ ಡಾ. ಬರೂಚ್ ಬ್ಲಂಬರ್ಗ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತಿದೆ.
ಹೆಪಟೈಟಿಸ್ (Hepatitis) ಸೋಂಕಿನಿಂದ ಪ್ರತಿವರ್ಷ ಸುಮಾರು 1.3 ಮಿಲಿಯನ್ ಜನರು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಬಗ್ಗೆ ಜನರಿಗೆ ಅರಿವಿಲ್ಲದಿರುವುದು. ಹಾಗಾದರೆ ಈ ಲೇಖನದಲ್ಲಿ ಹೆಪಟೈಟಿಸ್ ಎಂದರೇನು, ಕಾರಣಗಳು, ಲಕ್ಷಣಗಳು ಹಾಗೂ ಗಮನಹರಿಸಲೇಬೇಕಾದ ಕೆಲವೊಂದು ವಿಚಾರಗಳ ಬಗ್ಗೆ ತಿಳಿಯೋಣ.
ಹೆಪಟೈಟಿಸ್ ಎಂದರೆ ಏನು?
ಹೆಪಟೈಟಿಸ್ ಕಾಯಿಲೆಯು ದೇಹದ ಅಗತ್ಯ ಅಂಗವಾದ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಹೆಪಟೈಟಿಸ್ ಅಂದರೆ ಯಕೃತ್ತಿನಲ್ಲಿ ಉರಿಯೂತ (Liver inflammation).
ಯಕೃತ್ತು ನಮ್ಮ ದೇಹದಲ್ಲಿ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದನ್ನ ದೇಹದ ‘ಶುದ್ಧೀಕರಣ ಯಂತ್ರ’ಎನ್ನಬಹುದು. ದೇಹದಲ್ಲಿರುವ ವಿಷವನ್ನು ತೆಗೆದುಹಾಕುವುದು, ಜೀರ್ಣಕ್ರಿಯೆಯಲ್ಲಿ ಸಹಾಯ ಮತ್ತು ಶಕ್ತಿಯನ್ನು ಉತ್ಪಾದಿಸುವುದು ಇದರ ಪ್ರಮುಖ ಕೆಲಸಗಳು. ಆದರೆ, ಹೆಪಟೈಟಿಸ್ ವೈರಸ್ ಯಕೃತ್ತಿನ ಜೀವಕೋಶಗಳಿಗೆ ಹಾನಿ ಉಂಟು ಮಾಡುತ್ತದೆ. ಇದರಿಂದ ಯಕೃತ್ತು ಸರಿಯಾಗಿ ಕೆಲಸ ಮಾಡುವುದಿಲ್ಲ. ಒಂದು ವೇಳೆ ಇದು ದೀರ್ಘಕಾಲದವರೆಗೆ ಉಳಿದುಬಿಟ್ಟರೆ ಯಕೃತ್ತು ವಿಫಲವಾಗುವುದು (Liver failure), ಸಿರೋಸಿಸ್ (Cirrhosis), ಲಿವರ್ ಕ್ಯಾನ್ಸರ್ (Liver Cancer) ಆಗಿ ಪರಿಣಮಿಸಬಹುದು.

ಹೆಪಟೈಟಿಸ್ ನ ವಿಧಗಳು :
1. ಹೆಪಟೈಟಿಸ್ A (HAV): ಕಲುಷಿತ ಆಹಾರ ಅಥವಾ ನೀರಿನಿಂದ ಹರಡುವುದು
2. ಹೆಪಟೈಟಿಸ್ B (HBV): ಸೋಂಕಿತ ರಕ್ತ, ಲಾಲಾರಸ ಅಥವಾ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವುದು. ತಾಯಿಗೆ ಈ ಸೋಂಕು ಇದ್ದು ಮಗು ಜನಿಸುವ ಸಂದರ್ಭದಲ್ಲಿ ಮಗುವಿಗೆ ಹರಡುವ ಸಾಧ್ಯತೆ.
3. ಹೆಪಟೈಟಿಸ್ C (HCV): ಸೋಂಕಿತ ವ್ಯಕ್ತಿಗೆ ಬಳಸಿದ ನೀಡಲ್, ಸಿರಿಂಜಿನ್ ಮರುಬಳಕೆ ಮಾಡಿದಾಗ ಸೋಂಕಿತ ರಕ್ತದ ಮೂಲಕ ಹರಡುವುದು
4. ಹೆಪಟೈಟಿಸ್ D (HDV): HBV ಇರುವವರಿಗೆ ಮಾತ್ರ ಈ ವೈರಸ್ ತೊಂದರೆ ಹೆಚ್ಚು.
5. ಹೆಪಟೈಟಿಸ್ E (HEV): ಇದು ಕೂಡ ಕಲುಷಿತ ನೀರಿನಿಂದ ಹರಡುವುದು.
ಇದಲ್ಲದೇ ಕಲುಷಿತ ಚುಚ್ಚುಮದ್ದಿನೊಂದಿಗೆ ಮಾದಕ ದ್ರವ್ಯಗಳನ್ನು ತೆಗೆದುಕೊಂಡಾಗಲೂ ಜನರು ಹೆಪಟೈಟಿಸ್ ಹರಡುವ ಅಪಾಯವನ್ನು ಹೊಂದಿರುತ್ತಾರೆ.
ಲಕ್ಷಣಗಳು (Symptoms) :
- ಕಾಮಾಲೆ (Jaundice)
- ಅತಿಯಾದ ಆಯಾಸ
- ಹೊಟ್ಟೆ ನೋವು
- ವಾಂತಿ ಅಥವಾ ವಾಕರಿಕೆ
- ಕಪ್ಪು ಮೂತ್ರ
- ತಿಳಿ ಮಲ
- ಜ್ವರ
- ಹಸಿವಿಲ್ಲದಿರುವುದು
- ಕೀಲು ನೋವು

ಇಂಥ ಲಕ್ಷಣಗಳು ಕಂಡುಬಂದಾಗ ಮತ್ತು ಮೇಲೆ ತಿಳಿಸಿರುವ ಕಾರಣಗಳು ಸಂಭವಿಸಿದೆ ಎಂಬ ಅನುಮಾನಗಳಿದ್ದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕವಾಗಿದೆ. ವೈದ್ಯರಿಗೆ ರೋಗದ ಲಕ್ಷಣಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ, ಅವರು ಪರೀಕ್ಷೆ ಮಾಡಿ ಯಾವ ವಿಧದ ಹೆಪಟೈಟಿಸ್ ಎಂದು ಪತ್ತೆ ಮಾಡಿ, ಅದಕ್ಕೆ ಸೂಕ್ತವಾಗುವ ಚಿಕಿತ್ಸೆ ಹಾಗೂ ಲಸಿಕೆಗಳನ್ನು ನೀಡುತ್ತಾರೆ. ಆದರೆ ಇಂಥ ಲಕ್ಷಣಗಳು ಕಂಡು ಬಂದಾಗಲೂ ವೈದ್ಯರ ಬಳಿ ಹೋಗಲು ಹಿಂದೇಟು ಹಾಕುವುದು, ವೈದ್ಯರು ತಿಳಿಸಿದ ಔಷಧೋಪಚಾರಗಳನ್ನು ಪಾಲಿಸದೇ ಇರುವುದು – ಇಂಥ ಕಾರಣಗಳಿಂದ ಸಮಸ್ಯೆ ಗಂಭೀರ ಹಂತಕ್ಕೆ ತಲುಪುತ್ತದೆ. ಹೀಗಾಗಿ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.
Read this also – World Brain Day 2025; ನಿಮ್ಮ ನೆನಪಿನಶಕ್ತಿ ಚುರುಕಿದ್ಯಾ? ಈ ಪ್ರಶ್ನೆಗಳಿಗೆ ಉತ್ತರಿಸಿ…!
ಸ್ವಯಂ ಜಾಗೃತಿ ಹೇಗಿರಬೇಕು?
- ಆರೋಗ್ಯಕರ ಆಹಾರ ಮತ್ತು ನೀರಿನ ಬಳಕೆ.
- ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರ ಇರುವುದು.
- ಚುಚ್ಚುಮದ್ದು, ಟ್ಯಾಟೂ ಹಾಕಿಸಿಕೊಳ್ಳುವಾಗ ನೈರ್ಮಲ್ಯ ಕಾಪಾಡಿಕೊಳ್ಳುವುದು.
- ಯಾವುದೇ ಇಂಜೆಕ್ಷನ್ ಪಡೆಯುವ ಮುನ್ನ ಮರುಬಳಕೆ ಮಾಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು
- ಮಾದಕ ದ್ರವ್ಯಗಳಿಂದ ದೂರ ಉಳಿಯುವುದು.










