ಮನುಷ್ಯನ ದೇಹದಲ್ಲಿ ಅತ್ಯಂತ ಶಕ್ತಿಶಾಲಿ ಅಂಗ ಮೆದುಳು. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಈ ಕುರಿತು ಅರಿವು ಮೂಡಿಸುವ ಸಲುವಾಗಿ World Federation of Neurology (WFN) ಪ್ರತಿ ವರ್ಷ ಜುಲೈ 22ರಂದು ವಿಶ್ವ ಮೆದುಳಿನ ದಿನ (World Brain Day 2025) ಎಂದು ಪರಿಗಣಿಸಿದೆ. ಈ ನಿಟ್ಟಿನಲ್ಲಿ 2025ನೇ ಸಾಲಿನ ವಿಶ್ವ ಮೆದುಳಿನ ದಿನದ ಧ್ಯೇಯ – Brain health for all ages (ಎಲ್ಲಾ ವಯೋಮಾನದವರಿಗೂ ಮೆದುಳಿನ ಆರೋಗ್ಯದ ಪ್ರಾಮುಖ್ಯತೆ) ಎಂದು ಗುರುತಿಸಲಾಗಿದೆ. ಈ ಬರಹದಲ್ಲಿ ಮೆದುಳು ತನ್ನ ಕೆಲಸದ ಶಕ್ತಿ ಕಳೆದುಕೊಳ್ಳುತ್ತಿರೋದನ್ನ ಕಂಡುಕೊಳ್ಳುವುದು ಹೇಗೆ? ಮೆದುಳಿನ ಆರೋಗ್ಯ ಏನನ್ನು ತಿನ್ನಬೇಕು? ಏನನ್ನ ಮುಖ್ಯವಾಗಿ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ.
ಮಾನವನ ಮೆದುಳು(Brain) ಅತ್ಯಂತ ಸಂಕೀರ್ಣ ಮತ್ತು ಶಕ್ತಿಶಾಲಿ ಅಂಗ. ಇದರ ತೂಕ ಸುಮಾರು 1.3 ರಿಂದ 1.4 ಕಿಲೋಗ್ರಂ ಆಗಿದ್ದು, ನಮ್ಮ ದೇಹದ ಒಟ್ಟು ತೂಕದ ಕೇವಲ 2% ಮಾತ್ರ ಇರುತ್ತದೆ. ಆದರೂ, ಇದು ದೇಹದ 20% ಎನರ್ಜಿಯನ್ನು ಉಪಯೋಗಿಸುತ್ತಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಾ – ಚಿಂತನೆ, ಚಲನೆ, ಭಾವನೆಗಳು, ನೆನಪು – ಹೀಗೆ ಅನೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ. ವಯಸ್ಸು ಹೆಚ್ಚಾದಂತೆ, ಮೆದುಳು ಸಹಜವಾಗಿ ಸಡಿಲವಾಗುತ್ತದೆ. ಇದನ್ನು Brain Atrophy (ಮೆದುಳಿನ ಶಿಥಿಲತೆ) ಎನ್ನುತ್ತಾರೆ. ಆದರೆ ಇತ್ತೀಚೆಗೆ ಸಾಕಷ್ಟು ಜನರಲ್ಲಿ ಮೆದುಳಿನ ಕಾರ್ಯಕ್ಷಮತೆ ಚಿಕ್ಕ ವಯಸ್ಸಿಗೆ ಕುಗ್ಗುತ್ತಿದೆ.

Read this also : ನಿಮ್ಮ ದೇಹದಲ್ಲಿರುವ ಎರಡನೇ ಮೆದುಳಿನ (Second Brain) ಬಗ್ಗೆ ನಿಮಗೆಷ್ಟು ಗೊತ್ತು..!?
ನೀವು ನಿಮ್ಮ ಮೆದುಳಿನ ಕಡೆ ಗಮನ ಕೊಟ್ಟಿದ್ದೀರಾ?ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರಿಸಿ;
– ನೀವು ಹೆಸರುಗಳನ್ನು, ವ್ಯಕ್ತಿಗಳನ್ನು, ದಿನಚರಿ ಕೆಲಸಗಳನ್ನು, ವಸ್ತುಗಳನ್ನು ಎಲ್ಲಿ ಇಟ್ಟಿದ್ದೀರಿ ಅನ್ನೋದನ್ನ ಸುಲಭದಲ್ಲಿ ಮರೆತುಬಿಡುತ್ತೀರಾ?
– ಕೆಲಸದ ವೇಳೆ ಅಥವಾ ಮಾತುಕತೆಗಳಲ್ಲಿ ಗಮನ ಕೇಂದ್ರೀಕರಿಸಲು ಕಷ್ಟಪಡುತ್ತೀರಾ?
– ಏನಾದರೂ ತೆಗೆದುಕೊಳ್ಳಲೆಂದೋ ನೋಡಲೆಂದೋ ಕೋಣೆ, ಫ್ರಿಡ್ಜ್, ಮೊಬೈಲ್ ತೆರೆದು ತಕ್ಷಣ ಯಾಕಾಗಿ ತೆರೆದೆ ಎಂದು ಪ್ರಶ್ನಿಸಿಕೊಳ್ಳುತ್ತೀರಾ?
ಇದ್ಯಾವುದೂ ನಿಮಗೆ ಆಗುತ್ತಿಲ್ಲ ಎಂದಾದರೇ ನಿಮ್ಮ ಮೆದುಳಿನ ಆರೋಗ್ಯ ಚೆನ್ನಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಆದರೆ ಇವುಗಳು ನಿಮಗೂ ಆಗುತ್ತಿದ್ದರೆ ನೀವು ಮೆದುಳಿನ ಕಡೆಗೆ ಗಮನಹರಿಸಲೇಬೇಕು.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಪ್ರಪಂಚದಾದ್ಯಂತ 1 ಬಿಲಿಯನ್ ಗಿಂತ ಹೆಚ್ಚು ಜನರು ನರಮಂಡಲದ ಅಸ್ವಸ್ಥತೆ (neurological) ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸ್ಟ್ರೋಕ್ (Stroke), ಆಲ್ಜೈಮರ್ಸ್ (Alzheimer’s), ಪಾರ್ಕಿನ್ಸನ್ (Parkinson’s)ನಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ.
ಭಾರತದಲ್ಲಿ ಈ ರೋಗಗಳ ಪ್ರಮಾಣವು ಕಳೆದ 25 ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಸದ್ಯ 3 ಕೋಟಿ ಜನರು ನರಮಂಡಲದ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಜಾಗತಿಕವಾಗಿ, ಅದರಲ್ಲೂ ಯುವ ಜನತೆ ಮತ್ತು ಹಿರಿಯರಲ್ಲಿ ಹತಾಶೆ ಆತಂಕ ಹೆಚ್ಚು ಕಾಡುತ್ತಿದೆ. ಹೀಗಾಗಿಯೇ Brain health for all ages ಎಂದು ಹೇಳಲಾಗಿರುವುದು.
ಮೆದುಳಿನ ಆರೋಗ್ಯ ಯಾಕೆ ಮುಖ್ಯ?
ಸ್ಪಷ್ಟವಾಗಿ ಮತ್ತು ಸೃಜನಾತ್ಮಕವಾಗಿ ಚಿಂತಿಸಲು, ಭಾವನೆಗಳನ್ನು ಸರಿಯಾಗಿ ನಿಯಂತ್ರಿಸಲು, ನೆನಪಿನ ಶಕ್ತಿಯನ್ನು ಕಾಯ್ದುಕೊಳ್ಳಲು ಮತ್ತು Neurodegenerative diseases ನಿಂದ ದೂರವಿರಲು ಮೆದುಳಿನ ಆರೋಗ್ಯ ತುಂಬಾ ಮುಖ್ಯವಾಗಿದೆ.
ಮೆದುಳಿಗೆ ಪೋಷಣೆ ನೀಡುವ ಆಹಾರಗಳು :-

ಒಮೆಗಾ-3 (Omega-3 Fatty Acids) – ಮೀನುಗಳು, ಅಗಸೆ ಬೀಜ, ಚೀಯಾ ಬೀಜ, ವಾಲ್ನೆಟ್ ಗಳಲ್ಲಿ ಸಿಗುತ್ತದೆ. ಮೆದುಳಿನ ಘಟಕಗಳ ನಿರ್ಮಾಣದಲ್ಲಿ DHA (Docosahexaenoic Acid) ಎಂಬ ಒಮೆಗಾ-3 ಉತ್ಪನ್ನ ಪ್ರಮುಖ ಪಾತ್ರ ವಹಿಸುತ್ತದೆ. ಮೆದುಳಿನ ಕೋಶಗಳ ನಡುವಿನ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಏಕಾಗ್ರತೆಗೆ ಸಹಕಾರ ನೀಡುತ್ತದೆ.
ರೋಗನಿರೋಧಕ ಶಕ್ತಿ (Antioxidants) – ತರಕಾರಿಗಳು, ಹಣ್ಣುಗಳು, ಪಲಾಕ್ ಸೊಪ್ಪು, ಅರಿಷಿಣ – ಇತ್ಯಾದಿ ಆಹಾರಗಳಲ್ಲಿ ಸಿಗುತ್ತದೆ. Free Radicals ವಿರುದ್ಧ ಹೋರಾಡಿ Oxidative Stressನಿಂದ ಮೆದುಳನ್ನು ರಕ್ಷಿಸುತ್ತದೆ.
ಬಿ ವಿಟಮಿನ್ ಗಳು (B-Vitamins – B6, B9, B12) – ಮೊಟ್ಟೆ, ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಸೊಪ್ಪುಗಳು, ಹಾಲಿನ ಉತ್ಪನ್ನಗಳಲ್ಲಿ ಸಿಗುತ್ತದೆ. Serotonin, Dopamine – ಮುಂತಾದ Happy hormones ಉತ್ಪತ್ತಿಗೆ ಅಗತ್ಯ. ಮೆದುಳಿನ ಶಿಥಿಲತೆಗೆ ಹಾಗೂ Alzheimer’s ಗೆ ಕಾರಣವಾಗುವ Homocysteine ತಗ್ಗಿಸಲು ಸಹಾಯ ಮಾಡುತ್ತದೆ. ಸ್ಪಷ್ಟವಾದ ಚಿಂತನೆ, ನರವ್ಯವಸ್ಥೆಯ ಕೆಲಸಕ್ಕೆ ಅಗತ್ಯವಿರುವ ಪೋಷಕಾಂಶಗಳಿವು.
Read this also : Memory Power; ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ 4 ಆಹಾರಗಳನ್ನು ನೀಡಿ!
ವಿಟಮಿನ್ ಡಿ (Vitamin D) – ಸೂರ್ಯನ ಕಿರಣ, ಮಶ್ರೂಮಿನಲ್ಲಿ ಸಿಗುತ್ತದೆ. ಜ್ಞಾಪಕಶಕ್ತಿ ಮತ್ತು Neuroplasticity ಗೆ (ಮೆದುಳಿನ ರೂಪಾಂತರ ಸಾಮರ್ಥ್ಯ) ಸಹಕಾರಿ. ವಿಟಮಿನ್ ಡಿ ಕಡಿಮೆ ಇದ್ದರೆ Brain Fog ಸಂಭವಿಸಿ ಖಿನ್ನತೆ, ಆತಂಕ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದು ಮೆದುಳಿನ ರೋಗ ನಿರೋಧಕ ಶಕ್ತಿಗೆ ಸಹಕಾರಿಯಾಗಿದೆ.
ನೀರು (Hydration) – ಮೆದುಳಿನ ಕೆಲಸಕ್ಕೆ ನೀರು ತುಂಬಾ ಮುಖ್ಯ. ದೇಹದಲ್ಲಿ ನೀರಿನ ಕೊರತೆಯಿಂದ ತಲೆನೋವು, ನಿದ್ರಾ ಹೀನತೆ, ಏಕಾಗ್ರತೆಯ ಕೊರತೆ ಉಂಟಾಗಬಹುದು. ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯಿರಿ.
ಮೆದುಳನ್ನು ಚುರುಕು ಮಾಡುವ ವ್ಯಾಯಾಮಗಳು : –

ಶಾರೀರಿಕ ಚಟುವಟಿಕೆ (Physical Exercise) – ವಾಕಿಂಗ್, ರನ್ನಿಂಗ್, ಯೋಗ, ಈಜು, ನೃತ್ಯ, ಹೀಗೆ ಯಾವುದೇ ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ರಕ್ತಪ್ರವಾಹ ಮತ್ತು ಆಮ್ಲಜನಕ ಮೆದುಳಿಗೆ ಹೆಚ್ಚಾಗಿ ಹೋಗುತ್ತದೆ. BDNF (Brain-Derived Neurotrophic Factor) ಎಂಬ ಪ್ರೊಟೀನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಹೊಸ ಕೋಶಗಳ ಬೆಳವಣಿಗೆಗೂ ಸಹಾಯವಾಗುತ್ತದೆ.
ಮೆದುಳಿನ ಪ್ರಚೋದನೆ (Mental Stimulation) – ಪಜಲ್ಜ್, ಸುಡುಕು, ಚೆಸ್ ಆಡುವುದು, ಹೊಸ ಭಾಷೆ ಕಲಿಯುವುದು, ಹೊಸ ಕೌಶಲ ಕಲಿಯುವುದು, ಓದುವುದು, ಬರೆಯುವುದು ಮೆದುಳಿಗೆ ತುಂಬಾ ಉಪಯುಕ್ತ. ನಿಮಗೆ ಇಷ್ಟವಾದುದ್ದನ್ನು ನಿತ್ಯ ಮಾಡಿ ಇದರಿಂದ ಯೋಚನಾ ಶಕ್ತಿ, ಏಕಾಗ್ರತೆ ಶಕ್ತಿ, ನೆನಪಿನ ಶಕ್ತಿ, ಗಮನ ನೀಡುವ ಅಭ್ಯಾಸ ಹೆಚ್ಚಾಗುತ್ತದೆ. ಮೆದುಳು ಚುರುಕಾಗುತ್ತದೆ.
ಸಾಮಾಜಿಕ ಸಂಪರ್ಕ (Social Interaction) – ಮನೆಯವರು, ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಮಾತನಾಡುವುದು ಮೆದುಳಿಗೆ ಶಕ್ತಿಕೊಟ್ಟಂತಾಗುತ್ತದೆ. ಇದರಿಂದ ವಿಷಯಗಳನ್ನು ತಿಳಿದುಕೊಳ್ಳಲು, ಭಾವನೆಗಳ ವಿನಿಮಯ ಮಾಡಿಕೊಳ್ಳಲು ಸಹಾಯವಾಗುತ್ತದೆ. ಮುಖ್ಯವಾಗಿ ಒಂಟಿತನ, ಖಿನ್ನತೆ ದೂರವಾಗುತ್ತದೆ.
ನಿದ್ರೆ – ಪ್ರತಿ ರಾತ್ರಿ 7-9 ಗಂಟೆಗಳ ಕಾಲ ನಿದ್ರೆ ಮಾಡುವುದು ಮೆದುಳಿನ ಆರೋಗ್ಯಕ್ಕೆ ತುಂಬಾ ಮುಖ್ಯ. ನಿದ್ರೆಯ ಸಮಯದಲ್ಲಿ ಮೆದುಳು ವಿಷಕಾರಿ ಅಂಶಗಳನ್ನು ಹೊರಹಾಗುತ್ತದೆ. ನೆನಪಿನ ಶಕ್ತಿಯನ್ನು ಗಟ್ಟಿಗೊಳಿಸುತ್ತದೆ. ಒಳ್ಳೆ ನಿದ್ರೆ ಮಾಡಿದರೆ ಬೆಳಗ್ಗೆ ಎದ್ದಾಗ ಹೆಚ್ಚು ಉತ್ಸುಕರಾಗುತ್ತೀರಿ.
ಮೆದುಳಿನ ಆರೈಕೆಯು ವರ್ಷಕ್ಕೆ ಒಮ್ಮೆ ಅಲ್ಲ, ಪ್ರತಿದಿನದ ಆದ್ಯತೆಯಾಗಲಿ. ವಿಶ್ವ ಮೆದುಳಿನ ದಿನದ ಶುಭಾಶಯಗಳು.










