ಮನುಷ್ಯನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ದೇಹಕ್ಕೆ ಎಲ್ಲಾ ಬಗೆಯ ಪೋಷಕಾಂಶಗಳು ನಿಯಮಿತ ಪ್ರಮಾಣದಲ್ಲಿ ಸಿಗಬೇಕು. ಪೋಷಕಾಂಶದಲ್ಲಿ ಕೊರತೆಯಾದ್ರೆ ಸಮಸ್ಯೆಗಳು ಶುರುವಾಗುತ್ತದೆ. ಈಗಂತೂ ಬೆನ್ನು ನೋವು, ಮೂಳೆ ಸವೆತ, ಸುಸ್ತು, ತಲೆನೋವು ಅನ್ನೋದು ಕಾಮನ್ ಸಮಸ್ಯೆ ಆಗಿದೆ. ಈ ಸಮಸ್ಯೆಗಳಿಗೆ ಹಲವಾರು ಕಾರಣಗಳಿರಬಹುದು. ಆದರೆ ಇದಕ್ಕೆ ಮುಖ್ಯ ಕಾರಣ “ವಿಟಮಿನ್ ಡಿ ಕೊರತೆ”(Vitamin D)
ವಿಟಮಿನ್ ಡಿ(Vitamin D) ಕೊರತೆಯಿಂದ ಏನೆಲ್ಲಾ ಸಮಸ್ಯೆ?
ವಿಟಮಿನ್ ಡಿ ಸಮಸ್ಯೆಯಾದರೆ ಹಲವಾರು ತೊಂದರೆಗಳು ಬರುತ್ತವೆ. ರಕ್ತದಲ್ಲಿ 20ng/ml ಅಂದರೆ ಪ್ರತಿ ಮಿಲಿಲೀಟರ್‌ಗೆ 20 ನ್ಯಾನೊಗ್ರಾಂ ಕಡಿಮೆ ವಿಟಮಿನ್ ಡಿ ಕಂಡು ಬಂದ್ರೆ ಡಿ ವಿಟಮಿನ್ ಕೊರತೆ ಇದೆ ಎಂದರ್ಥ. ದೇಹದಲ್ಲಿ ಡಿ ವಿಟಮಿನ್ ಕೊರತೆಯಾದ್ರೆ ಮೊದಲಿಗೆ ಎದುರಾಗುವ ಸಮಸ್ಯೆ ಎಂದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಆಗಾಗ್ಗೆ ಶೀತ, ಕೆಮ್ಮು ಸಮಸ್ಯೆ ಕಾಡುತ್ತಿದ್ದರೆ ವಿಟಮಿನ್ ಡಿ ಕೊರತೆ ಕೂಡ ಒಂದು ಕಾರಣವಿರಬಹುದು. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇನ್ನೊಂದು ಮುಖ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ, ಉಸಿರಾಟದ ಸಮಸ್ಯೆ, ತಲೆಸುತ್ತು ಹಾಗೂ ಸುಸ್ತು. ಇವುಗಳಿಗೆ ವಿಭಿನ್ನ ಕಾರಣವಿದ್ದರೂ ವಿಟಮಿನ್ ಡಿ ಸಮಸ್ಯೆಯೂ ಪ್ರಮುಖ ಕಾರಣ ಆಗಿರಬಹುದು. ಇಷ್ಟೇ ಅಲ್ಲದೇ ಮೂಳೆಯು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡೊದಕ್ಕೆ ಈ ವಿಟಮಿನ್‌ನ ಅಗತ್ಯವಿದೆ. ಆದ್ದರಿಂದ ಇದರ ಕೊರತೆಯಾದರೆ ಮೂಳೆ ಸವೆತವೂ ಕಾಣಿಸಿಕೊಳ್ಳಬಹುದು. ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ.
ಇದರ ಇನ್ನೊಂದು ಪ್ರಮುಖ ಲಕ್ಷಣ ಎಂದರೆ, ದೇಹದ ಮೇಲೆ ಗಾಯವಾಗಿದ್ರೆ ಬೇಗನೆ ವಾಸಿಯಾಗದೇ ಇರುವುದು. ಮಧುಮೇಹ ರೋಗಿಗಳ ಲಕ್ಷಣಗಳಲ್ಲಿ ಇದು ಒಂದಾದರೂ ವಿಟಮಿನ್ ಡಿ ಕೊರತೆ ಇನ್ನೊಂದು ಕಾರಣ. ಜೊತೆಗೆ ಕೂದಲು ಉದರುವುದು, ಸ್ನಾಯುಗಳಲ್ಲಿ ನೋವು ಕಂಡು ಬರುವುದು ಕೂಡ ಎದುರಾಗಬಹುದು.
ವಿಟಮಿನ್ ಡಿ(Vitamin D) ಹೆಚ್ಚಿಸಿಕೊಳ್ಳುವುದು ಹೇಗೆ?
ವಿಟಮಿನ್ ಡಿಗೆ ದೇಹದಲ್ಲಿನ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಎಲ್ಲವನ್ನೂ ನಿಭಾಯಿಸಬಲ್ಲ ಶಕ್ತಿಯಿದೆ. ಇದನ್ನ ಸೂರ್ಯನ ವಿಟಮಿನ್ ಅಂತಾಲೂ ಕರೆಯುತ್ತಾರೆ. ಸೂರ್ಯ ರಶ್ಮಿ ಮೈಮೇಲೆ ಬಿದ್ದರೆ ಹಲವಾರು ಸಮಸ್ಯೆಗಳು ದೂರವಾಗುತ್ತದೆ. ಅವುಗಳಲ್ಲಿ ಒಂದು ವಿಟಮಿನ್ ಡಿ ಸಮಸ್ಯೆ. ಸೂರ್ಯ ರಶ್ಮಿಯು ಚರ್ಮ, ಹೃದಯ, ಬ್ಯಾಕ್ಟೀರಿಯಾ, ಕೊಲೆಸ್ಟ್ರಾಲ್, ರಕ್ತದೊತ್ತಡ ಮುಂತಾದವುಗಳನ್ನು ನಿಯಂತ್ರಿಸುತ್ತದೆ.
ವಿಟಮಿನ್ ಡಿ ಕೊರತೆಗೆ ಸೂರ್ಯನ ಕಿರಣವೇ ಮದ್ದು. ಹಾಗಂತ ಸುಡು ಬಿಸಿಲಿನಲ್ಲಿ ಹೋದರೆ ಇನ್ನಷ್ಟು ಸಮಸ್ಯೆಗಳು ಬರುತ್ತದೆ. ಹೆಚ್ಚಾಗಿ ಬೆಳಿಗ್ಗೆ 8 ಗಂಟೆಯ ಒಳಗಿನ ಸೂರ್ಯನ ಕಿರಣ ಮತ್ತು ಸಂಜೆ 4 ಗಂಟೆಯ ಬಳಿಕದ ಕಿರಣಗಳು ಮನುಷ್ಯನ ದೇಹಕ್ಕೆ ಒಳ್ಳೆಯದು. ಸಂಶೋಧನೆವೊಂದರ ಪ್ರಕಾರ ಶೇಕಡಾ 50ರಷ್ಟು ಜನರು ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದೇ ಇಲ್ಲವಂತೆ. ಆದ್ದರಿಂದ ದೇಹಕ್ಕೆ ಇನ್ನಿಲ್ಲದ ಸಮಸ್ಯೆಗಳು ಬಾಧಿಸುತ್ತವೆ. ದಿನದಲ್ಲಿ 8 ರಿಂದ 15 ನಿಮಿಷ ಬಿಸಿಲಿನಲ್ಲಿ ನಿಲ್ಲುವುದು ಒಳ್ಳೆಯದು.
ವಿಟಮಿನ್ ಡಿ(Vitamin D) ವೃದ್ಧಿಸುವ ಆಹಾರಗಳು
ವಿಟಮಿನ್ ಡಿ ಅನ್ನು ಸಾಮಾನ್ಯವಾಗಿ ವಿವಿಧ ಆಹಾರಗಳಿಂದ ಪಡೆಯಲಾಗುತ್ತದೆ. ಮಾಂಸಾಹಾರಿಗಳಾಗಿದ್ದರೆ, ಮೀನು ಹಾಗೂ ಸಮುದ್ರ ಆಹಾರಗಳ ಸೇವನೆಯಿಂದ ವಿಟಮಿನ್ ಡಿ ಪಡೆಯಬಹುದು. ಅದರಲ್ಲಿಯೂ ಭೂತಾಯಿ, ಸಿಗಡಿ, ಬಂಗುಡೆ ಈ ಮೀನುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿಯೂ ಇದು ಸಿಗಲಿದೆ.
ಕೆಲವು ವಿಧದ ಅಣಬೆಗಳು ವಿಟಮಿನ್ ಡಿಯ ಉತ್ತಮ ಮೂಲವಾಗಿವೆ. ಮೊಸರಿನಲ್ಲಿ ವಿಟಮಿನ್ ಡಿ, ಪ್ರೋಬಯಾಟಿಕ್‌ಗಳು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಸಸ್ಯಹಾರಿಗಳ ಫೇವರೇಟ್ ಫುಡ್ ಆಗಿರುವ ಪನೀರ್‌ನಲ್ಲಿಯೂ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅಂಶ ಹೆಚ್ಚಿರುತ್ತದೆ. ನಿಯಮಿತವಾಗಿ ಪಾಲಕ್ ಸೊಪ್ಪು ಸೇವಿಸುವುದರಿಂದಲೂ ವಿಟಮಿನ್ ಡಿ ಪಡೆಯಬಹುದು.ಇವುಗಳನ್ನು ಬಿಟ್ಟರೆ ಕಿತ್ತಳೆ ಹಣ್ಣಿನ ಜ್ಯೂಸ್, ಓಟ್ಸ್, ಧಾನ್ಯಗಳಲ್ಲಿ ವಿಟಮಿನ್ ಡಿ ಸಿಗುತ್ತದೆ.
For more articles visit GSS Media










