Oral Health– ಹಲ್ಲು ನೋವು(Toothache) ಸಾಕಷ್ಟು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ಆದರೆ ಈ ಸಾಮಾನ್ಯ ಸಮಸ್ಯೆ ಚಳಿಗಾಲದಲ್ಲಿ ಮಾತ್ರ ಅಸಾಮಾನ್ಯ ನೋವು ತಂದೊಡ್ಡುತ್ತೆ. ಬಿರುಕು ಬಿಟ್ಟ ಹಲ್ಲು, ಹುಳುಕು ಹಲ್ಲು, ಒಸಡು ನೋವು ಅಥವಾ ಇತರೆ ಕಾರಣಗಳಿಂದ ಹಲ್ಲು ನೋವು ಉಂಟಾಗಬಹುದು. ಕೆಲವೊಬ್ಬರಿಗೆ ಹಲ್ಲು ನೋವು ವಿಪರೀತವಾಗಿ ಕಾಡುತ್ತದೆ. ತಿಂದ್ರೂ ಕಷ್ಟು ತಿಂದೇ ತಿದ್ರೂ ಕಷ್ಟ ಅನ್ನೋ ರೀತಿ ಆಗಿಬಿಡುತ್ತೆ. ಕೆಲವೊಮ್ಮೆ ರಾತ್ರಿ ಮಲಗಲು ಆಗದಷ್ಟು ಹಲ್ಲು ನೋವು ಇರುತ್ತೆ. ಹಲ್ಲು ನೋವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಕೆಲವು ಮನೆಮದ್ದುಗಳ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.
1. ಉಪ್ಪು ನೀರು
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಹಲ್ಲು ನೋವಿಗೆ ತಾತ್ಕಾಲಿಕ ಪರಿಹಾರ ನೀಡುತ್ತದೆ. ಉಪ್ಪು ನೀರಿನಲ್ಲಿ ಶುದ್ಧೀಕರಣ ಗುಣಗಳು ಇರುತ್ತದೆ. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾ ತಗ್ಗಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ 1 ಟೀ ಚಮಚ ಉಪ್ಪು ಬೆರೆಸಿ, ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸಿ, ನಂತರ ಅದನ್ನು ಉಗಿಯಿರಿ. ದಿನಕ್ಕೆ 3-4 ಬಾರಿ ಇದನ್ನು ಪುನರಾವರ್ತಿಸಿ.
2. ಲವಂಗದ ಎಣ್ಣೆ
ಲವಂಗದ ಎಣ್ಣೆಗೆ ಹಲ್ಲು ನೋವನ್ನು ಕಡಿಮೆ ಮಾಡುವ ಗುಣಗಳು ಇವೆ. ಲವಂಗ ಎಣ್ಣೆಯು ಯುಜೆನಾಲ್ ಅನ್ನೋ ಅಂಶವನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಲವಂಗ ಎಣ್ಣೆಯು ಯಾವುದೇ ಮೆಡಿಕಲ್ ಸ್ಟೋರ್‌ನಲ್ಲಿ ಸುಲಭವಾಗಿ ಸಿಗುತ್ತದೆ. 2 ರಿಂದ 3 ಹನಿ ಲವಂಗದ ಎಣ್ಣೆಯನ್ನು ಹತ್ತಿಗೆ ಹಾಕಿಕೊಂಡು ಅದನ್ನು ನೋವಿರುವ ಹಲ್ಲಿನ ಮೇಲೆ ಇಟ್ಟುಕೊಳ್ಳಿ. 20-30 ನಿಮಿಷಗಳ ಕಾಲ ಲವಂಗದ ಎಣ್ಣೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಲವಂಗದ ಎಣ್ಣೆಯನ್ನು ಕೇವಲ ನೋವಿದ್ದಾಗ ಮಾತ್ರವಲ್ಲ, ನಾರ್ಮಲ್ ಆಗಿ ಬಳಸಿದರೂ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ. ಅದಕ್ಕಾಗಿ ಒಂದು ಲೋಟದಷ್ಟು ನೀರಿಗೆ 10 ಡ್ರಾಪ್ಸ್ ಲವಂಗದ ಎಣ್ಣೆಯನ್ನು ಸೇರಿಸಿ ಅದನ್ನು ಒಂದು ಬಾಟಲಿನಲ್ಲಿ ಶೇಖರಿಸಿಡಿ. ನೀವು ಬಾಯಿ ಮುಕ್ಕಳಿಸಬೇಕು ಎಂದಾಗ ಲವಂಗ ಎಣ್ಣೆ ಮಿಶ್ರಿತ ನೀರಿನಿಂದ ಮುಕ್ಕಳಿಸಿ. ಕೆಮಿಕಲ್ ಹೊಂದಿರುವ ಎಷ್ಟೋ ಮೌತ್ ವಾಶ್‌ಗಿಂತ ಇದು ಪರಿಣಾಮಕಾರಿ. ಆದರೆ ಈ ನೀರನ್ನು ಆಗ್ಗಾಗ್ಗೆ ಬದಲಿಸುತ್ತಿರಿ. ಇನ್ನು ನೀವು ಹಲ್ಲುಜ್ಜುವಾಗ ನಿಮ್ಮ ಪೇಸ್ಟ್ಗೆ ಒಂದು ಡ್ರಾಪ್ ಲವಂಗದ ಎಣ್ಣೆ ಹಾಕಿಕೊಂಡರೂ ಹಲ್ಲಿನ ಕಾಳಜಿ ಮಾಡಿದಂತಾಗುತ್ತದೆ. ಹಲ್ಲು ನೋವಿದ್ದು, ಲವಂಗದ ಎಣ್ಣೆಯೂ ಇಲ್ಲದಿದ್ದರೆ ಆಗ ಲವಂಗವನ್ನೇ ನೋವಿರುವ ಹಲ್ಲುಗಳ ಮಧ್ಯೆ ಇರಿಸಿಕೊಳ್ಳಿ.
3. ಸೀಬೇಕಾಯಿ ಎಲೆ
ಸೀಬೆ ಹಣ್ಣಿನ ಎಲೆಗಳು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಗಾಯಗಳನ್ನು ಗುಣ ಪಡಿಸಲು ಸಹಾಯ ಮಾಡುತ್ತದೆ. ಸೀಬೆ ಹಣ್ಣಿನ ಎಲೆಗಳನ್ನು ನೇರವಾಗಿ ಅಗಿಯುವುದರಿಂದ ಬಾಯಿಯ ಹುಣ್ಣುಗೆ ಇದು ಮದ್ದಿನಂತೆ ಕೆಲಸ ಮಾಡುತ್ತದೆ. ಸೀಬೆ ಎಲೆಯನ್ನು ಚೆನ್ನಾಗಿ ಅಗಿದು ಅದರ ರಸವನ್ನು ಕುಡಿದು, ಅಗಿದ ಎಲೆಯನ್ನು ಉಗಿಯಿರಿ. ಅಥವಾ ಎಲೆಗಳನ್ನು ಸಣ್ಣಗೆ ಕತ್ತರಿಸಿ ಕುದಿಯುವ ನೀರಿಗೆ ಬಳಸಿ ಅದು ಸ್ವಲ್ಪ ತಣ್ಣಗಾದಾಗ ಮೌತ್ ವಾಶ್ ಆಗಿ ಬಳಸಿದರೆ ನೋವು ನಿವಾರಣೆಯಾಗುತ್ತದೆ.
4. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಇದು ಹಲ್ಲು ನೋವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಬೆಳ್ಳುಳ್ಳಿಯನ್ನು ಜಜ್ಜಿ ಸ್ವಲ್ಪ ಉಪ್ಪು ಹಾಕಿ ಇದನ್ನು ನೋವಿರುವ ಹಲ್ಲಿನ ಮೇಲೆ ಇಟ್ಟುಕೊಳ್ಳಿ. ಅಥವಾ ಬೆಳ್ಳುಳ್ಳಿಯನ್ನು ನೇರವಾಗಿ ಜಗಿದು, ಅವುಗಳ ರಸವನ್ನು ಹಲ್ಲುಗಳಿಗೆ ಹಚ್ಚಿ.
5. ಮನೆಯಲ್ಲೇ ತಯಾರಿಸಿ ಪುಡಿ
ರಾಕ್ ಸಾಲ್ಟ್, ಲವಂಗ ಪುಡಿ, ಬೇಕಿಂಗ್ ಸೋಡ, ಅರಿಶಿನ, ಕರಿಮೆಣಸು ಪುಡಿಯನ್ನು ಮಿಶ್ರಣ ಮಾಡಿ ಒಂದು ಪುಡಿ ತಯಾರಿಸಿ. ಇದನ್ನು ನೋವಿರುವ ಹಲ್ಲಿಗೆ ಹಚ್ಚಿ. ಇದನ್ನು ಹಲ್ಲು ನೋವಿದ್ದಾಗಷ್ಟೇ ಅಲ್ಲದೇ ಈ ಪುಡಿಯನ್ನು ಕೈಯ ಬೆರಳಲ್ಲಿ ತೆಗೆದುಕೊಂಡು ಹಲ್ಲು ಉಜ್ಜಿದಂತೆ ಉಜ್ಜುವುದರಿಂದಲೂ ಹಲ್ಲಿನ ಕಾಳಜಿ ಮಾಡಿದಂತಾಗುತ್ತದೆ. ಈ ಮನೆಮದ್ದುಗಳು ಸುಲಭಕ್ಕೆ ಸಿಗುವಂತದ್ದು. ಇವುಗಳಿಂದ ಸೈಡ್ ಎಫೆಕ್ಟ್ ಆಗುತ್ತೆಂಬ ಭಯ ಬೇಡ. ಹಾಗೆ ಇವುಗಳನ್ನು ಕೇವಲ ಹಲ್ಲು ನೋವಿದ್ದವರು ಮಾತ್ರ ಮಾಡದೇ ಹಲ್ಲಿನ ಕಾಳಜಿ ಮಾಡುವ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬಹುದು. ಹಲ್ಲು ನೋವಿದ್ದೂ, ಇವುಗಳನ್ನು ಪ್ರಯತ್ನಿಸಿದ ನಂತರವೂ ಸ್ವಲ್ಪವೂ ಫಲಿತಾಂಶ ಕಾಣದಿದ್ದರೆ ಹಲ್ಲಿನ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ.
Read this also : Asthma; ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ! ಹೀಗೆ ಕೇರ್ ಮಾಡಿಕೊಳ್ಳಿ!










