ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕುಗಟ್ಟುವುದು ಸಹಜ. ಆದರೆ ವಯಸ್ಸೇ ಆಗದೇ ಚರ್ಮದಲ್ಲಿ ಸುಕ್ಕು ಕಾಣಿಸಿಕೊಂಡರೆ ಅದು ಸಮಸ್ಯೆ(Premature Aging). ಚೆನ್ನಾಗಿ ಕಾಣಿಸಬೇಕು, ಯಂಗ್ ಆಗಿ ಕಾಣಿಸಬೇಕು ಅಂತಾ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ? ನಮ್ಮ ಚರ್ಮಕ್ಕೆ ಬೇಗ ವಯಸ್ಸಾಗೋದು ಯಾಕೆ? ಆ ರೀತಿ ಆಗದೇ ಇರೋ ಥರ ನೋಡಿಕೊಳ್ಳುವುದು ಹೇಗೆ? ಯಂಗ್ ಆಗಿ ಕಾಣಲು ಇರುವ 6 ಸೂಪರ್ ಫುಡ್ ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ
ಚರ್ಮದಲ್ಲಿ ಕೊಲಾಜಿನ್ (Collagen)ಪಾತ್ರ
ನಮ್ಮ ಚರ್ಮವನ್ನು ಮೃದುವಾಗಿ ಇರಿಸಲು, ಅದರಲ್ಲಿ ಎಲಾಸ್ಟಿಸಿಟಿ ವೃದ್ಧಿಸಲು, ನಮ್ಮ ಚರ್ಮಕ್ಕೆ ರಚನೆ ನೀಡುವುದರಲ್ಲಿ ಕೊಲಾಜಿನ್(Collagen) ಎಂಬ ಪ್ರೋಟಿನ್ ತುಂಬಾ ಮುಖ್ಯ. ನಮ್ಮೆಲ್ಲರ ದೇಹದಲ್ಲೂ ಕೊಲಾಜಿನ್ ನೈಸರ್ಗಿಕವಾಗಿ ಇರುತ್ತದೆ. ಆರೋಗ್ಯಕರ ಚರ್ಮ, ಕೂದಲು, ಮೂಳೆಗೆ ಈ ಪ್ರೋಟಿನ್ ಅತ್ಯಾವಶ್ಯಕ. ನಮ್ಮ ಚರ್ಮದಲ್ಲಿ ಮೂರು ಪದರಗಳಿದ್ದು, ಅದರ ಮಧ್ಯದ ಪದರದಲ್ಲಿ ಈ ಕೊಲಾಜಿನ್ ಪ್ರೋಟಿನ್ ಇರುತ್ತದೆ.

ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಕೊಲಾಜಿನ್ ಕಮ್ಮಿಯಾಗುತ್ತಾ ಹೋಗುವುದು ನೈಸರ್ಗಿಕ. ಹಾಗಾಗಿ ವಯಸ್ಸಾದವರ ಚರ್ಮ ತುಂಬಾ ಸುಕ್ಕುಗಟ್ಟಿರುತ್ತದೆ. ಆದರೆ ಕೆಲವರಲ್ಲಿ ಕೊಲಾಜಿನ್ ಬೇಗನೇ ಕಮ್ಮಿಯಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಕೆಲವರ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳುತ್ತದೆ.
ಚರ್ಮಕ್ಕೆ ಬೇಗ ವಯಸ್ಸಾಗಲು ಕಾರಣ?
ಚರ್ಮಕ್ಕೆ ಬೇಗ ವಯಸ್ಸಾಗಲು ಕಾರಣ ನಮ್ಮ ಜೀವನಶೈಲಿ. ಅದರಲ್ಲೂ ನಮ್ಮ 4 ಅಭ್ಯಾಸಗಳಿಂದ ಚರ್ಮದಲ್ಲಿ ಕೊಲಾಜಿನ್ ಗುಣಮಟ್ಟ ಹಾಳಾಗಿ ಅದು ನಮ್ಮ ಚರ್ಮ ಬೇಗ ವಯಸ್ಸಾಗುವಂತೆ ಮಾಡುತ್ತದೆ. ಆ 4 ತಪ್ಪುಗಳು ಯಾವುವೆಂದರೆ, ಅಧಿಕ ಸಕ್ಕರೆ ಸೇವನೆಯಿಂದ ನಮ್ಮ ಚರ್ಮದಲ್ಲಿ ವಯಸ್ಸಾದ ಸೂಚನೆಗಳು ಬೇಗನೇ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಬೇಗ ವಯಸ್ಸಾಗೋ ಗುಣವನ್ನ ಹೆಚ್ಚಿಸುತ್ತೆ. ಚರ್ಮ ಬೇಗ ಸುಕ್ಕುಗಟ್ಟೋದಕ್ಕೆ ಸ್ಮೊಕಿಂಗ್ ಕೂಡ ಕಾರಣ. ಧೂಮಪಾನವು ನಮ್ಮ ದೇಹದಲ್ಲಿ ಕೊಲಾಜಿನ್ ಪ್ರಮಾಣವನ್ನು ಕುಗ್ಗಿಸುತ್ತೆ. ಸೂರ್ಯನ ಬೆಳಕು ಕೂಡ ನಮ್ಮ ಚರ್ಮ ಬೇಗ ವಯಸ್ಸಾದಂತೆ ಕಾಣುವಂತೆ ಮಾಡುತ್ತೆ. ಅಧಿಕ ಒತ್ತಡ ಕೂಡ ಕೊಲಾಜಿನ್ ಗುಣಮಟ್ಟವನ್ನು ಹಾಳು ಮಾಡುತ್ತದೆ.
ಕೊಲಾಜಿನ್ ವೃದ್ಧಿಸುವ ಆಹಾರಗಳು
ಕೊಲಾಜಿನ್ ವೃದ್ಧಿಸಲು ಮತ್ತು ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂದರೆ ಕೆಲವು ಆಹಾರವನ್ನು ನಮ್ಮ ಊಟದಲ್ಲಿ ಸೇರಿಸಿಕೊಳ್ಳಬೇಕು.

ಆಮ್ಲಾ
ಆಮ್ಲಾದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಕೊಲಾಜಿನ್ ಉತ್ಪಾದನೆಗೆ ವಿಟಮಿನ್ ಸಿ ಬೇಕೇಬೇಕು. ಆಮ್ಲಾವನ್ನ ಆಯುರ್ವೇದದಲ್ಲಿ ಸೂಪರ್ ಫುಡ್ ಅಂತಾ ಹೇಳಿದ್ದಾರೆ. ಇದು ಕೇವಲ ಚರ್ಮವಲ್ಲ, ಕೂದಲಿನ ಆರೋಗ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.
ಬೀಟ್ರೂಟ್
ಬೀಟ್ರೂಟಿನಲ್ಲಿಯೂ ವಿಟಮಿನ್ ಸಿ ಇರುತ್ತೆ. ಬೀಟ್ರೂಟ್ ಹಿಮೋಗ್ಲೋಬಿನ್ ಹೆಚ್ಚಿಸುವುದರಲ್ಲಿಯೂ ಉತ್ತಮ ಆಹಾರದ ಮೂಲವಾಗಿದೆ. ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಕೊಲಾಜಿನ್ ಡ್ಯಾಮೇಜ್ ಆಗದೇ ಇರೋ ಥರ ನೋಡಿಕೊಳ್ಳುತ್ತದೆ.
ಕ್ಯಾರೆಟ್
ಕ್ಯಾರೆಟ್ ನಲ್ಲಿರುವ ಬೀಟಾ-ಕ್ಯಾರೋಟಿನ್ ನಮ್ಮ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ಚರ್ಮದಲ್ಲಿ ಆರೋಗ್ಯಕರ ಜೀವಕೋಶಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಈ ಮೂರು ಪದಾರ್ಥಗಳನ್ನ ಮಿಶ್ರಣ ಮಾಡಿ ಜ್ಯೂಸ್ ರೀತಿ ಮಾಡಿಕೊಂಡು ಕುಡಿಯಬಹುದು. ಇದಕ್ಕೆ ಇನ್ನೊಂದು ಸೂಪರ್ ಫುಡ್ ಕೂಡ ಸೇರಿಸಿಕೊಳ್ಳಬಹುದು, ಅದು ಯಾವುದೆಂದರೆ ಶುಂಠಿ.
ಶುಂಠಿ
ಶುಂಠಿ ಕೂಡ ಕೊಲಾಜಿನ್ ಉತ್ಪತ್ತಿಯನ್ನು ವೃದ್ಧಿಸುತ್ತದೆ. ಆ ಮೂಲಕ ಚರ್ಮದಲ್ಲಿ ಕಾಣಿಸಿಕೊಳ್ಳುವ ಸುಕ್ಕನ್ನು ಹೋಗಲಾಡಿಸುತ್ತದೆ. ಚರ್ಮದ ಹೊಳಪಿಗೂ ಇದು ಸಹಕಾರಿ.
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನಲ್ಲಿಯೂ ವಿಟಮಿನ್ ಸಿ ಅಧಿಕವಾಗಿದ್ದು, ಕೊಲಾಜಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮೊಡವೆ, ಪಿಗ್ಮೆಂಟೇಶನ್ಗೂ ಇದು ಉತ್ತಮ ಮನೆಮದ್ದು.
ಬೋನ್ ಬ್ರೋತ್
ಮಾಂಸಹಾರಿಗಳಿಗೆ ಕೊಲಾಜಿನ್ ವೃದ್ಧಿಸಿಕೊಳ್ಳೋದಕ್ಕೆ ಇರುವ ಉತ್ತಮ ಆಹಾರದ ಮೂಲ ಎಂದರೆ ಅದು ಕಾಲು ಸೂಪು. ಇದನ್ನು ಮೂಳೆಸಾರು ಅಂತಾನೂ ಕರೀತಾರೆ. ಸಾಮಾನ್ಯವಾಗಿ ಮೂಳೆ ಕಟ್ ಆದಾಗ, ವೀಕ್ ಆದಾಗ ಕಾಲು ಸೂಪು ಕುಡಿಯುವುದನ್ನು ನೋಡಿರುತ್ತೇವೆ. ಇದರಲ್ಲಿ ಸಾಕಷ್ಟು ಕ್ಯಾಲ್ಶಿಯಂ, ಮೆಗ್ನಿಶಿಯಂ ಇರುತ್ತದೆ. ಇದು ಕೂಡ ಕೊಲಾಜಿನ್ ಗುಣ್ಣಮಟ್ಟವನ್ನ ಹೆಚ್ಚಿಸುತ್ತೆ.
ಚರ್ಮಕ್ಕೆ ಬೇಗ ವಯಸ್ಸಾಗಬಾರದು ಎಂದರೇ ನಮ್ಮ ಜೀವನ ಶೈಲಿ ಬದಲಿಸಿಕೊಳ್ಳುವುದರ ಜೊತೆಗೆ ಇವುಗಳನ್ನ ಸೇವನೆ ಮಾಡುವುದು ತುಂಬಾ ಮುಖ್ಯವಾಗುತ್ತದೆ.
Winter; ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ತಿಂತಿರೋ ಬಿಡ್ತೀರೋ ಇವುಗಳನ್ನು ತಿನ್ನಲೇಬೇಕು!










