ಕೆಲವರಿಗೆ ಋತುಚಕ್ರದಲ್ಲಿ ಸಮಸ್ಯೆ ಇರುತ್ತದೆ. ಕೆಲ ತಿಂಗಳು ಪೀರಿಯೆಡ್ ತಡವಾದರೆ, ಕೆಲ ತಿಂಗಳು ಬೇಗ ಶುರುವಾಗುತ್ತೆ. ಕೆಲವೊಮ್ಮೆ ಅಧಿಕ ರಕ್ತಸ್ರಾವ ಕೂಡ ಇರುತ್ತದೆ. ನೋವು, ಮಾನಸಿಕ ಕಿರಿಕಿರಿಯೂ ಆಗುತ್ತದೆ. ಅಂಥವರು ಸ್ತ್ರೀರೋಗ ತಜ್ಞರ ಬಳಿ ಹೋಗಿ – PCOS, Ultrasound ಪರೀಕ್ಷೆಗಳನ್ನ ಮಾಡಿಸಿದಾಗ ಎಲ್ಲಾವೂ ನಾರ್ಮಲ್ ಆಗಿಯೇ ಕಾಣಿಸುತ್ತದೆ. ಹಾಗಾದರೆ ಇಂಥ ಕೇಸ್ ಗಳಲ್ಲಿ ಏನು ಸಮಸ್ಯೆ ಆಗಿರಬಹುದು? ಈ ಬರಹದಲ್ಲಿ ಇದರ ಬಗ್ಗೆ ಒಂದು ಮುಖ್ಯವಾದ ಮಾಹಿತಿ ತಿಳಿಯೋಣ.
ಋತುಚಕ್ರದಲ್ಲಿ ಏನಾದರೂ ಸಮಸ್ಯೆ ಎಂದು ಬಂದಾಗ ತಕ್ಷಣ ಅಂದುಕೊಳ್ಳುವುದು PCOD, PCOS ಇರಬಹುದು ಎಂದು. ಆದರೆ ವಿಟಮಿನ್ ಡಿ ಬಗ್ಗೆ ಗಮನಹರಿಸಿದ್ದೇವಾ!? ಹೌದು ಋತುಚಕ್ರದ ಸಮಸ್ಯೆಗೆ ವಿಟಮಿನ್ ಡಿ ಕೊರತೆ ಕೂಡ ಕಾರಣವಾಗುತ್ತದೆ.

ವಿಟಮಿನ್ ಡಿ ಎಂದರೇನು?
ವಿಟಮಿನ್ ಡಿ ಎಂಬುದು ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದೆ.. ಆದರೆ ದೇಹದಲ್ಲಿ ಇದು ಹಾರ್ಮೋನ್ನಂತೆ ಕೆಲಸ ಮಾಡುತ್ತದೆ. ಬಹುತೇಕ ಜನರಿಗೆ Vitamin D ಎಂದರೆ, ಬಲವಾದ ಮೂಳೆಗಳಿಗೆ, ಕ್ಯಾಲ್ಸಿಯಂ ಹೀರಿಕೊಳ್ಳುವುದಕ್ಕೆ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸೋಕೆ ಅಗತ್ಯ ಎಂದಷ್ಟೇ ತಿಳಿದಿರುತ್ತದೆ. ಆದರೆ ಇಷ್ಟೇ ಅಲ್ಲದೆ ವಿಟಮಿನ್ ಡಿ ಮಹಿಳೆಯರ ಋತುಚಕ್ರ ಮತ್ತು ಸಂತಾನೋತ್ಪತ್ತಿ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇದು ಲೈಂಗಿಕ ಹಾರ್ಮೋನ್ ಗಳಾದ Estrogen ಮತ್ತು Progesterone ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅಂಡೋತ್ಪತ್ತಿ (Ovulation) ಮತ್ತು ತಿಂಗಳ ಮುಟ್ಟನ್ನು ಸಮತೋಲನಗೊಳಿಸುತ್ತದೆ.
ವಿಟಮಿನ್ ಡಿ ಕೊರತೆಯಾದರೆ;

ಮುಟ್ಟಿನಲ್ಲಿ ವ್ಯತ್ಯಯ ಆಗುವುದು. ಮುಟ್ಟು ತಡವಾಗಬಹುದು, ಬೇಗ ಬರಬಹುದು. ಕೆಲ ತಿಂಗಳು ಮುಟ್ಟು ಬಾರದೇ ಇರಬಹುದು. ಹೆಚ್ಚು ರಕ್ತಸ್ರಾವ ಮತ್ತು ತೀವ್ರವಾದ ನೋವು ಕಾಣಿಕೊಳ್ಳಬಹುದು. ಇವುಗಳಿಂದ PCOS ಸಮಸ್ಯೆಯ ಅಪಾಯವೂ ಹೆಚ್ಚಾಗುವುದು. ಸುಸ್ತು, ರೋಗ ನಿರೋಧಕ ಶಕ್ತಿ ಕುಗ್ಗುವುದು, ಸಂತಾನೋತ್ಪತ್ತಿ ಸಮಸ್ಯೆಗಳು ಎದುರಾಗಬಹುದು. Vitamin D ಕಡಿಮೆ ಇರುವ ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಇರುವುದು ಅಧ್ಯಯನಗಳ ಮೂಲಕವೂ ತಿಳಿದು ಬಂದಿದೆ.

ಒಟ್ಟು 77 ಯುವತಿಯರ ಮೇಲೆ ನಡೆದ ಅಧ್ಯಯನದಲ್ಲಿ, 60 ಮಂದಿ ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟ 30 ng/mL ಕ್ಕಿಂತ ಕಡಿಮೆ ಇದ್ದು, ಇವರಲ್ಲಿ 40% ಜನರು ಋತುಚಕ್ರದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಇದರಲ್ಲಿ 27% ಮಂದಿಗೆ ಮುಟ್ಟಿನಲ್ಲಿ ವಿಳಂಬದ ಸಮಸ್ಯೆ ಇದ್ದರೆ (Oligomenorrhea) ಹಾಗೂ 13% ಮಂದಿಗೆ ಎರಡು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಮುಟ್ಟು ಬಾರದಿರುವ ಸ್ಥಿತಿ (Amenorrhoea) ಕಂಡುಬಂದಿತು. ಇತರೆ 17 ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟ ಸಾಮಾನ್ಯವಾಗಿದ್ದು (30–80 ng/mL), ಇವರಲ್ಲಿ ಕೇವಲ 12% ಜನರಲ್ಲಿ ಮಾತ್ರ ಋತುಚಕ್ರದಲ್ಲಿ ಅನಿಯಮಿತತೆ ಕಂಡುಬಂದಿತು. ಇದರಿಂದ, ವಿಟಮಿನ್ ಡಿ ಕಡಿಮೆಯು ಋತುಚಕ್ರದ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ ಎಂಬುದು ತಿಳಿದುಬಂದಿತು.
Read this also – PCOS; ಯಾವುದ್ರಲ್ಲೂ ಆಸಕ್ತಿ ಇಲ್ಲ, ಗಮನ ಇಲ್ಲ! ವಿಜ್ಞಾನಿಗಳು ಪತ್ತೆ ಮಾಡಿದ್ದೇನು?
ವಿಟಮಿನ್ ಡಿ ಪರೀಕ್ಷೆ ಹೇಗೆ?
ರಕ್ತ ಪರೀಕ್ಷೆಯ ಮೂಲಕ ವಿಟಮಿಮ್ ಡಿ ಪ್ರಮಾಣ ತಿಳಿಯಲು ಸಾಧ್ಯವಿದೆ.
Normal: 30 – 50 ng/mL
Insufficient: 20 – 29 ng/mL
Deficient: 12 ng/mL ಕ್ಕಿಂತ ಕಡಿಮೆ
Too high (Toxic): 100 ng/mL ಕ್ಕಿಂತ ಹೆಚ್ಚು
ವಿಟಮಿನ್ ಡಿ ಮೂಲ;
- ಸೂರ್ಯನ ಕಿರಣ – ನಮ್ಮ ಚರ್ಮವು UVB ಕಿರಣಗಳನ್ನು ಸ್ವೀಕರಿಸಿದಾಗ Vitamin D ತಯಾರಾಗುತ್ತದೆ.
ಪ್ರತಿದಿನ ಬೆಳಗ್ಗೆ 10-15 ನಿಮಿಷಗಳ ಕಾಲ 10 ಗಂಟೆ ಒಳಗಿನ ಸೂರ್ಯಕಿರಣವು ಮುಖ, ಕೈ ಕಾಲುಗಳಿಗೆ ನೇರವಾಗಿ ತಗುಲುವಂತೆ ನೋಡಿಕೊಳ್ಳಿ. - ಆಹಾರ – ಮೀನು (Fatty fish – salmon, mackerel), ಮೊಟ್ಟೆಯ ಹಳದಿ ಭಾಗ, ಮಶ್ರೂಮ್ ಗಳಲ್ಲಿ ಸಿಗುತ್ತದೆ.
- ಸಪ್ಲಿಮೆಂಟ್ಸ್ – ವಿಟಮಿನ್ ಡಿ ತೀರಾ ಕಮ್ಮಿಯಿದ್ದು, ರೋಗ ಲಕ್ಷಣಗಳೂ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಸಪ್ಲಿಮಂಟ್ ತೆಗಡದುಕೊಳ್ಳಬಹುದು.
ನಿಮ್ಮ periods ಅನಿಯಮಿತವಾಗಿದ್ದರೆ ಮತ್ತು ಸಾಮಾನ್ಯ ಪರೀಕ್ಷೆಗಳಲ್ಲಿ ಸಮಸ್ಯೆ ಇಲ್ಲ ಎಂದಾದರೆ Vitamin D deficiency ಕೂಡ ಒಂದು ಕಾರಣವಾಗಿರಬಹುದು. ಅದರ ಪರೀಕ್ಷೆಗೆ ಒಳಪಡಿ. ಮೂಳೆಗಳು ನಾರ್ಮಲ್ ಇದ್ದರೂ ನೀವು ಫಿಟ್ ಎಂದು ಕೂತರೆ ಸಾಕಾಗಲ್ಲ. ದೇಹದ ಒಳಗಿನ ಹಾರ್ಮೋನ್ಗಳ ಸಮತೋಲನಕ್ಕೆ ವಿಟಮಿನ್ ಡಿ ಪಾತ್ರ ಮಹತ್ವದ್ದಾಗಿದೆ.










