Makara sankranti; ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಸಡಗರ ಎಲ್ಲೆಡೆ ಮನೆ ಮಾಡಿದೆ. ಈ ಹಬ್ಬದ ವಿಶೇಷವೆಂದರೆ ಎಳ್ಳು-ಬೆಲ್ಲವನ್ನು ಹಂಚಿ ತಿನ್ನುವುದು. ಸಾಮಾನ್ಯವಾಗಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಅನ್ನೋದನ್ನ ಕೇಳಿದ್ದೀವಿ. ಇದರ ಜೊತೆಗೆ ಎಳ್ಳು ಬೆಲ್ಲ ತಿಂದ್ರೆ ಒಳ್ಳೆ ಆರೋಗ್ಯ ಕೂಡ ಸಿಗುತ್ತದೆ. ಈ ಸಮಯದಲ್ಲಿ ಎಳ್ಳು ಬೆಲ್ಲ ಯಾಕೆ ತಿನ್ನಬೇಕು, ಅದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳೇನು ಅನ್ನೋದನ್ನು ಈ ಲೇಖನದ ಮೂಲಕ ತಿಳಿಯೋಣ.
ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಈ ಕಾಲದಲ್ಲಿ ಸೂರ್ಯನ ಕಿರಣಗಳು ತೀಕ್ಷ್ಣವಾಗಿರುತ್ತದೆ. ಈ ಸಂದರ್ಭದಲ್ಲಿ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ಚರ್ಮ ಒಣಗುವುದು, ಒಡೆಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಹೀಗಾಗಿ ಇಂಥ ಸಮಯದಲ್ಲಿ ಎಳ್ಳು ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಹೆಸರಿಗೆ ಎಳ್ಳು ಬೆಲ್ಲ ಅಂತಾ ಇದ್ರೂ ಇದಕ್ಕೆ ಇನ್ನಷ್ಟು ಪದಾರ್ಥಗಳನ್ನು ಮಿಶ್ರಣ ಮಾಡಲಾಗುತ್ತದೆ. ಎಳ್ಳು, ಬೆಲ್ಲದ ಜೊತೆಗೆ ಕಡಲೆ, ಕಡಲೆಕಾಯಿ ಬೀಜ, ಕೊಬ್ಬರಿಯನ್ನೂ ಮಿಶ್ರಣ ಮಾಡಲಾಗುತ್ತದೆ. ಇದರಲ್ಲಿ ಬೆರೆಸುವ ಎಲ್ಲಾ ಪದಾರ್ಥಗಳು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುತ್ತದೆ.
Read this also ; Winter; ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ತಿಂತಿರೋ ಬಿಡ್ತೀರೋ ಇವುಗಳನ್ನು ತಿನ್ನಲೇಬೇಕು!
ಎಳ್ಳು(Sesame) – ಎಳ್ಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದ್ರಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನೀಸಿಯಮ್ದಂತಹ ಅಗತ್ಯ ಪೋಷಕಾಂಶಗಳಿವೆ. ಎಳ್ಳಿನಲ್ಲಿರುವ ಎಣ್ಣೆಯು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಿ ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿರಿಸುತ್ತದೆ. ಇದು ಒಣ ಚರ್ಮಕ್ಕೆ ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿಯೂ ಕೆಲಸ ಮಾಡುತ್ತದೆ. ಇದ್ರಲ್ಲಿರೋ ಉರಿಯೂತ ನಿವಾರಕ ಲಕ್ಷಣಗಳು ಒಣ ಚರ್ಮವನ್ನು ಶಮನಗೊಳಿಸುತ್ತದೆ. ಎಳ್ಳು ಮೂಳೆಗಳಿಗೆ ಬಲ ನೀಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಮ್ಮಿ ಮಾಡುತ್ತದೆ.
ಬೆಲ್ಲ(Jaggery) – ಬೆಲ್ಲದಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಿ ರಕ್ತಹೀನತೆಯನ್ನು ತಡೆಯುತ್ತದೆ. ಇದು ಆರೋಗ್ಯಕರ ಕಾರ್ಬೋಹೈಟ್ರೆಟ್ಸ್ ಹೊಂದಿದೆ. ಬೆಲ್ಲವು ದೇಹದಿಂದ ಹಾನಿಕಾರಕ ವಿಷವನ್ನು ಹೊರಹಾಕುವ ಮೂಲಕ ಲಿವರ್ ಡಿಟಾಕ್ಸ್ ಮಾಡುತ್ತದೆ. ಜೀರ್ಣಕ್ರಿಯೆಗೂ ಬೆಲ್ಲ ಸಹಕಾರಿ. ಬೆಲ್ಲವು ಗ್ಲೈಕೋಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಡೆಡ್ ಸ್ಕಿನ್ ಸೆಲ್ಸ್ ತೆಗೆದು ಹಾಕುತ್ತದೆ ಮತ್ತು ಚರ್ಮವನ್ನು ಹೈಡ್ರೆಟ್ ಆಗಿ ಇರಿಸುತ್ತದೆ.

ಕೊಬ್ಬರಿ(Dry coconut) – ಕೊಬ್ಬರಿಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಲಾರಿಕ್ ಆಸಿಡ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿವೆ. ಇದು ಚಳಿಗಾಲದಲ್ಲಿ ಉಂಟಾಗುವ ಚರ್ಮದ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕೂದಲಿನ ಆರೋಗ್ಯವನ್ನೂ ಕಾಪಾಡುತ್ತದೆ.
ನೆಲಗಡಲೆ(ಕಡಲೆಕಾಯಿಬೀಜ- Groundnut) – ನೆಲಗಡಲೆ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದ್ರಲ್ಲಿ ಬಿ ಜೀವಸತ್ವಗಳು, ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಗಳು ಅಧಿಕವಾಗಿದ್ದು, ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ನೆಲಗಡಲೆ ಫೈಬರ್ ಮತ್ತು ಪ್ರೊಟೀನ್ನಲ್ಲಿ ಸಮೃದ್ಧವಾಗಿರೋದ್ರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹೀಗಾಗಿ ತೂಕ ಇಳಿಕೆಗೂ ಸಹಕಾರಿ. ಆರೋಗ್ಯಕರ ಕೂದಲು ಬೆಳವಣಿಗೆಗೆ ಮತ್ತು ನಯವಾದ ನೆತ್ತಿಗೆ ಅಗತ್ಯವಾದ ಬಿ ವಿಟಮಿನ್ ಬಯೋಟಿನ್ಗಳೂ ನೆಲಗಡಲೆಯಲ್ಲಿ ಕಂಡುಬರುತ್ತದೆ.
ಕಡಲೆ(Fried gram) – ಪ್ರೋಟೀನ್ ಮತ್ತು ಫೈಬರ್ಗಳಲ್ಲಿ ಸಮೃದ್ಧವಾಗಿರುವ ಕಡಲೆ ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ. ತೂಕ ನಿರ್ವಹಣೆಯಲ್ಲೂ ಸಹಾಯ ಮಾಡುತ್ತದೆ.
ನಮ್ಮ ಹಬ್ಬಗಳು ಕೇವಲ ಸಡಗರಕ್ಕೆ ಮಾತ್ರ ಇರದೇ ಅವುಗಳ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಪ್ರಕೃತಿಯಲ್ಲಿ ಬದಲಾವಣೆಯಾಗೋ ಇಂಥ ಸಮಯದಲ್ಲೇ ಸಂಕ್ರಾಂತಿ ಆಚರಿಸಿ, ಎಳ್ಳು ಬೆಲ್ಲ ತಿನ್ನಬೇಕು ಎಂದು ನಮ್ಮ ಹಿರಿಯರು ಮಾಡಿರುವುದು ನಿಜಕ್ಕೂ ಅರ್ಥಪೂರ್ಣ. ಇಷ್ಟೆಲ್ಲಾ ಆರೋಗ್ಯದ ಪ್ರಯೋಜನ ಹೊಂದಿರುವ ಎಳ್ಳು -ಬೆಲ್ಲವನ್ನು ಹಂಚಿ ತಿನ್ನಿ, ಸಂಕ್ರಾಂತಿಯ(Makara sankranti;) ಶುಭಾಶಯಗಳು!!










