ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸರಿಯಾದ ನಿದ್ರೆ ಉತ್ತಮವಾದ ಆರೋಗ್ಯಕ್ಕೆ ಬೇಕಾದ ಮೂರು ಮುಖ್ಯ ಆಧಾರ ಸ್ತಂಭಗಳು. ಆಹಾರ ಮತ್ತು ವ್ಯಾಯಾಮ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ತಲೆಕೆಡಿಸಿಕೊಳ್ಳೋ ನಾವು ನಮ್ಮ ನಿದ್ರೆಯ ಬಗ್ಗೆ ಯೋಚನೇನೆ ಮಾಡೋದಿಲ್ಲಾ. ಇನ್ನು ಹೆಚ್ಚು ಹೊತ್ತು ಸುಖವಾಗಿ ನಿದ್ರೆ ಮಾಡೋರನ್ನಾ ಸೋಮಾರಿಗಳೆಂದು ಹೇಳುತ್ತಾ, ಚೆನ್ನಾಗಿ ನಿದ್ರೆ ಮಾಡೋರನ್ನಾ ಅಪಹಾಸ್ಯ ಮಾಡ್ತೇವೆ.
ಇನ್ನ ಕೆಲವು ವ್ಯಕ್ತಿಗಳು ಹೆಚ್ಚು ಕೆಲಸ ಮಾಡಲು ಅಡ್ಡ ಬರೋ ನಿದ್ರೆಯನ್ನ ಶಾಪವೆಂಬಂತೆ ಪರಿಗಣಿಸೋ ವಾತಾವರಣವೂ ಒಂದಾನೊಂದು ಕಾಲದಲ್ಲಿತ್ತು. ಅಚ್ಚರಿ ಅಂದ್ರೆ 2ನೇ ಮಹಾಯುದ್ದದಲ್ಲಿ ಫೈಟರ್ ಪೈಲೆಟ್ಗಳು ನಿದ್ರೆಯಿಲ್ಲದೆ ವಾರ್ ಆಪರೇಷನ್ ಮಾಡೋ ಸಲುವಾಗಿ ಅವರಿಗೆ ಆಂಫೆಟಮೈನ್ ಅನ್ನೋ ಪದಾರ್ಥವನ್ನು ತಿನ್ನಿಸಲಾಗುತ್ತಿತ್ತು. ಅಂದರೆ, ನಮ್ಮ ಆರೋಗ್ಯದ ಆಧಾರ ಆಗಿರೋ ನಿದ್ರೆಗೆ ನಾವೇ ಹಲವು ಕಳಂಕಗಳನ್ನ ಅಂಟಿಸಿಬಿಟ್ಟಿದ್ದೇವೆ. ನಿದ್ರೆಯ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ನಾವೇ ಅಲ್ಲಗೆಳೆಯುತ್ತ ಬಂದಿದ್ದೇವೆ. ಇದ್ರಿಂದಲೇ ಇಂದು ನಾವೆಲ್ಲಾ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ.

ಕೈಗಾರಿಕೆಗಳು, ವಿವಿಧ ವಾಣಿಜ್ಯ ಪ್ರದೇಶಗಳು ಬೆಳೆದಂತೆ ದಿನದ 24 ಗಂಟೆ ಕೆಲಸ ಮಾಡಬೇಕಾಗಿ ಬರೋ ಆಸ್ಪತ್ರೆ, ವಿಮಾನ ನಿಲ್ದಾಣ, ಕಾರ್ಖಾನೆಗಳಲ್ಲಿ ರಾತ್ರಿ ವೇಳೆಯಲ್ಲಿ ಲಕ್ಷಾಂತರ ಜನರು ಕೆಲಸ ಮಾಡ್ತಿದ್ದಾರೆ. ಸರಿಯಾದ ನಿದ್ರೆಯಿಂದ ವಂಚಿತರಾಗುತ್ತಿರೋ ಜನ ಜಾಸ್ತಿಯಾದಂತೆ, ನಿದ್ರಾಹೀನತೆ ನಮ್ಮ ಆರೋಗ್ಯದ ಮೇಲೆ ಉಂಟುಮಾಡೋ ಅಡ್ಡ ಪರಿಣಾಮಗಳು ಬಹಿರಂಗವಾಗುತ್ತಿವೆ. ನಿದ್ರೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನ ಕಾಪಾಡುವಲ್ಲಿ ಮುಖ್ಯಪಾತ್ರ ವಹಿಸುತ್ತೇ. ಮನುಷ್ಯ ನಿದ್ರೆ ಮಾಡಿದಾಗ ಅವನ ಮೆದುಳಿನ ಎಲ್ಲಾ ಚಟುವಟಿಕೆಗಳು ನಿಲ್ಲುವುದಿಲ್ಲ. ಮೆದುಳಿನೊಳಗೆ ವಿವಿಧ ವಿದ್ಯುತ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ವೇ. ದಿನದಲ್ಲಿ ನಡೆದ ಘಟನೆಗಳನ್ನ ದೀರ್ಘಸ್ಮರಣೆ ಆಗಿ ಪರಿವರ್ತನೆ ಮಾಡೋದರ ಜೊತೆಗೆ ನಮ್ಮ ಸುಪ್ತ ಜಾಗರೂಕತೆಯನ್ನು ಹೆಚ್ಚಿಸುವಲ್ಲಿಯೂ ನಿದ್ರೆ ಮುಖ್ಯಪಾತ್ರ ವಹಿಸುತ್ತದೆ. ಚಿಂತನಾಕ್ರಮದಿಂದ ಹಿಡಿದು ಭಾವನಾತ್ಮಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದಕ್ಕೂ ಮನುಷ್ಯ ಉತ್ತಮವಾಗಿ ನಿದ್ರೆ ಮಾಡುವ ಅವಶ್ಯಕತೆಯಿದೆ. ಹೆಚ್ಚಿನ ರಸ್ತೆ ಅಪಘಾತಗಳು, ಪರಮಾಣು ದುರಂತ ಸಂಭವಿಸಿರೋ ಪ್ರಕರಣಗಳಲ್ಲಿ ನಿದ್ರಾಹೀನತೆಯ ಸಮಸ್ಯೆಗಳ ಛಾಯೆಯಿದೆ.
ಇದನ್ನೂ ಓದಿ : ಭಾರತೀಯರ ಜೀವಿತಾವಧಿಯನ್ನೇ ಕಡಿಮೆ ಮಾಡುತ್ತಿದೆ ವಾಯುಮಾಲಿನ್ಯ..!
ಇನ್ನ ಹಗಲಾಗುವುದನ್ನ ಮತ್ತು ಕತ್ತಲಾಗುವುದನ್ನ ಗಮನಿಸೋ ಮೂಲಕ ಎಲ್ಲಾ ಜೀವಿಗಳಂತೆ ಮನುಷ್ಯನೂ ದಿನದ ಸಮಯವನ್ನ ಗ್ರಹಿಸಬಲ್ಲನು. ನಮ್ಮೊಳಗಿರುವ ನೈಸರ್ಗಿಕ ಗಡಿಯಾರ ನಮ್ಮ ಮೆದುಳಿಗೆ ಈ ಮಾಹಿತಿಯನ್ನು ರವಾನೆ ಮಾಡುತ್ತೇ. ಕತ್ತಲಿಗೆ ಪ್ರತಿಕ್ರಿಯೆಯಾಗಿ ದೇಹದ ಪೀನಲ್ ಗ್ರಂಥಿಯಿಂದ ಹೊರಬರೋ ಮೆಲಟೋನಿನ್ ಎಂಬ ಗ್ರಂಥಿ ದೇಹದ ಈ ಗಡಿಯಾರವನ್ನ ಚಾಲ್ತಿಯಲ್ಲಿಡುತ್ತೇ. ಈ ಮೆಲಟೋನಿನ್ ಗ್ರಂಥಿಯಲ್ಲಿ ಏನಾದರೂ ವ್ಯತ್ಯಾಸವಾದರೆ ನಿದ್ರಾಹೀನತೆಯ ಸಮಸ್ಯೆಗಳು ಕಂಡುಬರುತ್ತೇ. ನಮ್ಮ ದೇಹದ ಆರೋಗ್ಯವನ್ನು ನಿಯಂತ್ರಿಸುವ ಇತರೆ ನೂರಾರು ಹಾರ್ಮೋನುಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿಯೂ ನಿದ್ರೆಯ ಪಾತ್ರ ಮುಖ್ಯವಾಗಿದೆ. ನಿದ್ರಾಹೀನತೆಯು ರಕ್ತದೊತ್ತಡ, ಮಧುಮೇಹ, ಬೊಜ್ಜು ಮುಂತಾದ ರೋಗಗಳಿಗೆ ಕಾರಣವಾಗುವುದರಿಂದ ಹಿಡಿದು ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತೇ.
ಅಚ್ಚರಿ ಅಂದ್ರೆ ನಿದ್ರೆ ಸಮರ್ಪಕವಾಗಿದ್ದಾಗ ಮಾತ್ರ ಕನಸುಗಳು ಬೀಳೋಕೆ ಸಾಧ್ಯ. ನಿದ್ರೆಯಲ್ಲಿ ಬೀಳೋ ಕನಸುಗಳಿಗೂ ಮತ್ತು ನಮ್ಮ ಮಾನಸಿಕ ಆರೋಗ್ಯಕ್ಕೂ ಇರೋ ಸಂಬಂಧಗಳನ್ನ ಈಗ ವಿಶ್ಲೇಷಣೆ ಮಾಡಲಾಗ್ತಿದೆ. ನಮ್ಮ ಭಾವಣೆಗಳನ್ನ ಅರ್ಥ ಮಾಡಿಕೊಳ್ಳುವಲ್ಲಿ ಕನಸುಗಳಿಗೆ ತಮ್ಮದೇ ಆದ ಪ್ರಾಮುಖ್ಯವಿದೆ. ವಿವಿಧ ವೈಜ್ಞಾನಿಕ ವರದಿಗಳ ಪ್ರಕಾರ, ಮನುಷ್ಯನ ದೇಹಕ್ಕೆ ಕನಿಷ್ಠ 7 ಗಂಟೆಗಳ ನಿದ್ರೆಯ ಅವಶ್ಯಕತೆಯಿದೆ ಎಂದು ಸ್ಪಷ್ಟಪಡಿಸಿದ್ದರೂ, ತಮ್ಮ ದೇಹಕ್ಕೆ ಕಡಿಮೆ ಅವಧಿಯ ನಿದ್ರೆ ಸಾಕಾಗುತ್ತದೆ ಎಂದು ನಂಬುವವರಿದ್ದಾರೆ. ರಾತ್ರಿ ನಿದ್ರೆ ಕೆಡುವ ಸಂದರ್ಭ ಬಂದಲ್ಲಿ ನಾವು ಹಗಲು ನಿದ್ರಿಸೋ ಮೂಲಕ ತಮ್ಮ ದಿನದ ನಿದ್ರೆಯ ಸಮಯವನ್ನು ಹೊಂದಾಣಿಕೆ ಮಾಡ್ಕೋಬೋದು ಅನ್ನೋ ತಪ್ಪು ಕಲ್ಪನೆಗಳು ನಮ್ಮಲ್ಲಿವೆ. ಅದಕ್ಕಿಂತಲೂ ಆಶ್ಚರ್ಯಕರವಾದ ಸಂಗತಿಯೆಂದರೆ ಹಾಸಿಗೆ ಮೇಲೆ ನಿದ್ರೆಯಿಲ್ಲದೆ ಹೊರಳಾಡಿದ ಸಮಯವನ್ನೂ ನಾವು ನಿದ್ರೆಯ ಸಾಲಿಗೆ ಸೇರಿಸುತ್ತೇವೆ. ಆದರೆ ಎಂದಿಗೂ ಅದು ನಿದ್ರೆಯಾಗದು.

ಇನ್ನು ವಾರದಲ್ಲಿ ಮೂರು ದಿನಗಳ ಕಾಲ ನಿದ್ರಾಹೀನತೆಯು ಕಾಡುತ್ತಿದ್ದರೆ, ಅಂತಹ ಸಮಸ್ಯೆಯಿಂದ ಯಾರಾದರು ಮೂರು ತಿಂಗಳುಗಳಿಗಿಂತ ಹೆಚ್ಚು ಸಮಯ ಬಳಲಿದ್ರೆ ಅಂತವರನ್ನ ‘ನಿದ್ರಾಹೀನತೆ’ ಕಾಯಿಲೆಯಿಂದ ಬಳಲುತ್ತಿರೋರು ಅಂತಾ ಗುರುತಿಸಲಾಗುತ್ತೇ. ನಮ್ಮ ಜೀವನ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನ ಮಾಡಿಕೊಂಡ್ರೆ ನಾವು ನಮ್ಮ ನಿದ್ರೆಯ ಗುಣಮಟ್ಟ ಜೊತೆಗೆ ನಮ್ಮ ಆರೋಗ್ಯವನ್ನು ಸುಧಾರಿಸಬೋದು. ದೈನಂದಿನ ನಿಗದಿತ ಸಮಯಕ್ಕೆ ಸರಿಯಾಗಿ ಮಲಗುವುದನ್ನ ಮತ್ತು ಏಳುವುದನ್ನ ಅಭ್ಯಾಸ ಮಾಡಿದ್ರೆ, ನಮ್ಮ ದೇಹದಲ್ಲಿನ ನೈಸರ್ಗಿಕ ಗಡಿಯಾರ ಹೆಚ್ಚು ಸಮರ್ಪಕವಾಗಿ ಕೆಲಸ ಮಾಡುತ್ತೇ.. ಇದರಿಂದಾಗಿ ನಾವು ಮಲಗಿದ ತಕ್ಷಣ ನಿದ್ರೆಗೆ ಜಾರಲು ಮತ್ತು ಹರ್ಷಚಿತ್ತದಿಂದ ಎದ್ದೇಳಲು ಸಹಾಯ ಮಾಡುತ್ತೇ. ಇನ್ನ ಮಲಗುವ ಒಂದೆರಡು ಗಂಟೆಗಳ ಮೊದಲು ಕಾಫಿ-ಟೀ ಕುಡಿದ್ರೆ ಅದು ನಿದ್ರೆಯ ಸಮಸ್ಯೆ ಅನ್ನು ಜಾಸ್ತಿ ಮಾಡುತ್ತೇ. ಮಲಗೋ ಮೊದಲು ಟಿವಿ, ಮೊಬೈಲ್, ಕಂಪ್ಯೂಟರ್ ನೋಡಿದ್ರೆ ಅದು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನ ತಡೆಯೋ ಕಾರಣದಿಂದ ಮಲಗುವ ಮೊದಲು ಟಿವಿ, ಮೊಬೈಲ್, ಕಂಪ್ಯೂಟರ್ ನೋಡೋದ್ರಿಂದ ದೂರವಿರೋದು ಒಳ್ಳೆಯದು.
ನಿದ್ರೆಯ ಮಹತ್ವ ನಮಗೆ ಇತ್ತೀಚಿನ ದಿನಗಳಲ್ಲಿ ನಮ್ಮ ಗಮನಕ್ಕೆ ಬರ್ತಿದೆ. ಆರೋಗ್ಯ ಕಾಪಾಡಿಕೊಳ್ಳೋದಕ್ಕೆ ಉತ್ತಮ ನಿದ್ರೆಯ ಅಗತ್ಯದ ಬಗ್ಗೆ ಜಾಗೃತಿ ಹೆಚ್ಚಾದಂತೆ ಜನರು ಜಿಮ್ಗೆ ಹೋಗುವಷ್ಟು ಶಿಸ್ತು ಮತ್ತು ಬದ್ಧತೆಯಿಂದಲೇ ರಾತ್ರಿ ಸರಿಯಾಗಿ ಮಲಗಲು ತಯಾರಾಗುವ ದಿನಗಳು ದೂರವಿಲ್ಲ. ನಾವೆಲ್ಲರೂ ಈಗಿನಿಂದಲೇ ಪ್ರತಿದಿನ ಸರಿಯಾದ ಸಮಯಕ್ಕೆ ಮಲಗಿ ಗಾಢವಾಗಿ ನಿದ್ರೆ ಮಾಡ್ಬೇಕು ಅಲ್ವಾ..!