ಇತ್ತೇಚೆಗೆ ಹೃದಯಾಘಾತ ಪ್ರಕರಣಗಳು(Heart Attack) ಹೆಚ್ಚುತ್ತಿವೆ. ಅದರಲ್ಲೂ ಯುವ ಜನತೆಯೇ ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಮ್ಮ ಜಿಎಸ್ಎಸ್ ಮಾಧ್ಯಮ ಯೂಟ್ಯೂಬ್ ವಾಹಿನಿಯಲ್ಲಿ ಮಾತನಾಡಿರುವ ಹೃದ್ರೋಗ ತಜ್ಞರಾದ ಡಾ. ಕೇಶವಮೂರ್ತಿ ಅವರು, ಹೃದಯಾಘಾತಕ್ಕೆ ಕಾರಣಗಳೇನು ಎಂಬುದನ್ನು ತಿಳಿಸಿದ್ದಾರೆ. ಆ ಕುರಿತು ಮತ್ತೊಮ್ಮೆ ಈ ವರದಿಯಲ್ಲಿ ತಿಳಿಯೋಣ
ಮನುಷ್ಯನ ದೇಹದಲ್ಲಿ ಬಹಳ ವಿಶೇಷವಾದ ಅಂಗ ಹೃದಯ. ನಮ್ಮ ಹೃದಯ ಹಗಲು ರಾತ್ರಿ ಬಿಡುವಿಲ್ಲದೇ ಕೆಲಸ ಮಾಡುತ್ತದೆ. ಹೃದಯ ಎಷ್ಟು ಬಲಾಢ್ಯ ಎಂದರೇ 8 ಅಡಿಯ ಈಜುಕೊಳಕ್ಕೆ ಹೊಂದಿಕೆಯಾಗುಷ್ಟು ರಕ್ತವನ್ನು ಒಂದೇ ದಿನದಲ್ಲಿ ಪಂಪ್ ಮಾಡಬಹುದು. ಅಷ್ಟು ವಿಶೇಷವಾದ ಅಂಗಕ್ಕೆ ನಾವು ಒತ್ತಡ ನೀಡುತ್ತಿದ್ದೇವೆ.
ರಕ್ತನಾಳಗಳು ಚೆನ್ನಾಗಿದ್ದರೆ ಹೃದಯ ಚೆನ್ನಾಗಿರುತ್ತದೆ. ಆದರೆ ಇತ್ತೀಚಿನ ಜೀವನಶೈಲಿಯಿಂದಾಗಿ ರಕ್ತನಾಳದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗಿ, ಬ್ಲಾಕ್ ಆಗುತ್ತಿದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ವೈದ್ಯರು ವಿವರಿಸಿದ್ದಾರೆ.

ಹೇಗೆ ನಾನ್-ಸ್ಟಿಕ್ ತವ ಕಾಲಾನಂತರದಲ್ಲಿ ಅದರ ನಯವಾದ ಮೇಲ್ಮೈಯನ್ನು ಕಳೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ ನಮ್ಮ ರಕ್ತನಾಳಗಳ ಒಳ ಪದರ – ಇದನ್ನು ಎಂಡೋಥೆಲಿಯಮ್ (Endothelium) ಎಂದು ಕರೆಯಲಾಗುತ್ತದೆ. ಇದು ಹಾನಿಗೊಳಗಾಗುತ್ತದೆ ಮತ್ತು ಒರಟಾಗುತ್ತದೆ. ಈ ಹಾನಿಯೂ ಧೂಮಪಾನ, ಮಾದಕ ದ್ರವ್ಯಗಳ ಬಳಕೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ನಂತಹ ಅಂಶಗಳಿಂದ ಉಂಟಾಗಬಹುದು. ಎಂಡೋಥೆಲಿಯಮ್ ಒರಟಾದಾಗ, ಅದಕ್ಕೆ ಕೊಲೆಸ್ಟ್ರಾಲ್ ಅಂಟಿಕೊಳ್ಳಲು ಅನುವು ಮಾಡಿಕೊಡುತ್ತದೆ, ಇದನ್ನು ಎಂಡೋಥೆಲಿಯಲ್ ಅಪಸಾಮಾನ್ಯ (Endothelial dysfunction)ಕ್ರಿಯೆ ಎನ್ನುತ್ತಾರೆ. ಕಾಲಾನಂತರದಲ್ಲಿ, ಈ ಸಂಗ್ರಹವು ಅಪಧಮನಿಗಳನ್ನು ಕಿರಿದಾಗಿಸಬಹುದು ಅಥವಾ ನಿರ್ಬಂಧಿಸಬಹುದು. ಇದರಿಂದ ಹೃದಯಾಘಾತ ಅಪಾಯವು ಹೆಚ್ಚಾಗಬಹುದು ಎಂದು ಡಾಕ್ಟರ್ ವಿವರಿಸಿದ್ದಾರೆ.
ನಮ್ಮ ಜೀವನಶೈಲಿ, ಆಹಾರಶೈಲಿ, ನಾವು ಬದುಕುತ್ತಿರುವ ಪರಿಸರ ಎಲ್ಲವೂ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ತಿಳಿಸಿರುವ ಡಾ.ಕೇಶವಮೂರ್ತಿ ಅವರು, ನಾವು ಮಾಡುತ್ತಿರುವ ತಪ್ಪುಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಅತಿಯಾಗಿ ಮೊಬೈಲ್ ಬಳಸುವುದು, ದೈಹಿಕ ಚಟವಟಿಕೆ ಇಲ್ಲದೇ ಇರುವುದು, ರಾತ್ರಿ ಸರಿಯಾಗಿ ನಿದ್ದೆ ಮಾಡದಿರುವುದು, ಎಲ್ಲವನ್ನೂ ಆನ್ಲೈನ್ನಲ್ಲೇ ಆರ್ಡರ್ ಮಾಡಿಕೊಂಡು ಕೂತಲ್ಲೇ ಕೂರುವುದು – ಇವೆಲ್ಲಾ ಕಾರಣಗಳಿಂದ ಹೃದಯಾಘಾತದ ರಿಸ್ಕ್ ಹೆಚ್ಚುತ್ತಿದೆ.

ಅಷ್ಟೇ ಅಲ್ಲ ಮಾನಸಿಕ ಒತ್ತಡವೂ ಹೃದಯಘಾತಕ್ಕೆ ಒಂದು ಕಾರಣ. ಜನರಿಗೆ ಸ್ಮಾರ್ಟ್ ಆಗಿ ಬದುಕಲು ಗೊತ್ತಿಲ್ಲ. ಜನರಿಗೆ ಅವರಿಗೆ ಏನು ಒಳ್ಳೆಯದು, ಏನು ಕೆಟ್ಟದ್ದು ಯೋಚಿಸುವ ಜ್ಞಾನ ಇಲ್ಲದಾಗಿದೆ. ಹೋಟೆಲ್ಗೆ ಹೋಗಿ ಮೆನ್ಯೂ ಕಾರ್ಡ್ ನೋಡಿ ಅಲ್ಲಿರುವ ಎಲ್ಲವನ್ನೂ ಆರ್ಡರ್ ಮಾಡುವಷ್ಟು ದಡ್ಡತನ ಯಾರಿಗೂ ಇಲ್ಲ. ಹಾಗೆಯೇ ನನ್ನ ದೇಹಕ್ಕೆ ಏನು ಹೊಂದಿಕೊಳ್ಳುತ್ತಿದೆ, ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನು ತಿಳಿದಿರುವುದು ಮುಖ್ಯ. ಅಷ್ಟೇ ಅಲ್ಲ ಪ್ರತಿಯೊಬ್ಬರಿಗೂ ನಿತ್ಯ ಅವರಿಗೆ ಎಷ್ಟು ಕ್ಯಾಲೋರಿ, ಪ್ರೋಟಿನ್, ಕ್ಯಾಲ್ಸಿಯಂ ಹೀಗೆ ಪೋಷಕಾಂಶಗಳು ಬೇಕು ಎಂಬದನ್ನೂ ತಿಳಿದಿರಬೇಕು ಎಂದು ಡಾಕ್ಟರ್ ಹೇಳಿದ್ದಾರೆ.
Read this also : Blood pressure; ರಕ್ತದೊತ್ತಡ ನಿಯಂತ್ರಣಕ್ಕೆ ಈ ಹಣ್ಣು ಸಹಕಾರಿ!
ಡಾ. ಕೇಶವಮೂರ್ತಿ ಅವರು ಹೃದಯಾಘಾತಕ್ಕೆ ಸಂಬಂಧಪಟ್ಟಂತೆ ಇರುವ ಕೆಲವು ತಪ್ಪು ಕಲ್ಪನೆಗಳ ಬಗ್ಗೆಯೂ ಮಾತನಾಡಿದ್ದಾರೆ. ಕೆಲವರು ಅಂದುಕೊಳ್ಳುತ್ತಾರೆ, “ನಮ್ಮ ತಾತ, ಅಜ್ಜಿ 70-80 ವರ್ಷಗಳ ಕಾಲ ಆರಾಮಾಗಿ ಬದುಕಿದ್ದರು ನಾನೂ ಅಷ್ಟೇ ವರ್ಷ ಬದುಕಬಲ್ಲೆ ಅಂತಾ”. ಅಜ್ಜ-ಅಜ್ಜಿಯರು ತಿಂದ ಆಹಾರವೇ ಬೇರೆ, ಜೀವಿಸಿದ್ದ ಪರಿಸರ ಬೇರೆ. ಈಗ ಇರುವ ಆಹರಶೈಲಿ, ಪರಿಸರವೇ ಬೇರೆ. ಹಾಗಾಗಿ ಮೀತಿಮೀರಿದ ವಿಶ್ವಾಸ ಬೇಡ ಎಂಬುದು ವೈದ್ಯರ ಸಲಹೆ.
“ನನ್ನ ಸ್ನೇಹಿತ ಮದ್ಯಪಾನ ಮಾಡುತ್ತಾನೆ, ಧೂಮಪಾನ ಮಾಡುತ್ತಾನೆ, ಆತನಿಗೆ ಏನು ಆಗಲ್ಲ. ಹೀಗಾಗಿ ನಾನೂ ಅದನ್ನೆಲ್ಲಾ ಮಾಡಬಹುದು ನನಗೂ ಏನೂ ಆಗಲ್ಲ”. ಇದು ದೊಡ್ಡ ತಪ್ಪು ಪ್ರತಿಯೊಬ್ಬರ ದೇಹವೂ ಬೇರೆ, ಅದು ಪ್ರತಿಕ್ರಿಯಿಸುವ ರೀತಿಯೂ ಬೇರೆ. ನಮ್ಮ ದೇಹಕ್ಕೆ ಏನು ಒಳ್ಳೆಯದು ಅದನ್ನು ನಾವೇ ನಿರ್ಧರಿಸಬೇಕು. ರೋಗ ಹಾಳು ಮಾಡುವ ಅಭ್ಯಾಸಗಳ ಪ್ರಭಾವಕ್ಕೆ ಒಳಗಾಗಬಾರದು.
ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಡಾ. ಕೇಶವಮೂರ್ತಿ ಅವರು ಮಾತನಾಡಿರುವ ಇನ್ನೂ ಹೆಚ್ಚು ವಿಚಾರಗಳನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ :










