ನಾವು ದಿನವಿಡೀ ನಮ್ಮ ಕಣ್ಣುಗಳನ್ನು ಬಳಸುತ್ತೇವೆ. ಆದರೆ ಇದರ ಒಂದು ಮುಖ್ಯವಾದ ಚಟುವಟಿಕೆ “ಕಣ್ಣು ಮಿಟುಕಿಸುವುದು (Eye blinking)” ಇದಕ್ಕೆ ಅಷ್ಟಾಗಿ ಗಮನಕೊಡುವುದಿಲ್ಲ. ಏಕೆಂದರೆ ನಮ್ಮ ಕಣ್ಣುಗಳು ನೈಸರ್ಗಿಕವಾಗಿ ಮಿಟುಕಿಸುತ್ತವೆ. ಕಣ್ಣುಗಳು ಯಾಕೆ ಮಿಟುಕಿಸುತ್ತವೆ? ಅವು ಸರಿಯಾಗಿ ಮಿಟುಕಿಸದೇ ಇದ್ದರೆ ಕಣ್ಣುಗಳಿಗೆ ಏನು ತೊಂದರೆಯಾಗುತ್ತದೆ? ಈ ಲೇಖನದ ಮೂಲಕ ತಿಳಿಯೋಣ
ಕಣ್ಣು ಮಿಟುಕಿಸುವುದರ ಮಹತ್ವ :-
ನಮ್ಮ ಕಣ್ಣಿನ ಮೇಲ್ಭಾಗದಲ್ಲಿ ಲ್ಯಾಕ್ರಿಮಲ್ ಗ್ಲ್ಯಾಂಡ್ (Lacrimal gland) ಇರುತ್ತದೆ. ಇದನ್ನು ಕಣ್ಣೀರಿನ ಗ್ಲ್ಯಾಂಡ್ (Tear gland) ಎಂದೂ ಕರೆಯುತ್ತಾರೆ. ಈ ಗ್ಲ್ಯಾಂಡ್ ನಮ್ಮ ಕಣ್ಣುಗಳಿಗೆ ಅಗತ್ಯವಿರುವ ಕಣ್ಣೀರನ್ನು ಉತ್ಪತ್ತಿ ಮಾಡುತ್ತದೆ. ಇದು ನಾವು ಅತ್ತಾಗ, ನಕ್ಕಾಗ ಬರುವ ಕಣ್ಣೀರಲ್ಲ, ಬದಲಿಗೆ ಈ ಕಣ್ಣೀರು ನಮ್ಮ ಕಣ್ಣುಗಳ ರಕ್ಷಣೆಗಿರುವುದು. ಕಣ್ಣುಗಳನ್ನು ಶುಚಿಯಾಗಿಡುವುದು, ಧೂಳಿನಿಂದ ಕಣ್ಣುಗಳನ್ನು ರಕ್ಷಿಸುವುದು, ಕಣ್ಣುಗಳು ಒಣಗದಂತೆ ಲುಬ್ರಿಕೇಟ್ ಮಾಡುವುದು ಈ ಕಣ್ಣೀರಿನ ಕೆಲಸ. ಹೀಗಾಗಿ ಈ ಕಣ್ಣೀರು ನಮ್ಮ ಕಣ್ಣಿನ ಆರೋಗ್ಯಕ್ಕೆ ಅನಿವಾರ್ಯ.

ಲ್ಯಾಕ್ರಿಮಲ್ ಗ್ಲ್ಯಾಂಡ್ ನಿಂದ ಬಿಡುಗಡೆಯಾಗುವ ಕಣ್ಣೀರು ಕಣ್ಣಿನ ಎಲ್ಲಾ ಭಾಗಕ್ಕೂ ತಲುಪುವುದೇ ನಾವು ಕಣ್ಣು ಮಿಟುಕಿಸಿದಾಗ. ಇದರಿಂದ ಕಣ್ಣುಗಳಿಗೆ ಹೊರಗಿನ ಧೂಳಿನಿಂದ ರಕ್ಷಣೆ ಸಿಗುತ್ತದೆ. ಸಾಮಾನ್ಯವಾಗಿ ಒಬ್ಬ ಮನುಷ್ಯ ಒಂದು ನಿಮಿಷಕ್ಕೆ 15-18 ಸಲ ಕಣ್ಣು ಮಿಟುಕಿಸುತ್ತಾನೆ. ಆದರೆ ಇತ್ತೀಚೆಗೆ ಕೆಲವು ಕಾರಣಗಳಿಂದಾಗಿ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಸಾಕಷ್ಟು ಕಣ್ಣಿನ ಸಮಸ್ಯೆಗಳು ಶುರುವಾಗುತ್ತಿವೆ.
ಕಣ್ಣು ಮಿಟುಕಿಸದಿದ್ದರೆ ಆಗುವ ಸಮಸ್ಯೆಗಳು :-
ನಾವು ಕಣ್ಣುಗಳನ್ನು ಸರಿಯಾಗಿ ಮಿಟುಕಿಸದಿದ್ದರೆ ಹಲವು ಸಮಸ್ಯೆಗಳು ಕಾಡಬಹುದು. ಕಣ್ಣಿನ ತೇವಾಂಶ ಕಡಿಮೆಯಾಗಿ, ಕಣ್ಣುಗಳು ಒಣಗುತ್ತವೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಕಂಪ್ಯೂಟರ್ ವಿಶನ್ ಸಿಂಡ್ರೋಮ್ ಅಂತಾರೆ. ನಿರಂತರವಾಗಿ ಕಣ್ಣುಗಳು ಒಣಗಿದಾಗ, ಕಣ್ಣು ರೆಡ್ ನೆಸ್ ಆಗುತ್ತದೆ. ಡ್ರೈ ಐ ಸಿಂಡ್ರೋಮ್ ಸಮಸ್ಯೆ ಕಾಡುತ್ತದೆ. ಒಂದೇ ಕಡೆ ನಮ್ಮ ಕಣ್ಣುಗಳನ್ನು ಕೇಂದ್ರಿಕರಿಸಿದಾಗ ಕಣ್ಣಿನ ಸ್ನಾಯುಗಳಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ಕಣ್ಣುಗಳಿಗೆ ಧೂಳು ಸೇರಿ ಅಲರ್ಜಿಯಾಗುವುದು, ಕಿರಿಕಿರಿಯಾಗುವುದು ಆಗುತ್ತದೆ.
ಯಾಕೆ ನಾವು ಕಣ್ಣು ಮಿಟುಕಿಸುವುದನ್ನು ಕಡಿಮೆ ಮಾಡುತ್ತೇವೆ?

ಇದಕ್ಕೆ ಮುಖ್ಯವಾದ ಕಾರಣವೇ ಡಿಜಿಟಲ್ ಸ್ಕ್ರೀನ್. ಕಂಪ್ಯೂಟರ್, ಮೊಬೈಲ್ ಅಥವಾ ಲ್ಯಾಪ್ ಟಾಪ್ ಬಳಸುವಾಗ ನಮ್ಮ ಕಣ್ಣು ಮಿಟುಕಿಸುವ ಪ್ರಮಾಣವು ಒಂದು ನಿಮಿಷದಲ್ಲಿ 15-18 ರಿಂದ 6-7 ಸಲಕ್ಕೆ ಇಳಿಯುತ್ತದೆ. ಸಾಮಾನ್ಯವಾಗಿ ಗಮನಿಸಿ, ಡಿಜಿಟಲ್ ಸ್ಕ್ರೀನ್ ನೋಡುವಾಗ ನಾವು ನಮ್ಮ ಕಣ್ಣುಗಳನ್ನು ಒಂದೇ ಕಡೆ ತುಂಬಾ ಸಮಯ ಕೇಂದ್ರಿಕರಿಸುತ್ತೇವೆ. ಆಗ ನೈಸರ್ಗಿಕವಾಗಿ ನಡೆಯುವ ಕಣ್ಣು ಮಿಟುಕಿಸುವ ಚಟುವಟಿಕೆಯನ್ನು ನಾವೇ ತಡೆಯುತ್ತೇವೆ. ಸ್ಕ್ರೀನ್‌ನಿಂದ ಬರುವ ಬೆಳಕು (blue light) ನಮ್ಮ ಕಣ್ಣುಗಳನ್ನು ಒಣಗಿಸುತ್ತದೆ. ಇದರಿಂದಾಗಿ ನಮ್ಮ ಕಣ್ಣಿನಲ್ಲಾಗುವ ಮುಖ್ಯವಾದ ಕೆಲಸ ಸರಿಯಾಗಿ ಆಗದೇ ಸಮಸ್ಯೆಗಳು ಶುರುವಾಗುತ್ತವೆ.
Read this also : Insomnia; ರಾತ್ರಿ ನಿದ್ದೆನೇ ಬರಲ್ವಾ?ಇವುಗಳನ್ನು ಫಾಲೋ ಮಾಡಿ ಒಳ್ಳೆ ನಿದ್ದೆ ಬರುತ್ತೆ!
ಡಿಜಿಟಲ್ ಯುಗದಲ್ಲಿ ಕಣ್ಣಿನ ರಕ್ಷಣೆ ಹೇಗೆ?
ನಾವು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಟಿವಿ ಬಳಕೆ ನಿಲ್ಲಿಸಲಾಗದು. ಆದರೆ ಕೆಲವು ಸರಳ ಮಾರ್ಗಗಳ ಮೂಲಕ ಕಣ್ಣನ್ನು ರಕ್ಷಣೆ ಮಾಡಿಕೊಳ್ಳಬಹುದು.
20-20-20 ನಿಯಮ (20-20-20 Rule) – ಡಿಜಿಟಲ್ ಉಪಕರಣಗಳನ್ನು ಬಳಸುವಾಗ ಪ್ರತಿ 20 ನಿಮಿಷಕ್ಕೊಮ್ಮೆ, 20 ಸೆಕೆಂಡುಗಳ ಕಾಲ ಬ್ರೇಕ್ ತೆಗೆದುಕೊಂಡು 20 ಅಡಿ ದೂರಕ್ಕೆ ನೋಡಬೇಕು. ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕೆಲ ನಿಮಿಷಗಳು ಡಿಜಿಟಲ್ ಸ್ಕ್ರೀನ್ ನಿಂದ ದೂರ ಉಳಿದು, ಕಣ್ಣನ್ನು ಹತ್ತು ಸೆಕೆಂಡು ಮುಚ್ಚಿ ಅದಕ್ಕೆ ರೆಸ್ಟ್ ಕೊಡಬೇಕು. ಡಿಜಿಟಲ್ ಉಪಕರಣಗಳನ್ನು ಬಳಸುವಾಗ ಪ್ರತಿ 20 ನಿಮಿಷಕ್ಕೊಮ್ಮೆ ಬ್ರೇಕ್ ತೆಗೆದುಕೊಂಡು ಕಣ್ಣುಗಳನ್ನು ಹತ್ತು ಬಾರಿಯಾದರೂ ಮುಚ್ಚುವುದು ತೆರೆಯುವುದನ್ನು ಮಾಡಬೇಕು. ಮೊಬೈಲ್ & ಲ್ಯಾಪ್‌ಟಾಪ್‌ನಲ್ಲಿ ನೈಟ್ ಮೋಡ್ ಅಥವಾ ಬ್ಲೂ ಲೈಟ್ ಫಿಲ್ಟರ್ ಬಳಸುವುದರಿಂದ ಕಣ್ಣಿನ ರಕ್ಷಣೆ ಮಾಡಬಹುದು.
ಕಣ್ಣು ಮಿಟುಕಿಸುವುದು ನಮಗೆ ತಿಳಿಯದಂತೆ ನಡೆಯುವ ಚಟುವಟಿಕೆ. ಆದರೆ ಅದು ನಮ್ಮ ಕಣ್ಣಿನ ಆರೋಗ್ಯಕ್ಕೆ ಅತಿ ಮುಖ್ಯ. ಡಿಜಿಟಲ್ ಯುಗದಲ್ಲಿ ಒತ್ತಡದಲ್ಲಿ ಬದುಕುತ್ತಿರುವಾಗಲೂ ಕಣ್ಣಿನ ಆರೈಕೆ ಮುಖ್ಯವಾಗುತ್ತದೆ. ಸರಿಯಾದ ಕಣ್ಣಿನ ಆರೈಕೆಯಿಲ್ಲವಾದರೆ ಮುಂದೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಕಣ್ಣು ಮಿಟುಕಿಸಲು ಮರೆಯಬೇಡಿ!
Watch this episode to learn more ;










