Anemia; ರಕ್ತಹೀನತೆ ಎನ್ನುವುದು ಸಣ್ಣ ಸಮಸ್ಯೆಯಲ್ಲ, ಇದು ಹಲವಾರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇತ್ತೀಚೆಗೆ ರಕ್ತಹೀನತೆ ತುಂಬಾ ಜನರನ್ನು ಕಾಡುತ್ತಿದೆ. ಯಾವ ಕಾರಣದಿಂದ ರಕ್ತಹೀನತೆ ಆಗುತ್ತದೆ? ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಜೊತೆಗೆ ರಕ್ತ ವೃದ್ಧಿಗೆ ಸಹಾಯ ಮಾಡುವ 4 ಸೂಪರ್ ಫುಡ್‌ಗಳಾದ ‘ಎಬಿಸಿಡಿ’ ಬಗ್ಗೆಯೂ ತಿಳಿಯೋಣ
ರಕ್ತಹೀನತೆ ಅಥವಾ ಅನಿಮಿಯಾ ಎಂದರೆ?
ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಮ್ಮಿಯಾಗುವುದನ್ನು ರಕ್ತಹೀನತೆ ಎನ್ನಲಾಗುತ್ತದೆ. ಹಿಮೋಗ್ಲೋಬಿನ್ ಎನ್ನುವುದು ಕೆಂಪು ರಕ್ತಕಣಗಳಲ್ಲಿರುವ ಪ್ರೋಟೀನ್. ಇದು ನಮ್ಮ ಶ್ವಾಸಕೋಶದಿಂದ ದೇಹದ ಇತರೆ ಅಂಗಗಳಿಗೆ ಆಕ್ಸಿಜನ್ ಸರಬರಾಜು ಮಾಡುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್‌ಅನ್ನು ಶ್ವಾಸಕೋಶಕ್ಕೆ ಹಿಂತಿರುಗಿಸುತ್ತದೆ. ಪ್ರತಿಯೊಬ್ಬರ ದೇಹದಲ್ಲಿಯೂ ಹಿಮೋಗ್ಲೋಬಿನ್ ಸರಿಯಾದ ಪ್ರಮಾಣದಲ್ಲಿ ಇರಲೇಬೇಕು.
ಹಿಮೋಗ್ಲೋಬಿನ್‌ನ ಸಾಮಾನ್ಯ ಮಟ್ಟ ಏನು?
ಪುರುಷರಲ್ಲಿ ಪ್ರತಿ ಡೆಸಿಲಿಟರ್‌ಗೆ 14 ಗ್ರಾಂನಿಂದ 17.5 ಗ್ರಾಂವರೆಗೆ ಹಾಗೂ ಮಹಿಳೆಯರಲ್ಲಿ 12.3 ಗ್ರಾಂನಿಂದ 15.3 ಗ್ರಾಂವರೆಗೆ ಹಿಮೋಗ್ಲೋಬಿನ್‌ನ ಮಟ್ಟ ಇರುವುದು ಸಾಮಾನ್ಯವಾಗಿದೆ. ಈ ಮಟ್ಟಕ್ಕಿಂತ ಕಡಿಮೆಯಾದರೆ ಅಂದರೆ 11, 10ರ ಒಳಗಿದ್ದರೆ ಇದನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಸಮಸ್ಯೆ ಅಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ 25% ಪುರುಷರು ಮತ್ತು 57% ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ.
ಹಿಮೋಗ್ಲೋಬಿನ್ ಏಕೆ ಕಮ್ಮಿಯಾಗುತ್ತದೆ?
ಕಬ್ಬಿಣಾಂಶ ಕಮ್ಮಿಯಿರುವ ಆಹಾರ ಸೇವನೆ, ಗಾಯಗಳಾಗಿ ರಕ್ತ ನಾಶವಾಗಿರುವುದು, ಹಾರ್ಮೋನಲ್ ಅಸ್ವಸ್ಥತೆ, ಋತುಚಕ್ರದಲ್ಲಿ ಹೆಚ್ಚು ರಕ್ತಸ್ರಾವ, ಕೆಲವು ವೈದ್ಯಕೀಯ ಪರಿಸ್ಥಿತಿಗಳಾದ ಪೈಲ್ಸ್, ಕಿಡ್ನಿ ಸಮಸ್ಯೆಗಳು ಮತ್ತು ಆಂತರಿಕ ರಕ್ತಸ್ರಾವ – ಹೀಗೆ ಹಲವು ಕಾರಣಗಳಿಂದ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುತ್ತದೆ.
Read this also : Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು
ಹೆಚ್‌ಬಿ ಕಮ್ಮಿಯಾದರೆ ಏನೆಲ್ಲಾ ತೊಂದರೆ?
ಹೆಚ್‌ಬಿ ಲೆವೆಲ್ ಕಡಿಮೆ ಇದ್ದರೆ ಸುಸ್ತಾಗುವುದು, ಉಸಿರಾಟದಲ್ಲಿ ತೊಂದರೆ, ಚರ್ಮ ಬಿಳುಚಿಕೊಳ್ಳುವುದು, ತಲೆತಿರುಗುವುದು, ಹೃದಯ ಬಡಿತ ವೇಗವಾಗುವುದು ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.
ಹಿಮೋಗ್ಲೋಬಿನ್ ಹೆಚ್ಚಿಸುವ 4 ಸೂಪರ್ ಫುಡ್‌ಗಳು -‘ಎಬಿಸಿಡಿ’
ಎ – ಅಂಜೂರ

ಅಂಜೂರದಲ್ಲಿ ಐರನ್ ಹೆಚ್ಚಿದ್ದು, ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಜಿಂಕ್ ಮತ್ತು ಮ್ಯಾಂಗನೀಸ್ ದೇಹದ ಇತರೆ ಅಂಗಗಳ ಆರೋಗ್ಯಕ್ಕೂ ಸಹಕಾರಿ. ಒಂದೆರಡು ಅಂಜೂರವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ
ಬಿ – ಬೀಟ್ರೂಟ್

ಬೀಟ್ರೂಟ್ ಹಿಮೋಗ್ಲೋಬಿನ್ ಹೆಚ್ಚಿಸುವ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದ್ದು, ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೋಲಿಕ್ ಆಸಿಡ್, ಪೊಟ್ಯಾಸಿಯಮ್ ಮತ್ತು ಫೈಬರ್ ಕೂಡಾ ಹೇರಳವಾಗಿದೆ. ಬೀಟ್ರೂಟ್ ದೇಹಕ್ಕೆ ತಾಜಾ ಆಕ್ಸಿಜನ್ ಪೂರೈಸಲು ಸಹಾಯ ಮಾಡುತ್ತದೆ. ಇದನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು.
ಸಿ – ಕ್ಯಾರೆಟ್

ಕ್ಯಾರೆಟ್ ಕೂಡ ಹಿಮೋಗ್ಲೋಬಿನ್ ಲೆವೆಲ್ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಹೊಂದಲು ಐರನ್ ಮುಖ್ಯವಾಗಿ ಬೇಕು. ಐರನ್ ಅಂಶವನ್ನು ಸರಿಯಾಗಿ ಹೀರಿಕೊಳ್ಳಲು ದೇಹಕ್ಕೆ ವಿಟಮಿನ್ ಎ ಅಗತ್ಯವಿದೆ. ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಅಂಶ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ಇದು ಹಿಮೋಗ್ಲೋಬಿನ್‌ನ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದನ್ನೂ ಕೂಡ ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ಬೀಟ್ರೂಟ್‌ನೊಂದಿಗೆ ಮಿಕ್ಸ್ ಮಾಡಿ ಜ್ಯೂಸ್ ಮಾಡಿಯೂ ಕುಡಿಯಬಹುದು.
ಡಿ – ಡೇಟ್ಸ್

ಡೇಟ್ಸ್ ಅಂದರೆ ಖರ್ಜೂರ. ಇದರಲ್ಲಿಯೂ ಐರನ್ ಅತ್ಯಧಿಕವಾಗಿದೆ. ಇದು ಹಿಮೋಗ್ಲೋಬಿನ್‌ನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಐರನ್ ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ನೇರವಾಗಿ ಸ್ಕ್ಯಾಕ್ ರೀತಿ ತಿನ್ನಬಹುದು ಅಥವಾ ನೆನೆಸಿ ತಿನ್ನಬಹುದು.
ನಿಮ್ಮ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಇವುಗಳನ್ನು ತಿನ್ನುವುದರಿಂದ ರಕ್ತ ವೃದ್ಧಿಯಾಗುತ್ತದೆ.










