ಭೂಮಿಯ(Earth) ವಿಸ್ಮಯ ಇನ್ನೂ ಸಾವಿರ ವರ್ಷಗಳೇ ಕಳೆದ್ರೂ ಸಂಪೂರ್ಣ ಬಯಲು ಮಾಡೋದಕ್ಕೆ ಆಗಲ್ಲ. ಅದೆಷ್ಟು ಅಚ್ಚರಿಗಳನ್ನು ಪೃಥ್ವಿ ತನ್ನೊಡಲಲ್ಲಿ ಇಟ್ಟುಕೊಂಡಿದ್ಯೋ… ಇದೇ ಕಾರಣಕ್ಕೆ ಭೂಮಿ ಎಂಬುದು ಸಂಶೋಧಕರಿಗೆ ಯಾವತ್ತಿಗೂ ಆಸಕ್ತಿದಾಯಕ ವಿಷಯವಾಗಿರೋದು.
ಭೂಮಿಗೆ ಸಂಬಂಧಪಟ್ಟಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಸಂಶೋಧನಾ ಜಗತ್ತಿನಿಂದ ಮತ್ತೊಂದು ವಿಚಾರ ಹೊರಬಿದ್ದಿದ್ದು, ಭೂಮಿಯ ಕೋರ್(Earth’s Core) ತಿರುಗುವ ವೇಗದಲ್ಲಿ ನಿಧಾನವಾಗಿದೆ ಮತ್ತು ಅದು ಭೂಮಿಯ ಸುತ್ತುವಿಕೆಯಿಂದ ಸ್ವತಂತ್ರವಾಗಿ ಹಿಮ್ಮುಖ ದಿಕ್ಕಿನಲ್ಲಿ ತಿರುಗುತ್ತಿದೆ ಎಂದು ತಿಳಿದುಬಂದಿದೆ.
ಭೂಮಿಯಲ್ಲಿ ಕ್ರಸ್ಟ್, ಮ್ಯಾಂಟಲ್ ಮತ್ತು ಕೋರ್ (Crust, Mantle, Core) ಎಂಬ ಪದರಗಳಿವೆ. ಆ ಕೋರ್ನಲ್ಲಿ ಹೊರಗಿನ ಕೋರ್ ಮತ್ತು ಒಳಗಿನ ಕೋರ್ ಅಂತಾ ಇದೆ. ಆ ಒಳಗಿನ ಕೋರ್ ಅಂದ್ರೆ ಭೂಮಿಯ ಒಳಗೆ ಒಂದು ಘನ ಲೋಹದ ಚೆಂಡು(A solid metal ball) ಇದೆ. ಈಗ ಅದರ ಸುತ್ತುವ ವೇಗ ಭೂಮಿಯ ಸುತ್ತುವ ವೇಗಕ್ಕಿಂತ ನಿಧಾನವಾಗಿದೆ ಎಂದು ಸಂಶೋಧಕರು ಗಮನಿಸಿದ್ದಾರೆ. 1936ರಲ್ಲಿ ಡ್ಯಾನಿಶ್ ಭೂಕಂಪಶಾಸ್ತ್ರಜ್ಞರಾದ ಇಂಗೆ ಲೆಹ್ಮನ್ ಅವರು ಭೂಮಿಯ ಒಳಭಾಗವನ್ನು ಕಂಡುಹಿಡಿದಾಗಿನಿಂದ ಭೂಮಿಯ ಕೋರ್ನ ಚಲನೆ, ವೇಗಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ.
ಭೂಮಿಯ ಒಳಭಾಗವು ಸುಮಾರು 5,180 ಕೀಲೋಮೀಟರ್ ಆಳದಲ್ಲಿದೆ. ಒಳಗಿನ ಭಾಗವು ಘನ ಲೋಹದ ರೂಪದಲ್ಲಿದೆ ಮುಖ್ಯವಾಗಿ ಕಬ್ಬಿಣ ಮತ್ತು ನಿಕಲ್ಅನ್ನು ಒಳಗೊಂಡಿದೆ. ಅದರ ಹೊರಭಾಗವು ದ್ರವ ಲೋಹ(liquid metal)ದಿಂದ ಆವೃತವಾಗಿದೆ. ಇದು ಭೂಮಿಯ ಉಳಿದ ಭಾಗಗಳೊಂದಿಗೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಒಳಗಿನ ಕೋರ್ ಸೂರ್ಯನ ಮೇಲ್ಮೈಯಂತೆ ಬಿಸಿಯಾಗಿರುತ್ತದೆ. ಇದನ್ನು ಸುಮಾರು 5,400 ಡಿಗ್ರಿ ಸೆಲ್ಸಿಯಸ್ನಷ್ಟು ಎಂದು ಅಂದಾಜಿಸಲಾಗಿದೆ.
ಭೂಮಿಯ ಆಳವಾದ ಈ ಒಳಭಾಗವನ್ನು ನೇರವಾಗಿ ವೀಕ್ಷಿಸಲು ಮತ್ತು ಅದರ ಚಲನೆ, ವೇಗಗಳನ್ನು ನೇರವಾಗಿ ಅಳತೆ ಮಾಡಲು ಸಾಧ್ಯವಾಗಲ್ಲ. ಅದರ ಅಳತೆಯನ್ನು ಭೂಕಂಪನದ ಅಲೆಗಳ ಅಧ್ಯಯನದ ಮೂಲಕ ಮಾಡಲಾಗುತ್ತದೆ. ಭೂಕಂಪಶಾಸ್ತ್ರಜ್ಞರು ಬೃಹತ್ ಭೂಕಂಪದ ಅಲೆಗಳ ವರ್ತನೆಯನ್ನು ಪರೀಕ್ಷಿಸುವ ಮೂಲಕ ಭೂಮಿಯ ಕೋರ್ ಚಲನೆಯ ಬಗ್ಗೆ ಸಂಶೋಧನೆ ನಡೆಸುತ್ತಾರೆ. ಅದಕ್ಕಾಗಿ ಬೇರೆ ಬೇರೆ ಸಮಯಗಳಲ್ಲಿ ಈ ಕೋರ್ ಮೂಲಕ ಹಾದುಹೋಗುವ ಒಂದೇ ಸಾಮರ್ಥ್ಯದ ಅಲೆಗಳ ನಡುವೆ ಇರುವ ವ್ಯತ್ಯಾಸಗಳನ್ನು ಅಧ್ಯಯನ ಮಾಡಿ ಆ ಮೂಲಕ ಭೂಮಿಯ ಒಳಗಿನ ಕೋರ್ನ ತಿರುಗುವ ವೇಗಗಳಲ್ಲಿ ಬದಲಾವಣೆ, ಅದು ತಿರುಗುವ ದಿಕ್ಕು ಬದಲಾವಣೆಗಳನ್ನು ಲೆಕ್ಕಾಚಾರ ಮಾಡಲಾಗುತ್ತದೆ.
For more articles visit GSS Media
ಭೂಮಿಯ ಒಳಭಾಗದ ಕೋರ್ ಸುತ್ತುವುದಕ್ಕೆ ಕಾರಣ ಮ್ಯಾಗ್ನೆಟಿಕ್ ಫೀಲ್ಡ್. ಭೂಮಿಯ ಆಯಸ್ಕಾಂತೀಯ ಲೋಹವು ಅದರ ಒಳಗಿರುವ ಬಿಸಿ ಲೋಹದ ಘನ ಚೆಂಡನ್ನು ಎಳೆಯುವುದರಿಂದ ಅದು ತಿರುಗಲು ಕಾರಣವಾಗುತ್ತೆ. ಜೊತೆಗೆ ಭೂಮಿಯ ಗುರುತ್ವಾಕರ್ಷಣಾ ಶಕ್ತಿಯಿಂದ ಮತ್ತು ಹೊರಗಿನ ಕೋರ್ ಹಾಗೂ ಮ್ಯಾಂಟಲ್ನಲ್ಲಿನ ಮ್ಯಾಗ್ಮದ ಚಲನೆ ಕೂಡ ಕೋರ್ನ ತಿರುಗುವ ಮೇಲೆ ಪರಿಣಾಮ ಬೀರುತ್ತದೆ. ಹೊರಗಿನ ಮತ್ತು ಒಳಗಿನ ಕೋರ್ನ ಈ ಘರ್ಷಣೆಯಿಂದಾಗಿ ವಿದ್ಯುತ್ ಪ್ರವಾಹ(electrical currents) ಜನರೇಟ್ ಆಗುತ್ತೆ. ಇದು ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ಗೆ ಬಲ ಕೊಡುತ್ತದೆ. ಈ ಮ್ಯಾಗ್ನೆಟಿಕ್ ಫೀಲ್ಡ್ ಸೂರ್ಯನಿಂದ ಬರುವ ಹಾನಿಕಾರಕ ರೇಡಿಯೇಶನ್ನಿಂದ ಭೂಮಿಗೆ ರಕ್ಷಣೆ ಕೊಡುತ್ತದೆ. ಹೀಗಾಗಿ ಕೋರ್ನ ವೇಗವು ಮ್ಯಾಗ್ನೇಟಿಕ್ ಫೀಲ್ಡ್ ಮೇಲೆ ಎಫೆಕ್ಟ್ ಆಗೋ ಸಾಧ್ಯತೆ ಇದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಕಳೆದ ವರ್ಷ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಭೂಮಿಯ ಒಳಗಿನ ಕೋರ್ ಮೊದಲು ಭೂಮಿಗಿಂತ ವೇಗವಾಗಿ ಸುತ್ತುತ್ತಿತ್ತು, ಒಂದು ಅವಧಿಗೆ ಕೋರ್ನ ತಿರುಗುವಿಕೆ ಭೂಮಿಯ ತಿರುಗುವಿಕೆಗೆ ಹೊಂದಿಕೆಯಾಯಿತು. ನಂತರ ಅದರ ಸುತ್ತುವಿಕೆಯಲ್ಲಿ ನಿಧಾನವಾಗಿದೆ. ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಇದನ್ನು ತಿಳಿಸಲಾಗಿದೆ. ಕೋರ್ ತಿರುಗುವಿಕೆಯ ವೇಗದಲ್ಲಿನ ಬದಲಾವಣೆಗಳು 70 ವರ್ಷಗಳ ಸೈಕಲ್ಅನ್ನು ಅನುಸರಿಸುತ್ತದೆ. ಈಗ ವೇಗದಲ್ಲಿ ಆಗಿರು ವ್ಯತ್ಯಾಸ ಕೂಡ ಅದರ ಭಾಗ ಎಂದು ಭೂ ವಿಜ್ಞಾನಿ ಡಾ ಜಾನ್ ವಿಡೇಲ್( Dr John Vidale) ಹೇಳಿದ್ದಾರೆ.
ಭೂಮಿಯ ಒಳಗಿನ ಕೋರ್ನ ವೇಗದಲ್ಲಿ ಕಮ್ಮಿಯಾದ್ರೆ ಮ್ಯಾಂಟಲ್ನ ವೇಗ ಜಾಸ್ತಿಯಾಗುತ್ತದೆ. ಈ ಬದಲಾವಣೆಯು ಭೂಮಿಯು ವೇಗವಾಗಿ ಚಲಿಸುವಂತೆ ಮಾಡುತ್ತದೆ. ಇದರಿಂದ ದಿನದ ಅವಧಿಯಲ್ಲಿ ಬದಲಾಗಬಹುದು ಅಂದರೆ ಒಂದು ದಿನದ ಉದ್ದವು ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಬದಲಾವಣೆಯಾದರೂ ಕೇವಲ ಕೆಲವೇ ಸೆಕೆಂಡ್ಸ್ಗಳಲ್ಲಿ ಮಾತ್ರವೇ ಆಗುತ್ತದೆ.
ಒಳಗಿನ ಕೋರ್ನ ವೇಗದಲ್ಲಿ ಬದಲಾವಣೆ ಯಾಕೆ, ಕೋರ್ ಸಂಪೂರ್ಣವಾಗಿ ಘನವಾಗಿಲ್ಲವೇ, ಇಂಥಹ ಸಾಕಷ್ಟು ವಿಚಾರಗಳ ಬಗ್ಗೆ ಸಾಕಷ್ಟು ಕೂತುಹಲಗಳು ಇದ್ದೇ ಇದೆ. ಈ ಬಗ್ಗೆ ಇನ್ನೂ ಹಲವಾರು ಸಂಶೋಧನೆಗಳು ಮುಂದೆಯೂ ನಡೆಯುತ್ತವೆ.










