ಬಂಜೆತನ ಅನ್ನೋದು ಮಹಿಳೆ ಹಾಗೂ ಪುರುಷ ಇಬ್ಬರನ್ನೂ ಕಾಡುವಂತ ಸಮಸ್ಯೆಯಾಗಿದೆ. ಇಬ್ಬರಲ್ಲಿ ಯಾರೊಬ್ಬರಲ್ಲಿ ಬಂಜೆತನ ಕಾಣಿಸಿಕೊಂಡರೂ ಮಕ್ಕಳಾಗೋ ಸಾಧ್ಯತೆ ಕಡಿಮೆ ಇರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪುರುಷ ಬಂಜೆತನ ಹೆಚ್ಚಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಬಂಜೆತನ ಸಮಸ್ಯೆಗೆ ಕಾರಣಗಳು ಹಲವಾರು ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಕೂಡಾ ಇದಕ್ಕೆ ಮುಖ್ಯ ಕಾರಣ. ಜೀವನ ಶೈಲಿ ಸರಿಯಾಗಿರದೇ ಇದ್ದರೆ, ಆರೋಗ್ಯಕರ ನಿಯಮಗಳನ್ನ ಪಾಲಿಸದೇ ಇದ್ದರೆ ಅದರಿಂದ ಬಂಜೆತನ ಕಾಣಿಸಿಕೊಳ್ಳುತ್ತದೆ. ಅಧ್ಯಯನವೊಂದರ ಪ್ರಕಾರ, ಕೋವಿಡ್ ಸಾಂಕ್ರಾಮಿಕ ಲಾಕ್ ಡೌನ್ ಸಮಯದಲ್ಲಿ ಪುರುಷರು ಎದುರಿಸಿದ ಮಾನಸಿಕ ಮತ್ತು ಆರ್ಥಿಕ ಒತ್ತಡಗಳು ಅವರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಅಂತೆ. ಹೀಗಾಗಿ ಕೋವಿಡ್ ನಂತ್ರ ಪುರುಷ ಬಂಜೆತನ ಪ್ರಮಾಣ ಜಾಸ್ತಿ ಆಗ್ತಿದೆಯಂತೆ. ಭಾವನಾತ್ಮಕ ಯಾತನೆ, ಉದ್ಯೋಗ ನಷ್ಟ, ಸ್ಟೀರಾಯ್ಡ್ಗಳ ಅತಿಯಾದ ಸೇವನೆ, ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳೇ ಅದಕ್ಕೆ ಕಾರಣ ಎನ್ನುತ್ತಾರೆ ವೈದ್ಯರು.

ವೈದ್ಯಕೀಯ ಸಂಶೋಧನಾ ವರದಿಗಳ ಪ್ರಕಾರ, 2020ಕ್ಕಿಂತ ಮೊದಲು ಸುಮಾರು ಶೇಕಡಾ 30ರಷ್ಟು ಪುರುಷರು ನಿಮಿರುವಿಕೆ ಸಮಸ್ಯೆ ಅಂದ್ರೆ Erectile dysfunction ಅಥವಾ ದುರ್ಬಲತೆಯ ಸಮಸ್ಯೆಗಳನ್ನ ಎದುರಿಸುತ್ತಿದ್ರು. ಆದ್ರೆ ಈಗ ಈ ಪ್ರಕರಣಗಳು ದುಪ್ಪಟ್ಟಾಗಿವೆ. ಅಧ್ಯಯನದ ಪ್ರಕಾರ ವೀರ್ಯಾಣುಗಳ ಪ್ರಮಾಣ ಪ್ರತಿ ವರ್ಷ ಶೇಕಡಾ 2ರಷ್ಟು ಕಡಿಮೆಯಾಗುತ್ತಿದ್ದು, ಈ ಪ್ರಮಾಣ ಹೀಗೆಯೇ ಮುಂದುವರಿದರೆ ಮುಂದಿನ 50 ವರ್ಷಗಳಲ್ಲಿ ಸಂತಾನೋತ್ಪತ್ತಿ ಶಕ್ತಿ ಇಲ್ಲದ ಗಂಡಸರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದೆ. ಆಗ ಸಮಾಜದ ಮೇಲೆ ಈ ಪುರುಷ ಬಂಜೆತನ ಸಮಸ್ಯೆ ದೊಡ್ಡ ಪರಿಣಾಮವನ್ನೇ ಬೀರುತ್ತೇ ಎನ್ನಲಾಗ್ತಿದೆ. ಭಾರತದಲ್ಲಿ ಪ್ರತಿ 8 ದಂಪತಿಗಳಲ್ಲಿ 1 ದಂಪತಿಗಳು ಗರ್ಭಧಾರಣೆಯ ತೊಂದರೆಗಳನ್ನ ಎದುರಿಸುತ್ತಿದ್ದಾರೆ. ಈ ಹಿಂದೆ ಶೇಕಡಾ 20ರಷ್ಟಿದ್ದ ಪುರುಷರ ಬಂಜೆತನ ಪ್ರಮಾಣ ಈಗ ಶೇಕಡಾ 40ಕ್ಕೆ ಏರಿದೆ. ಸ್ಥೂಲಕಾಯತೆ, ನಿದ್ರೆಯ ಕೊರತೆ, ಮಾನಸಿಕ ಒತ್ತಡ, ಲ್ಯಾಪ್ಟಾಪ್ಗಳು ಮತ್ತು ಮೊಬೈಲ್ ಫೋನ್ಗಳ ವಿಕಿರಣ, ಸಿಗರೇಟ್, ಆಲ್ಕೋಹಾಲ್ ಮತ್ತು ಡ್ರಗ್ಗಳು ಪುರುಷರ ಫಲವತ್ತತೆ ಕುಸಿತಕ್ಕೆ ಕಾರಣ.
ಇದನ್ನೂ ಓದಿ : ಎಐ ಪಿತಾಮಹ ಜೆಫ್ರಿ ಹಿಂಟನ್ ಎಐ ಅತ್ಯಂತ ಅಪಾಯಕಾರಿ ಅಂದಿದ್ದೇಕೆ..?!
ಇನ್ನೊಂದು ಅಘಾತಕಾರಿ ಸಂಗತಿ ಎಂದರೆ, ಪುರುಷರ ಜನನೇಂದ್ರೀಯಕ್ಕೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ತೊಂದರೆ ಕಾಣಿಸಿಕೊಂಡು Genital Erectile Dysfunction ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದು ಮುಂದೆ ಸಂಭವಿಸೋ ಹೃದಯಾಘಾತದ ಮುನ್ಸೂಚನೆಯೂ ಆಗಿರುತ್ತೇ.. ಈ ಮೊದಲು ಡ್ರೈವರ್ಗಳು, ದೀರ್ಘಕಾಲ ನಿಂತು ಕೆಲಸ ಮಾಡೋ ಪುರುಷರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿತ್ತು. ಆದ್ರೆ ಈಗ ಈ ಗುಂಪಿಗೆ ಟೆಕ್ಕಿಗಳು ಸೇರ್ಪಡೆಯಾಗಿದ್ದಾರೆ. ಭಾರತದಲ್ಲಿ ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಸಿತು ಕೆಲಸ ಮಾಡೋ ಪುರುಷರಲ್ಲೇ ಬಂಜೆತನ ಸಮಸ್ಯೆ ಹೆಚ್ಚಾಗಿ ಕಂಡು ಬರ್ತಿದೆ. ಆಧುನಿಕ ಜೀವನ ಶೈಲಿಯೇ ಇದಕ್ಕೆಲ್ಲಾ ಮುಖ್ಯ ಕಾರಣ.

ಒಟ್ಟಾರೆಯಾಗಿ ಉತ್ತಮ ಜೀವನ ಶೈಲಿಯನ್ನ ರೂಢಿಸಿಕೊಂಡು, ಉತ್ತಮ ಆಹಾರ, ಒಳ್ಳೆಯ ನಿದ್ರೆ, ಮಾನಸಿಕ ನೆಮ್ಮದಿಯೊಂದಿಗೆ ಜೀವನ ಸಾಗಿಸಿದ್ರೆ ಈ ರೀತಿಯ ಸಮಸ್ಯೆಗಳಿಂದ ದೂರವಿರಬಹುದು.