ಪ್ರಸ್ತುತ ಜೀವನಶೈಲಿಯಲ್ಲಿ ರಕ್ತದೊತ್ತಡ (Blood Pressure) ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸಬೇಕಿರುವುದು ಅತೀ ಮುಖ್ಯ. ಇದಕ್ಕೆ ಬಾಳೆಹಣ್ಣು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಬಾಳೆಹಣ್ಣಿನಲ್ಲಿ ಪೊಟಾಷಿಯಂ (Potassium) ಅಧಿಕ ಪ್ರಮಾಣದಲ್ಲಿರುತ್ತದೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 422 ಮಿಲಿ ಗ್ರಾಂ ಪೊಟಾಷಿಯಂ ಇರುತ್ತದೆ. ಇದು ಬಿಪಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಿಪಿಯಲ್ಲಿ ಮುಖ್ಯವಾಗಿ ಎರಡು ಅಂಶಗಳನ್ನು ನೋಡಬೇಕು. ಸೋಡಿಯಂ – ದೇಹದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸುತ್ತದೆ. ಇದರಿಂದ ರಕ್ತದ ಗಾತ್ರ (Blood volume) ಹೆಚ್ಚಾಗಿ, ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ. ರಕ್ತದೊತ್ತಡ (Hypertension) ಉಂಟಾಗಲು ಸೋಡಿಯಂ ಕೂಡ ಒಂದು ಕಾರಣವಾಗುತ್ತದೆ. ಈ ಕಾರಣದಿಂದಲೇ ವೈದ್ಯರು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಲು ಸೂಚಿಸುತ್ತಾರೆ.

ಪೊಟಾಷಿಯಂ – ದೇಹದಲ್ಲಿನ ಹೆಚ್ಚುವರಿ ಸೋಡಿಯಂಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ರಕ್ತನಾಳಗಳನ್ನು ವಿಶ್ರಾಂತಗೊಳಿಸುತ್ತದೆ. ರಕ್ತದ ಪ್ರಸರಣ ಸುಲಭವಾಗಿ ನಡೆಯಲು ನೆರವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಸೋಡಿಯಂ ದೇಹದ ಮೇಲೆ ಒತ್ತಡ ತರುತ್ತದೆ, ಆದರೆ ಪೊಟಾಷಿಯಂ ಆ ಒತ್ತಡವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಪೊಟಾಷಿಯಂ ಹೊಂದಿರುವ ಆಹಾರ ಸೇವನೆ ಬಹಳ ಮುಖ್ಯ.

ಬಾಳೆಹಣ್ಣು ಪೊಟಾಷಿಯಂನಲ್ಲಿ ಸಮೃದ್ಧವಾಗಿರುವ ಕಾರಣ, ಇದು ಬಿಪಿ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲ, ಇದು ಬಿಪಿಗೆ ಸಂಬಂಧಿಸಿದ ಲಕ್ಷಣಗಳನ್ನೂ (Symptoms) ಕಡಿಮೆ ಮಾಡುವಲ್ಲಿಯೂ ಸಹಾಯ ಮಾಡುತ್ತದೆ. ಇದು ರಕ್ತನಾಳಗಳನ್ನು ವಿಶ್ರಾಂತಗೊಳಿಸುವ ಮೂಲಕ ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ. ತಲೆನೋವು, ಮಾನಸಿಕ ಒತ್ತಡ (Tension) ಇತ್ಯಾದಿಗಳನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಹಾಗೂ ಪೊಟಾಷಿಯಂನಿಂದ ಶಕ್ತಿ ಮಟ್ಟ (Energy level) ಹೆಚ್ಚುತ್ತದೆ. ಹೃದಯದ ಬಡಿತವನ್ನೂ ಸರಿಯಾಗಿಡಿಲು ಯತ್ನಿಸುತ್ತದೆ.
Read this also – Hypertension; ಸಡನ್ ಬಿಪಿ ಏರಿದರೆ ಕಂಟ್ರೋಲ್ ಮಾಡಲು ಹೀಗೆ ಮಾಡಿ!
ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ನಾರಿನಾಂಶ (Fiber) ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಇನ್ಸುಲಿನ್ ಸಂವೇದನಾಶೀಲತೆಯೂ ಸುಗಮಗೊಳ್ಳುತ್ತದೆ.

ನೀವೂ ಬಿಪಿಯಿಂದ ಬಳಲುತ್ತಿದ್ದರೆ ಮತ್ತು ನೈಸರ್ಗಿಕವಾಗಿ ಬಿಪಿ ನಿಯಂತ್ರಣ ಮಾಡಲು ಇಚ್ಛಿಸುತ್ತಿದ್ದರೆ, ಪ್ರತಿದಿನ ಒಂದು ಬಾಳೆಹಣ್ಣು ಸೇವಿಸಬಹುದು. ಆದರೆ ಬಾಳೆಹಣ್ಣು ಪೊಟಾಷಿಯಂ ಅಂಶ ಹೊಂದಿರುವುದರಿಂದ ಮೂತ್ರಪಿಂಡ (Kidney) ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು. ಹಾಗೆಯೇ ಬಿಪಿ ಜೊತೆಗೆ ಡಯಾಬಿಟಿಸ್ ಇದ್ದರೆ, ಸೂಕ್ಷ್ಮವಾಗಿ ಸೇವಿಸಿ, ಏಕೆಂದರೆ ಇದರಲ್ಲಿ ನೈಸರ್ಗಿಕ ಸಿಹಿ ಇರುತ್ತದೆ. ಅಥವಾ ವೈದ್ಯರ ಸಲಹೆ ಪಡೆದರೆ ಇನ್ನೂ ಉತ್ತಮ.










