ಅಸಿಡಿಟಿ(Acidity) ಸಮಸ್ಯೆ ಸಣ್ಣ ಸಮಸ್ಯೆ ಅಲ್ಲ. ಇದರಿಂದ ಉಂಟಾಗುವ ತೊಂದರೆ ಅನುಭವಿಸುವವರಿಗೇ ಗೊತ್ತು. ಎದೆ ಉರಿಯುವಂಥ ಸ್ಥಿತಿ ಉಂಟಾಗಿ, ಹೃದಯಕ್ಕೆ ಏನಾದರೂ ತೊಂದರೆ ಆಗುತ್ತಿದ್ದೆಯೇ ಎಂಬ ಭಯ ಹುಟ್ಟಿಸಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಮನೆಮದ್ದುಗಳು ಕೆಲಸ ಮಾಡುತ್ತವೆ. ಅವು ಯಾವುವು ಅನ್ನೋದು ಈ ಲೇಖನದಲ್ಲಿ ತಿಳಿಯೋಣ.
ಅಸಿಡಿಟಿ ಎನ್ನುವುದು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲ (Acid) ಆಹಾರನಾಳದ ಮೂಲಕ ಮೇಲಕ್ಕೆ ಚಲಿಸುವುದು. ಸಾಮಾನ್ಯವಾಗಿ ನಮ್ಮ ಹೊಟ್ಟೆ ಹೈಡ್ರೋಕ್ಲೋರಿಕ್ ಆಮ್ಲವನ್ನು (Hydrochloric acid) ಉತ್ಪಾದಿಸುತ್ತದೆ, ಇದು ಆಹಾರ ಜೀರ್ಣವಾಗಲು ನೆರವಾಗುತ್ತದೆ. ಆದರೆ ಈ ಆಮ್ಲ ಹೊಟ್ಟೆಯಲ್ಲೇ ಉಳಿಯಬೇಕು. ಕೆಲವೊಮ್ಮೆ ಕೆಲ ಕಾರಣಗಳಿಂದ ಈ ಆಮ್ಲ ಆಹಾರನಾಳದ ಒಳಗೆ ಹೋಗಿ ತೊಂದರೆ ಉಂಟುಮಾಡುತ್ತದೆ. ಆಹಾರನಾಳ (Esophagus) ಮತ್ತು ಹೊಟ್ಟೆ ನಡುವೆ ಲೋವರ್ ಈಸೋಫೇಗಲ್ ಸ್ಪಿಂಕ್ಟರ್ (Lower Esophageal Sphincter) ಎಂಬ ಸ್ನಾಯುವಿದೆ, ಇದು ಬಾಗಿಲು ರೀತಿ ಕಾರ್ಯನಿರ್ವಹಿಸಬೇಕು. ಈ ಸ್ನಾಯು ಸರಿಯಾಗಿ ಮುಚ್ಚಿಕೊಳ್ಳದೆ ಇದ್ದರೆ ಹೊಟ್ಟೆಯಿಂದ ಆಮ್ಲ ಆಹಾರನಾಳಕ್ಕೆ ಹೋಗಿ ಅಸಿಡಿಟಿಯ ಸಮಸ್ಯೆ ಉಂಟಾಗುತ್ತದೆ.

ಹಲವಾರು ಕಾರಣಗಳಿಂದ ಅಸಿಡಿಟಿ ಉಂಟಾಗಬಹುದು. ಹೆಚ್ಚು ಮಸಾಲೆಯುಕ್ತ ಪದಾರ್ಥ, ಎಣ್ಣೆ ಪದಾರ್ಥ ಸೇವನೆ, ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುವುದು, ಹಾಗೆ ಮಾಡಿದ ತಕ್ಷಣ ಮಲಗುವುದು, ಊಟ ತಪ್ಪಿಸುವುದು, ಮದ್ಯಪಾನ ಮತ್ತು ಧೂಮಪಾನದಿಂದ ಅಸಿಡಿಟಿ ಉಂಟಾಗುತ್ತದೆ.
ಅಸಿಡಿಟಿಯಾದರೆ ಎದೆಯ ಭಾಗದಲ್ಲಿ ಉರಿಯುವಂತಹ ಅನುಭವವಾಗುತ್ತದೆ, ಹುಳಿ ತೇಗು ಬರುತ್ತದೆ, ತಿಂದ ಆಹಾರ ಗಂಟಲಲ್ಲೇ ಉಳಿದಿರುವ ಅನುಭಾವವಾಗುತ್ತದೆ. ಇಂತಹ ಸಮಯದಲ್ಲಿ ತಕ್ಷಣ ಪರಿಹಾರ ನೀಡಬಹುದಾದ ಮನೆಮದ್ದುಗಳ ಬಗ್ಗೆ ತಿಳಿಯೋಣ.
ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾ ಪ್ರಾಕೃತಿಕ ಆಂಟ್ಯಾಸಿಡ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ಅಲ್ಕಲೈನ್ ಗುಣಲಕ್ಷಣವಿದ್ದು, ಹೊಟ್ಟೆ ಆಮ್ಲವನ್ನು ತಟಸ್ಥಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಅರ್ಧ ಚಮಚ ಬೇಕಿಂಗ್ ಸೋಡಾವನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಯುವುದರಿಂದ ಅಸಿಡಿಟಿಗೆ ತಕ್ಷಣ ಉಪಶಮನ ದೊರೆಯುತ್ತದೆ.

ಮಜ್ಜಿಗೆ
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲ (Lactic acid) ಇರುವುದರಿಂದ, ಇದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುವುದು ಹಾಗೂ ತಕ್ಷಣ ತಂಪಾದ ಅನುಭವ ನೀಡುತ್ತದೆ. ಅಸಿಡಿಟಿ ಸಮಸ್ಯೆ ಉಂಟಾದಾಗ ಮಜ್ಜಿಗೆ ಸೇವನೆ ಉತ್ತಮ ಆಯ್ಕೆಯಾಗುತ್ತದೆ. ಇದಲ್ಲದೆ, ತಣ್ಣಗಿನ ಹಾಲು ಕುಡಿಯುವುದರಿಂದಲೂ ಸಹ ಹೊಟ್ಟೆ ತಂಪಾಗಿ ಅಸಿಡಿಟಿಗೆ ಪರಿಹಾರ ಸಿಗುತ್ತದೆ. ಸಕ್ಕರೆ ಸೇರಿಸದೆ ಹಾಲು ಕುಡಿಯುವುದು ಉತ್ತಮ.
Read this also : Anemia; ರಕ್ತಹೀನತೆ ತಡೆಯಲು ಈ ಆಹಾರ ಪದಾರ್ಥಗಳನ್ನು ತಿನ್ನಿ!

ಬಾಳೆಹಣ್ಣು
ಬಾಳೆಹಣ್ಣಿನ ಪ್ರಾಕೃತಿಕ ಅಲ್ಕಲೈನ್ ಗುಣವು ಹೊಟ್ಟೆ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಇದರಲ್ಲಿ ಇರುವ ಪೊಟ್ಯಾಶಿಯಂ ಹೊಟ್ಟೆಯ pH ಸಮತೋಲನವನ್ನು ಕಾಪಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಸಿಡಿಟಿಯ ತೊಂದರೆಯಿಂದ ತಕ್ಷಣ ಪರಿಹಾರ ಪಡೆಯಲು ಬಾಳೆಹಣ್ಣು ಸೇವನೆ ಉತ್ತಮ. ಇದಕ್ಕೆ ಪರ್ಯಾಯವಾಗಿ ಪಪಾಯಾ ಹಣ್ಣನ್ನೂ ಸೇವಿಸಬಹುದು, ಇದರಲ್ಲಿ ಪಪೈನ್ ಎಂಬ ಕಿಣ್ವ ಇದ್ದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೊಟ್ಟೆ ಆಮ್ಲವನ್ನು ನಿಯಂತ್ರಿಸುತ್ತದೆ.

ತುಳಸಿ
ತುಳಸಿಯಲ್ಲಿಯೂ ಅಲ್ಕಲೈನ್ ಗುಣಲಕ್ಷಣಗಳಿದ್ದು, ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದರ ಸತ್ವಗಳು ಹೊಟ್ಟೆಯ ಮೇಲ್ಮೈಯನ್ನು ರಕ್ಷಿಸಿ ಆಹಾರನಾಳದಲ್ಲಿ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುತ್ತವೆ. ಸ್ವಚ್ಚವಾದ ತುಳಸಿ ಎಲೆಗಳನ್ನು ನೇರವಾಗಿ ಸೇವಿಸಬಹುದು ಅಥವಾ ತುಳಸಿ ಟೀ ತಯಾರಿಸಿ ಕುಡಿಯಬಹುದು.

ಈ ಮನೆಮದ್ದುಗಳ ಮೂಲಕ ಅಸಿಡಿಟಿ ಕಮ್ಮಿಯಾಗುತ್ತದೆ. ಇದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ತಡೆಯಬಹುದಾಗಿದೆ.










