ಮುಖದ ಮೇಲೆ ಬ್ಲಾಕ್‌ಹೆಡ್ಸ್ (Blackheads) ಕಂಡು ಬರುವುದು ಚರ್ಮದ ಸಹಜ ಸಮಸ್ಯೆ. ಆದರೆ ಚೆನ್ನಾಗಿ ಕಾಣಿಸಬೇಕು ಅಂತಾ ರೆಡಿಯಾದರೆ ಮುಖದಲ್ಲಿ ಈ ಕಪ್ಪುಕಲೆಗಳೇ ಹೆಚ್ಚಾಗಿ ಕಾಣಿಸಿದರೆ ಹೇಗಾಗುತ್ತೆ ಅಲ್ವಾ!? ಹೀಗಾಗಿ ಬ್ಲಾಕ್‌ಹೆಡ್ಸ್ ನ ಶುರುವಿನಲ್ಲೇ ಹೋಗಿಸಿಕೊಳ್ಳುವುದು ಒಳ್ಳೆಯದು. ಈ ಲೇಖನದನ ಮೂಲಕ ಬ್ಲಾಕ್‌ಹೆಡ್ಸ್ ಗೆ ಕಾರಣ ಮತ್ತು ಮನೆಯಲ್ಲೇ ಸುಲಭವಾಗಿ ಅದನ್ನು ಹೋಗಿಸಿಕೊಳ್ಳಲು ಪರಿಹಾರ ತಿಳಿಯೋಣ.
ಬ್ಲಾಕ್‌ಹೆಡ್ಸ್ (Blackheads) ಯಾಕೆ ಬರುತ್ತದೆ ಎಂದರೇ, ನಮ್ಮ ಮುಖದಲ್ಲಿ ಸಾಮಾನ್ಯವಾಗಿ ರಂಧ್ರಗಳಿರುತ್ತವೆ(Pores) ಅವು ನಮ್ಮ ಚರ್ಮದಲ್ಲಿ ಎಣ್ಣೆ ಮತ್ತು ಬೆವರನ್ನು ಬಿಡುಗಡೆ ಮಾಡುವಂತ ಕೆಲಸ ಮಾಡುತ್ತವೆ. ಎಣ್ಣೆ ಚರ್ಮ ಇರುವವರಿಗೆ ಈ ರಂಧ್ರಗಳು ಅಧಿಕ ಸಂಖ್ಯೆಯಲ್ಲಿರುತ್ತವೆ. ಅವರಿಗೆ ಎಣ್ಣೆ ಅಂಶ ಕೂಡ ಹೆಚ್ಚಿಗೆ ಬಿಡುಗಡೆಯಾಗುತ್ತದೆ. ಯಾವಾಗ ಜಾಸ್ತಿ ಎಣ್ಣೆ ಬಿಡುಗಡೆಯಾಗೊತ್ತೋ ಆಗ ರಂಧ್ರಗಳು ಮುಚ್ಚಿಕೊಂಡು, ಆ ರಂಧ್ರಗಳ ಒಳಗೇ ಎಣ್ಣೆ ಉಳಿದುಕೊಳ್ಳುತ್ತದೆ, ಆಮೇಲೆ ಇದೇ ಬ್ಲಾಕ್‌ಹೆಡ್ಸ್ ಆಗುವುದು. ಹಾಗೆ ಜಾಸ್ತಿ ಬೆವರುವವರಿಗೆ ರಂಧ್ರಗಳು ಯಾವಾಗಲೂ ತೆರೆದಿರುತ್ತವೆ. ಹಾಗೆ ತೆರೆದಿರುವ ರಂಧ್ರದಲ್ಲಿ ಧೂಳಿನ ಕಣಗಳು ಕೂತು, ಅದು ಮತ್ತೆ ಆಚೆ ಬಾರದಿದ್ದಾಗ ಅದೂ ಕೂಡ ಬ್ಲಾಕ್‌ಹೆಡ್ಸ್ ಆಗುತ್ತದೆ.
ಸಾಮಾನ್ಯವಾಗಿ ಮೂಗಿನ ಮೇಲೆಯೇ ಹೆಚ್ಚು ಬ್ಲಾಕ್‌ಹೆಡ್ಸ್ ಆಗುವುದು. ಇದರ ಜೊತೆಗೆ ಕೆನ್ನೆ ಭಾಗ, ಗಲ್ಲದ ಮೇಲೂ ಆಗುತ್ತದೆ. ಕೆಲವೊಬ್ಬರಿಗೆ ಹಣೆಯ ಮೇಲೂ ಬ್ಲಾಕ್‌ಹೆಡ್ಸ್ ಆಗುತ್ತದೆ. ಬ್ಲಾಕ್‌ಹೆಡ್ಸ್ ನ ಹೋಗಿಸಿಕೊಳ್ಳಲು ಆಯುರ್ವೇದ ತಜ್ಞರು ಹೇಳಿರುವ ಮನೆಮದ್ದುಗಳ ಬಗ್ಗೆ ಈಗ ತಿಳಿಯೋಣ.
ಮನೆಮದ್ದು – 1
ಮುಖಕ್ಕೆ ಎಣ್ಣೆ ಹಚ್ಚಿಕೊಂಡು ಸ್ಟೀಮ್ ತೆಗೆದುಕೊಳ್ಳುವುದು. ಮೊದಲು ಮುಖನ ತೊಳೆದು, ಶುಚಿಯಾದ ಟವೆಲ್‌ನಿಂದ ಒರೆಸಿಕೊಳ್ಳಿ. ನಂತರ ಮುಖಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಬಿಸಿ ನೀರಲ್ಲಿ ಸ್ಟೀಮ್ ತೆಗೆದುಕೊಳ್ಳಿ. ಕೊಬ್ಬರಿ ಎಣ್ಣೆಯಲ್ಲಿರುವ ಆಂಟಿಫಂಗಲ್ ಗುಣಲಕ್ಷಣಗಳು ಡೆಡ್ ಸೆಲ್ಸ್ ನ ಹೊರಗೆ ಹಾಕಲು ಸಹಾಯ ಮಾಡುತ್ತವೆ. ರಂಧ್ರಗಳು ಸರಿಯಾಗಿ ತೆರೆದುಕೊಂಡು ಅದರಲ್ಲಿರುವ ಧೂಳು ಮೃದುವಾಗಿ ಹೊರಗೆ ಬರುತ್ತದೆ. ಸ್ಟೀಮ್ ತೆಗೆದುಕೊಳ್ಳುವಾಗ ನೀರಿಗೆ ನಿಂಬೆಹಣ್ಣನ್ನು ಕತ್ತರಿಸಿ ಹಾಕಿಕೊಳ್ಳಬಹುದು.

ಮನೆಮದ್ದು – 2
ಶ್ರೀಗಂಧ ಅಥವಾ ಅಳಲೆಕಾಯಿಯನ್ನ ತೇಯ್ದು, ಅದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ತೊಳೆಯುವುದು. ಶ್ರೀಗಂಧವು ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ, ಅಂದರೆ ಚರ್ಮದ ಮೇಲ್ಪದರದಲ್ಲಿರುವ ಚರ್ಮದ ಸತ್ತ ಜೀವಕೋಶಗಳನ್ನು ಹೊರಗೆ ಹಾಕುತ್ತದೆ. ಅಳಲೆಕಾಯಿಯಂತೂ ಎಲ್ಲೇ ಕೊಳೆ ಇದ್ದರೂ ಎಳೆದುಕೊಂಡು ಹೊರಗೆ ಹಾಕುವ ಗುಣವಿದೆ ಅದಕ್ಕೆ. ಈ ಎರಡರಲ್ಲಿ ಯಾವುದಾದರೂ ಒಂದರ ಫೇಸ್‌ಪ್ಯಾಕ್ ಹಾಕಿಕೊಳ್ಳುವುದರಿಂದ ಬ್ಲಾಕ್‌ಹೆಡ್ಸ್ ನಿವಾರಣೆಯಾಗುತ್ತದೆ.

ಮನೆಮದ್ದು – 3
ಬೇಕಿಂಗ್ ಸೋಡಾ ಪೇಸ್ಟ್ಅನ್ನು ಹಚ್ಚಿಕೊಳ್ಳುವುದು. ಬೇಕಿಂಗ್ ಸೋಡಾ ನೈಸರ್ಗಿಕ ಎಕ್ಫೋಲಿಯೇಟರ್. ಅಂದರೆ ಇದು ಕೂಡ ಚರ್ಮದ ಸತ್ತ ಜೀವಕೋಶಗಳನ್ನು ಹೊರಗೆ ಹಾಕುತ್ತದೆ. ಇದರ ಜೊತೆಗೆ ಪಿಎಚ್ ಮಟ್ಟವನ್ನು ಸುಧಾರಿಸುತ್ತದೆ. ಧೂಳಿನಿಂದ ರಕ್ಷಿಸುತ್ತದೆ. ಒಂದೆರಡು ಚಮಚ ಬೇಕಿಂಗ್ ಸೋಡಾವನ್ನ ನೀರಿನೊಂದಿಗೆ ಕಲಸಿ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ಬೆಚ್ಚಗಿರುವ ನೀರಿನಿಂದ ಮುಖ ತೊಳೆಯಿರಿ.
Read this also : Premature Aging; ನಿಮ್ಮ ಚರ್ಮ ಬೇಗ ಸುಕ್ಕುಗಟ್ಟುತ್ತಿದ್ಯಾ? ತಪ್ಪಿಸಲು ಇವುಗಳನ್ನ ತಿನ್ನಿ!

ಮನೆಮದ್ದು – 4
ನಿಂಬೆರಸ, ಜೇನುತುಪ್ಪ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದು. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ರಂಧ್ರವನ್ನು ಸರಿಯಾಗಿ ತೆರೆದುಕೊಳ್ಳುವಂತೆ ಮಾಡುತ್ತದೆ, ಜೇನುತುಪ್ಪ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ, ಸಕ್ಕರೆಯು ಚರ್ಮದಲ್ಲಿರುವ ಧೂಳನ್ನು ಹೊರಗೆ ಹಾಕಲು ಸ್ಕ್ರಬ್ ರೀತಿ ಕೆಲಸ ಮಾಡುತ್ತದೆ. 1 ಚಮಚ ಜೇನುತುಪ್ಪ, 1 ಚಮಚ ನಿಂಬೆ ರಸ ಮತ್ತು 1 ಚಮಚ ಸಕ್ಕರೆ ಬೆರೆಸಿ ಈ ಮಿಶ್ರಣವನ್ನು ಬ್ಲಾಕ್‌ಹೆಡ್ಸ್ ಇರುವ ಜಾಗದಲ್ಲಿ ಹಚ್ಚಿಕೊಂಡು ಸ್ವಲ್ಪ ಸಮಯ ಮೃದುವಾಗಿ ಮಸಾಜ್ ಮಾಡಿ, 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮನೆಮದ್ದು – 5
ಟೊಮ್ಯಾಟೋ ಸ್ಲೈಸ್‌ನಿಂದ ಮಸಾಜ್ ಮಾಡುವುದು. ಟೊಮ್ಯಾಟೋದಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಅದರಲ್ಲೂ ಎಣ್ಣೆ ಚರ್ಮದವರಿಗೆ ಒಳ್ಳೆಯ ಮನೆಮದ್ದು. ಟಮೋಟೊ ಸ್ಲೈಸ್‌ನಿಂದ ಮುಖವನ್ನು ಮಸಾಜ್ ಮಾಡುವುದರಿಂದ ಧೂಳು ಮತ್ತು ಸತ್ತ ಜೀವಕೋಶಗಳು ಹೊರಗೆ ಬರುತ್ತವೆ. ಇದರ ಜೊತೆಗೆ ಮುಖದ ಹೊಳಪಿಗೂ ಸಹಾಯ ಮಾಡುತ್ತದೆ.

ನಿಮಗೂ ಬ್ಲಾಕ್‌ಹಡ್ಸ್ ಸಮಸ್ಯೆ ಇದ್ದರೆ ಈ 5 ಮನೆಮದ್ದುಗಳನ್ನು ಪ್ರಯತ್ನಿಸಿ, ಮುಖದ ಕಾಳಜಿ ಮಾಡಿಕೊಳ್ಳಿ. ಇದರ ಜೊತೆಗೆ ಮುಖದ ಸ್ವಚ್ಛತೆ ಕಾಪಾಡಿಕೊಳ್ಳಿ. ಬೆಳಗ್ಗೆ, ಸಂಜೆ ತಪ್ಪದೇ ಮುಖ ತೊಳಿಯಿರಿ. ಸೂಕ್ಷ್ಮ ಚರ್ಮ ಹೊಂದಿರುವವರು ಜೋರಾಗಿ ಉಜ್ಜಿ ತೊಳೆಯುವುದು, ಟವೆಲ್‌ನಿಂದ ಜೋರಾಗಿ ಒರೆಸಿಕೊಳ್ಳುವುದನ್ನು ಮಾಡಬೇಡಿ.










