ಕೇಂದ್ರ ಬಜೆಟ್ (Union Budget) ವೇಳೆ ಸಾಕಷ್ಟು ಅಂಶಗಳನ್ನ ಗಮನಿಸ್ತೀರಿ. ಹಾಗೆ ಹಲ್ವಾ ಸಮಾರಂಭದಲ್ಲಿ (Halwa Ceremony) ಕೇಂದ್ರ ಹಣಕಾಸು ಸಚಿವರು (Minister of Finance) ಭಾಗಿಯಾಗಿದ್ರು ಅನ್ನೋ ಸುದ್ದಿಯನ್ನೂ ಓದಿರುತ್ತೀರಿ. ಆದ್ರೆ ಹಣಕಾಸು ವಿಚಾರ ಮಾತನಾಡುವಾಗ ಮಧ್ಯದಲ್ಲಿ ಈ ಹಲ್ವಾ ಯಾಕೆ ಅಂತಾ ಅನ್ಕೊಂಡಿದ್ದೀರಾ? ಬಜೆಟ್ ಮಂಡನೆಗೆ ಮುನ್ನ ಹಲ್ವಾ ಸಮಾರಂಭ ಯಾಕೆ ಮಾಡ್ತಾರೆ ಅಂತಾ ತಿಳ್ಕೊಬೇಕಾ? ಈ ವರದಿ ಓದಿ..
ಪ್ರತಿ ಬಾರಿ ಕೇಂದ್ರ ಬಜೆಟ್ ಮಂಡಿನೆಗೆ ಕೆಲ ದಿನಗಳ ಮುನ್ನ ಹಣಕಾಸು ಸಚಿವಾಲಯವನ್ನು ಒಳಗೊಂಡಿರುವ ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ (North Block) ದೊಡ್ಡ ಕಾಡಾಯಿಯಲ್ಲಿ ಹಲ್ವಾ ಮಾಡಲಾಗುತ್ತದೆ. ಇದನ್ನ ಹಲ್ವಾ ಸಮಾರಂಭ ಅಂತಾ ಕರೀತಾರೆ. ಕೇಂದ್ರ ಹಣಕಾಸು ಸಚಿವರು ಈ ಹಲ್ವಾ ಸಮಾರಂಭದಲ್ಲಿ ಭಾಗಿಯಾಗಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಅದನ್ನ ಬಡಿಸುತ್ತಾರೆ. ಬಜೆಟ್ ಮಂಡನೆಗೆ ಮುನ್ನ ಹೀಗೆ ಹಲ್ವಾ ಕಾರ್ಯಕ್ರಮ ಮಾಡುವುದು ಒಂದು ಸಂಪ್ರದಾಯವಾಗಿದೆ.
ವಾರ್ಷಿಕ ಆಯವ್ಯಯ ತಯಾರಿಕೆಯ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಠಿಣ ಪರಿಶ್ರಮವನ್ನು ಗುರುತಿಸಿ, ಹಲ್ವಾ ನೀಡುವ ಮೂಲಕ ಅವರನ್ನು ಪ್ರಶಂಸಿಸಲಾಗುತ್ತದೆ.
ಈ ಹಲ್ವಾ ಸಮಾರಂಭ ಮಾಡೋದು ಇದೊಂದೇ ಕಾರಣಕ್ಕಾ ಅಂದ್ರೆ…? ಇಲ್ಲ, ಈ ಕಾರ್ಯಕ್ರಮದ ಮಹತ್ವ ಬೇರೆಯೇ ಇದೆ. ಕೇಂದ್ರ ಬಜೆಟ್‌ಗೆ ಮುನ್ನ ಹಲ್ವಾ ಕಾರ್ಯಕ್ರಮ ನಡೆದಿದೆ ಅಂದ್ರೆ ಅದರ ಅರ್ಥ ಬಜೆಟ್ ಮಂಡನೆಯ ಅಂತಿಮ ಹಂತದ ತಯಾರಿ ನಡೀತಿದೆ ಎಂಬುದಾಗಿರುತ್ತೆ. ಹಲ್ವಾ ಸಮಾರಂಭ ಇದನ್ನೇ ಸೂಚಿಸುತ್ತದೆ. ಜೊತೆಗೆ ಸಂಸತ್ತಿನಲ್ಲಿ ಬಜೆಟ್ ಮಂಡನೆಗೂ ಮುಂಚೆ ಅದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಕೂಡ ಇದು ಸೂಚಿಸುತ್ತದೆ.
ಹಲ್ವಾ ಸಮಾರಂಭದೊಂದಿಗೆ ಮತ್ತೊಂದು ಮುಖ್ಯವಾದ ಕಾರ್ಯ ಆರಂಭವಾಗುತ್ತದೆ. ಅದೇ “ಲಾಕ್-ಇನ್” ಪ್ರಕ್ರಿಯೆ. ಬಜೆಟ್ ತಯಾರಿಕೆಯಲ್ಲಿ ತೊಡಗಿದ್ದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಜೆಟ್ ಮಂಡನೆ ಆಗುವವರೆಗೂ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಇದನ್ನೇ “ಲಾಕ್-ಇನ್” ಪ್ರಕ್ರಿಯೆ ಅಂತಾರೆ.
ಬಜೆಟ್ ಮಂಡನೆ ಪೂರ್ಣಗೊಳ್ಳುವವರೆಗೂ ಇವರಿಗೆ ಹೊರಜಗತ್ತಿನ ಸಂಪರ್ಕವೇ ಇರೋದಿಲ್ಲ. ಬಜೆಟ್‌ಗೆ ಸಂಬಂಧಪಟ್ಟ ಯಾವುದೇ ವಿಷಯ ಸೋರಿಕೆಯಾಗದಂತೆ ನೋಡಿಕೊಳ್ಳಲು ಈ ರೀತಿ ಮಾಡಲಾಗುತ್ತದೆ. ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನಾರ್ತ್ ಬ್ಲಾಕ್ ಒಂದು ರೀತಿ ಕೋಟೆಯಾಗಿ ಪರಿವರ್ತನೆಗೊಳ್ಳುತ್ತದೆ. ಸುತ್ತಲು ಗುಪ್ತಚರರ ಕಣ್ಗಾವಲು ಸದಾ ಇರುತ್ತದೆ. ಪ್ರಬಲ ಸೈಬರ್ ಸೆಕ್ಯೂರಿಟಿ ವ್ಯವಸ್ಥೆಯೂ ಇರುತ್ತದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೊಬೈಲ್ ಫೋನ್ ಬಳಸುವ ನಿರ್ಬಂಧ ಹೇರಲಾಗಿರುತ್ತೆ. ಅವರು ತುರ್ತು ಕರೆಗೆ ಮಾತ್ರ ಸ್ಪಂದಿಸಬಹುದು. ಅಲ್ಲದೇ ಹಣಕಾಸು ಸಚಿವರು ಮಾತ್ರವೇ ಆ ಸ್ಥಳಕ್ಕೆ ಹೋಗಿ ಬರಲು ಅವಕಾಶವಿರುತ್ತದೆ.
For more articles visit GSS Media










