ಇಡೀ ವಿಶ್ವದ ಕ್ರೀಡಾಸಕ್ತರನ್ನ ಸೆಳೆಯುವ ಬಹುದೊಡ್ಡ ಕ್ರೀಡಾಕೂಟ ಎಂದರೇ ಅದು ಒಲಿಂಪಿಕ್ಸ್(Olympic Games). ಜಾಗತಿಕ ಕ್ರೀಡಾಕೂಟವಾದ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಬೇಕೆಂಬುದು ಪ್ರತಿಯೊಬ್ಬ ಕ್ರಿಡಾಪಟುವಿನ ಕನಸಾಗಿರುತ್ತೆ. ಹಾಗೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಕ್ರಿಡಾಪಟುಗಳಿಗೆ ಪದಕ ಗೆದ್ದು ತಮ್ಮ ದೇಶಕ್ಕೆ ಹೆಮ್ಮೆ ತರಬೇಕೆಂಬ ಬಹುದೊಡ್ಡ ಕನಸಿರುತ್ತೆ. ಈವರೆಗೆ ಒಲಿಂಪಿಕ್ಸ್‌ನಲ್ಲಿ ಹಲವಾರು ದೇಶಗಳು ಈ ಸಾಧನೆ ಮಾಡಿವೆ. ಅದರಲ್ಲಿ ನಮ್ಮ ಭಾರತವೂ ಒಂದು(India at the Olympics).
ಭಾರತ 1900ರಿಂದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾರತ ಈವರೆಗೆ ಗೆದ್ದಿರುವುದೇ 35 ಪದಕಗಳೇ ಆದರೂ ಭಾರತದ ಕೆಲ ದಾಖಲೆಗಳನ್ನು ಈವರೆಗೆ ಯಾವ ದೇಶವೂ ಮುರಿದಿಲ್ಲ.
ಭಾರತವು ಮೊದಲ ಬಾರಿಗೆ 1900ರಲ್ಲಿ ಪಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ಆಗ ನಾರ್ಮನ್ ಪ್ರಿಚರ್ಡ್ ಅಥ್ಲೆಟಿಕ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದಿದ್ದರು. ಆ ಮೂಲಕ ಒಲಿಂಪಿಕ್‌ನಲ್ಲಿ ಪದಕ ಗೆದ್ದ ಮೊದಲ ಏಷ್ಯಾದ ರಾಷ್ಟ್ರವಾಯಿತು ಭಾರತ.
ಭಾರತದ ಹಾಕಿ(Hockey) ತಂಡದ ದಾಖಲೆ; ಒಲಿಂಪಿಕ್ಸ್ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದಿದ್ದು 1928ರಲ್ಲಿ. ನೆದರ್‌ಲ್ಯಾಂಡ್‌ನ ಆಮ್ಸ್ಟರ್ಡ್ಯಾಮ್ ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ತನ್ನ ಸುವರ್ಣ ಯುಗವನ್ನು ಆರಂಭಿಸಿತ್ತು. ಅಲ್ಲಿಂದ 1956ರವರೆಗೆ ಅಂದರೆ 1932-ಲಾಸ್ ಎಂಜಲೀಸ್, 1936-ಬರ‍್ಲಿನ್, 1948-ಲಂಡನ್, 1952-ಹೆಲ್ಸಿಂಕಿ, 1956-ಮೆಲ್ಬ್ರೊನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ಸತತವಾಗಿ 6 ಚಿನ್ನದ ಪದಕಗಳನ್ನ ಗೆದ್ದು ಇತಿಹಾಸ ಸೃಷ್ಟಿಸಿತ್ತು. 1960ರಲ್ಲಿ ರೋಮ್‌ನ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಬಳಿಕ 1964ರಲ್ಲಿ ಟೊಕ್ಯೊ ಒಲಿಂಪಿಕ್ಸ್‌ನಲ್ಲಿ ಮತ್ತೆ ಭಾರತ ಹಾಕಿ ತಂಡ ಚಿನ್ನದ ಪದಕ ಗೆದ್ದಿತ್ತು. ಆದರೆ 1968ರಲ್ಲಿ ಮೆಕ್ಸೀಕೋ ಸಿಟಿ ಮತ್ತು 1972ರಲ್ಲಿ ಮುನಿಚ್‌ನಲ್ಲಿ ನಡೆದ ಒಲಿಂಪಿಕ್ಸ್ಗಳಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯ್ತು. ಬಳಿಕ 1980ರಲ್ಲಿ ಮಾಸ್ಕೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಮತ್ತೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿತ್ತು. ಅಂದರೆ ಈವರೆಗೆ ಒಲಿಂಪಿಕ್ಸ್ನ ಪುರುಷರ ಹಾಕಿ ವಿಭಾಗದಲ್ಲಿ ಅಧಿಕ ಬಾರಿ ಚಿನ್ನದ ಪದಕ ಗೆದ್ದಿರುವ ರಾಷ್ಟçವೆಂದರೆ ಅದು ಭಾರತ. ಭಾರತದ ಈ ದಾಖಲೆಯನ್ನು ವಿಶ್ವದ ಯಾವ ದೇಶವೂ ಈವರೆಗೆ ಮುರಿದಿಲ್ಲ.
1928ರಿಂದ 1980ರವರೆಗೆ ಭಾರತದ ಹಾಕಿ ತಂಡ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ್ರೂ ಅದಾದ ನಂತರ ತನ್ನದೇ ದಾಖಲೆಯನ್ನು ಮುಂದುವರೆಸುವಲ್ಲಿ ಭಾರತ ವಿಫಲವಾಯಿತು. 1980 ನಂತರ ಭಾರತದ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಮತ್ತೆ ಪದಕ ಗೆಲ್ಲಲು ಬರೋಬ್ಬರಿ 40 ವರ್ಷಗಳನ್ನು ತೆಗೆದುಕೊಂಡಿತು. 2020ರಲ್ಲಿ ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕ ಗೆದ್ದಿತು.
ಭಾರತ ಈವರೆಗೆ ಗೆದ್ದಿರುವ ಚಿನ್ನದ ಪದಕಗಳು; ಭಾರತ ಈವರೆಗೆ ಒಲಿಂಪಿಕ್ಸ್ನಲ್ಲಿ ಒಟ್ಟು 35 ಪದಕಗಳನ್ನು ಗೆದ್ದಿದೆ. ಇದರಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚು ಪದಕಗಳನ್ನ ಒಳಗೊಂಡಿದೆ. 10 ಚಿನ್ನದ ಪದಕಗಳಲ್ಲಿ 8 ಪದಕಗಳು ಹಾಕಿ ತಂಡವೇ ಗೆದ್ದಿದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರ ಚಿನ್ನದ ಪದಕ ಗೆದ್ದರು. ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಸಾಧನೆ ಮಾಡಿದ್ದು ಇದೇ ಕೂಟದಲ್ಲಿ. 2020ರ ಟೊಕ್ಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಸುವರ್ಣ ಪದಕ ಗೆದ್ದು ದಾಖಲೆ ಬರೆದಿದ್ದರು. https://olympics.com/en/news/india-olympics-medals
For more articles visit GSS Media
ಭಾರತ ಈವರೆಗೆ ಗೆದ್ದಿರುವ ಬೆಳ್ಳಿ ಪದಕಗಳು; ಭಾರತ ಗೆದ್ದಿರುವ 9 ಬೆಳ್ಳಿ ಪದಕಗಳೆಂದರೆ, 1900ರಲ್ಲಿ ನಾರ್ಮನ್ ಪ್ರಿಚರ್ಡ್ ಗೆದ್ದ 2 ಪದಕ, 1960ರಲ್ಲಿ ಹಾಕಿ ತಂಡದ ಬೆಳ್ಳಿ ಪದಕ ಹೊರತು ಪಡಿಸಿ, ಇನ್ನುಳಿದ 6 ಬೆಳ್ಳಿ ಪದಕಗಳೆಂದರೆ, 2004ರಲ್ಲಿ ಅಥೆನ್ಸ್ನಲ್ಲಿ ನಡೆದ ಒಲಿಂಪಿಕ್ಸ್ನ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋರ್, 2012ರ ಲಂಡನ್ ಒಲಿಂಪಿಕ್ಸ್ನ ಪುರುಷರ 66 ಕೆಜಿ ಕುಸ್ತಿ ವಿಭಾಗದಲ್ಲಿ ಸುಶೀಲ್ ಕುಮಾರ್, ಅದೇ ವರ್ಷ ಪುರುಷರ 25 ಮೀಟರ್ ರ‍್ಯಾಪಿಡ್ ಪಿಸ್ತೂಲ್ ಶೂಟಿಂಗ್‌ನಲ್ಲಿ ವಿಜಯ್ ಕುಮಾರ್ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಸಿಂಗಲ್ ಬ್ಯಾಡ್ಮಿಂಟನ್‌ಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದರು. ಆ ಮೂಲಕ ಸಿಂಧು ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಶಟ್ಲರ್ ಎನಿಸಿಕೊಂಡರು. 2020ರ ಟೊಕ್ಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ಅದೇ ವರ್ಷ ಪುರುಷರ 57 ಕೆಜಿ ಕುಸ್ತಿ ವಿಭಾಗದಲ್ಲಿ ರವಿ ಕುಮಾರ್ ದಹಿಯಾ ಬೆಳ್ಳಿ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದರು.
ಭಾರತ ಈವರೆಗೆ ಗೆದ್ದಿರುವ ಕಂಚಿನ ಪದಕಗಳು; ಚಿನ್ನ ಮತ್ತು ಬೆಳ್ಳಿಯ ಜೊತೆಗೆ ಭಾರತ ಈವರೆಗೆ 16 ಕಂಚಿನ ಪದಕಗಳನ್ನು ಗೆದ್ದಿದೆ. 1952ರಲ್ಲಿ ಮಹಾರಾಷ್ಟ್ರದ ಖಾಸಾಬಾ ದಾದಾ ಸಾಹೆಬ್ ಜಾಧವ್ ಕುಸ್ತಿಯ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿಗೆ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಇನ್ನು ಹಾಕಿ ತಂಡ ಈವರೆಗೆ ಮೂರು ಬಾರಿ ಕಂಚಿನ ಪದಕ ಗೆದ್ದಿದೆ. ಇನ್ನು 1996ರಲ್ಲಿ ಅಟ್ಲಾಂಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್ ಪೇಸ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಕಂಚು ಜಯಿಸಿದ್ದರು. ಟೆನಿಸ್ ವಿಭಾಗಕ್ಕೆ ಸಿಕ್ಕ ಮೊದಲ ಪದಕ ಅದಾಗಿತ್ತು. 2000ದಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್ನ 69 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾದರು.
ಇನ್ನು 2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಪುರುಷರ ಮಿಡಲ್‌ವೇಟ್ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್, ಅದೇ ವರ್ಷ ಪುರುಷರ 66 ಕೆಜಿ ಕುಸ್ತಿ ವಿಭಾಗದಲ್ಲಿ ಸುಹೀಲ್ ಕುಮಾರ್, ಹಾಗೆ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಸಿಂಗಲ್ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್, ಮಹಿಳೆಯರ ಫ್ಲೈವೇಟ್ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್, ಪುರುಷರ 60 ಕೆಜಿ ಕುಸ್ತಿಯಲ್ಲಿ ಯೋಗೇಶ್ವರ್ ದತ್, ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಗಗನ್ ನಾರಂಗ್, ಉಳಿದಂತೆ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಮಹಿಳೆಯ 58 ಕೆಜಿ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 2020ರ ಟೊಕ್ಯೊ ಒಲಂಪಿಕ್ಸ್ನಲ್ಲಿ ಮಹಿಳೆಯರ ಸಿಂಗಲ್ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಪುರುಷರ 65 ಕೆಜಿ ಕುಸ್ತಿ ವಿಭಾಗದಲ್ಲಿ ಬಜರಂಗ್ ಪುನಿಯಾ, ಮಹಿಳೆಯ ವೆಲ್ಟರ್‌ವೇಟ್ ಬಾಕ್ಸಿಂಗ್‌ನಲ್ಲಿ ಲೋವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದು ಭಾರತಕ್ಕೆ ಹಮ್ಮೆ ತಂದಿದ್ದರು. ಇದೀಗ 2024ರ ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಭಾರತ ಹೆಚ್ಚು ಪದಕ ಗೆದ್ದು ಬರಲಿ ಎಂಬುದು ಭಾರತೀಯರ ಆಶಯ. https://olympics.com/en/paris-2024
| ಕ್ರೀಡಾಪಟು | ಪದಕ | ಕ್ರೀಡೆ | ಒಲಿಂಪಿಕ್ಸ್ |
| ನಾರ್ಮನ್ ಪ್ರಿಚರ್ಡ್ | ಬೆಳ್ಳಿ | ಪುರುಷರ 200ಮೀ ಅಥ್ಲೇಟ್ | ಪ್ಯಾರಿಸ್- 1900 |
| ನಾರ್ಮನ್ ಪ್ರಿಚರ್ಡ್ | ಬೆಳ್ಳಿ | ಪುರುಷರ 200 ಮೀ ಹರ್ಡಲ್ಸ್ | ಪ್ಯಾರಿಸ್- 1900 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಆಂಸ್ಟರ್ಡ್ಯಾಮ್- 1928 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಲಾಸ್ ಏಂಜಲೀಸ್- 1932 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಬರ‍್ಲಿನ್- 1936 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಲಂಡನ್- 1948 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಹೆಲ್ಸಿಂಕಿ- 1952 |
| ಕೆಡಿ ಜಾಧವ್ | ಕಂಚು | ಪುರುಷರ ಬಾಂಟಮ್‌ವೇಟ್ ಕುಸ್ತಿ | ಹೆಲ್ಸಿಂಕಿ- 1952 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಮೆಲ್ಬೋರ್ನ್- 1956 |
| ಭಾರತೀಯ ಹಾಕಿ ತಂಡ | ಬೆಳ್ಳಿ | ಪುರುಷರ ಹಾಕಿ | ರೋಮ್- 1960 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಟೋಕಿಯೊ- 1964 |
| ಭಾರತೀಯ ಹಾಕಿ ತಂಡ | ಕಂಚು | ಪುರುಷರ ಹಾಕಿ | ಮೆಕ್ಸಿಕೋ ಸಿಟಿ- 1968 |
| ಭಾರತೀಯ ಹಾಕಿ ತಂಡ | ಕಂಚು | ಪುರುಷರ ಹಾಕಿ | ಮ್ಯೂನಿಚ್- 1972 |
| ಭಾರತೀಯ ಹಾಕಿ ತಂಡ | ಚಿನ್ನ | ಪುರುಷರ ಹಾಕಿ | ಮಾಸ್ಕೋ- 1980 |
| ಲಿಯಾಂಡರ್ ಪೇಸ್ | ಕಂಚು | ಪುರುಷರ ಸಿಂಗಲ್ಸ್ ಟೆನಿಸ್ | ಅಟ್ಲಾಂಟಾ- 1996 |
| ಕರ್ಣಂ ಮಲ್ಲೇಶ್ವರಿ | ಕಂಚು | ಮಹಿಳೆಯರ 54 ಕೆಜಿ ವೇಟ್ಲಿಫ್ಟಿಂಗ್ | ಸಿಡ್ನಿ- 2000 |
| ರಾಜ್ಯವರ್ಧನ್ ಸಿಂಗ್ ರಾಥೋಡ್ | ಬೆಳ್ಳಿ | ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ | ಅಥೆನ್ಸ್- 2004 |
| ಅಭಿನವ್ ಬಿಂದ್ರಾ | ಚಿನ್ನ | ಪುರುಷರ 10 ಮೀ ಏರ್ ರೈಫಲ್ ಶೂಟಿಂಗ್ | ಬೀಜಿಂಗ್- 2008 |
| ವಿಜೇಂದರ್ ಸಿಂಗ್ | ಕಂಚು | ಪುರುಷರ ಮಧ್ಯಮ ತೂಕದ ಬಾಕ್ಸಿಂಗ್ | ಬೀಜಿಂಗ್- 2008 |
| ಸುಶೀಲ್ ಕುಮಾರ್ | ಕಂಚು | ಪುರುಷರ 66 ಕೆಜಿ ಕುಸ್ತಿ | ಬೀಜಿಂಗ್- 2008 |
| ಸುಶೀಲ್ ಕುಮಾರ್ | ಬೆಳ್ಳಿ | ಪುರುಷರ 66 ಕೆಜಿ ಕುಸ್ತಿ | ಲಂಡನ್- 2012 |
| ವಿಜಯ್ ಕುಮಾರ್ | ಬೆಳ್ಳಿ | ಪುರುಷರ 25 ಮೀ ರ್ಯಾಪಿಡ್ ಪಿಸ್ತೂಲ್ ಶೂಟಿಂಗ್ | ಲಂಡನ್- 2012 |
| ಸೈನಾ ನೆಹ್ವಾಲ್ | ಕಂಚು | ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ | ಲಂಡನ್- 2012 |
| ಮೇರಿ ಕೋಮ್ | ಕಂಚು | ಮಹಿಳೆಯರ ಫ್ಲೈವೇಟ್ ಬಾಕ್ಸಿಂಗ್ | ಲಂಡನ್- 2012 |
| ಯೋಗೇಶ್ವರ್ ದತ್ | ಕಂಚು | ಪುರುಷರ 60 ಕೆಜಿ ಕುಸ್ತಿ | ಲಂಡನ್- 2012 |
| ಗಗನ್ ನಾರಂಗ್ | ಕಂಚು | 10 ಮೀ ಏರ್ ರೈಫಲ್ ಶೂಟಿಂಗ್ | ಲಂಡನ್- 2012 |
| ಪಿವಿ ಸಿಂಧು | ಬೆಳ್ಳಿ | ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ | ರಿಯೊ- 2016 |
| ಸಾಕ್ಷಿ ಮಲಿಕ್ | ಕಂಚು | ಮಹಿಳೆಯರ 58 ಕೆಜಿ ಕುಸ್ತಿ | ರಿಯೊ- 2016 |
| ಮೀರಾಬಾಯಿ ಚಾನು | ಬೆಳ್ಳಿ | ಮಹಿಳೆಯರ 49 ಕೆಜಿ ವೇಟ್ಲಿಫ್ಟಿಂಗ್ | ಟೋಕಿಯೊ- 2020 |
| ಲೊವ್ಲಿನಾ ಬೊರ್ಗೊಹೈನ್ | ಕಂಚು | ಮಹಿಳೆಯರ ವೆಲ್ಟರ್‌ವೇಟ್ ಬಾಕ್ಸಿಂಗ್ | ಟೋಕಿಯೊ- 2020 |
| ಪಿವಿ ಸಿಂಧು | ಕಂಚು | ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ | ಟೋಕಿಯೊ- 2020 |
| ರವಿ ಕುಮಾರ್ ದಹಿಯಾ | ಬೆಳ್ಳಿ | ಪುರುಷರ 57 ಕೆಜಿ ಕುಸ್ತಿ | ಟೋಕಿಯೊ- 2020 |
| ಭಾರತೀಯ ಹಾಕಿ ತಂಡ | ಕಂಚು | ಪುರುಷರ ಹಾಕಿ | ಟೋಕಿಯೊ- 2020 |
| ಬಜರಂಗ್ ಪುನಿಯಾ | ಕಂಚು | ಪುರುಷರ 65 ಕೆಜಿ ಕುಸ್ತಿ | ಟೋಕಿಯೊ- 2020 |
| ನೀರಜ್ ಚೋಪ್ರಾ | ಚಿನ್ನ | ಪುರುಷರ ಜಾವೆಲಿನ್ ಥ್ರೋ | ಟೋಕಿಯೊ- 2020 |










